ಲಖನೌ: ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಗೆ ಸೋಲುವ ಭೀತಿ ಎದುರಾಗಿದೆ. ಈ ಕಾರಣಕ್ಕೆ ಸಮಾಜವಾದಿ ಪಕ್ಷದ (ಎಸ್‌ಪಿ) ನಾಯಕರ ಮನೆ ಮೇಲೆ ಆದಾಯ ತೆರಿಗೆ ಇಲಾಖೆಯಿಂದ (ಐಟಿ) ದಾಳಿ ನಡೆಯುತ್ತಿದೆ ಎಂದು ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಹೇಳಿದ್ದಾರೆ.
ರಾಯ್‌ಬರೇಲಿಯಲ್ಲಿ ಮಾತನಾಡಿದ ಅವರು, ‘ಬಿಜೆಪಿಗೆ ಚುನಾವಣೆ ಸೋಲಿನ ಭಯ ಎದುರಾಗಿದೆ. ಈಗ ಐಟಿ ದಾಳಿ ಮಾಡಿಸುತ್ತಿದ್ದಾರೆ. ಬಳಿಕ ಜಾರಿ ನಿರ್ದೇಶನಾಲಯ (ಇ.ಡಿ), ಸಿಬಿಐ ದಾಳಿ ನಡೆಸಬಹುದು. ಇದಕ್ಕೂ ಮುನ್ನ ಯಾಕೆ ಈ ದಾಳಿಗಳು ನಡೆದಿಲ್ಲ? ಚುನಾವಣೆ ಸಮೀಪಿಸಿದಾಗಲೇ ಯಾಕೆ? ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಸೆಣಸಲು ಐಟಿ ಇಲಾಖೆಯೂ ಮುಂದಾಗಿದೆ. ಚುನಾವಣೆಯಲ್ಲಿ ಬಿಜೆಪಿಗೆ ಹೀನಾಯ ಸೋಲಾಗಲಿದೆ’ ಎಂದು ಹೇಳಿದ್ದಾರೆ.
ಉತ್ತರ ಪ್ರದೇಶದ ಹಲವೆಡೆ ಅಖಿಲೇಶ್ ಅವರ ಕೆಲವು ಆಪ್ತ ನಾಯಕರ ಮನೆಗಳ ಮೇಲೆ ಶನಿವಾರ ಐಟಿ ದಾಳಿ ನಡೆದಿದೆ.
ಸಮಾಜವಾದಿ ಪಕ್ಷದ ವಕ್ತಾರ ರಾಜೀವ್ ರೈ, ಅಖಿಲೇಶ್ ಅವರ ವೈಯಕ್ತಿಕ ಕಾರ್ಯದರ್ಶಿ ಜೈನೇಂದ್ರ ಯಾದವ್ ಹಾಗೂ ಮತ್ತೊಬ್ಬ ನಾಯಕ ಮನೋಜ್ ಯಾದವ್ ಮನೆ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.