ADVERTISEMENT

ಭಾರತದಲ್ಲಿ ಧಾರ್ಮಿಕ ಸ್ವಾತಂತ್ರ್ಯ ಕುರಿತು ಅಮೆರಿಕದ ವರದಿ

ಅಲ್ಪಸಂಖ್ಯಾತರ ಮನೆಗಳ ಧ್ವಂಸ ಪ್ರಕರಣ ಹೆಚ್ಚಳ

ಪಿಟಿಐ
Published 27 ಜೂನ್ 2024, 14:39 IST
Last Updated 27 ಜೂನ್ 2024, 14:39 IST
ಆ್ಯಂಟನಿ ಬ್ಲಿಂಕೆನ್
ಆ್ಯಂಟನಿ ಬ್ಲಿಂಕೆನ್   

ವಾಷಿಂಗ್ಟನ್: ಭಾರತದಲ್ಲಿ ಮತಾಂತರ ವಿರೋಧಿ ಕಾನೂನುಗಳು, ದ್ವೇಷ ಭಾಷಣ ಮತ್ತು ಅಲ್ಪಸಂಖ್ಯಾತ ಸಮುದಾಯದವರ ಮನೆಗಳು ಹಾಗೂ ಪ್ರಾರ್ಥನಾ ಸ್ಥಳಗಳನ್ನು ಧ್ವಂಸಗೊಳಿಸುವ ಪ್ರಕರಣಗಳು ‘ಆತಂಕಕಾರಿ ಪ್ರಮಾಣದಲ್ಲಿ ಹೆಚ್ಚಳ’ವಾಗಿದೆ ಎಂದು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಆ್ಯಂಟನಿ ಬ್ಲಿಂಕೆನ್ ಹೇಳಿದ್ದಾರೆ.

ಅಮೆರಿಕದ ವಿದೇಶಾಂಗ ಸಚಿವಾಲಯವು ವಿಶ್ವದ ವಿವಿಧ ದೇಶಗಳಲ್ಲಿನ ಧಾರ್ಮಿಕ ಸ್ವಾತಂತ್ರ್ಯಕ್ಕೆ ಸಂಬಂಧಿಸಿದ ತನ್ನ ವರದಿಯನ್ನು ಬುಧವಾರ ಬಿಡುಗಡೆಗೊಳಿಸಿದ್ದು, ಭಾರತದ ಕುರಿತ ವರದಿಯನ್ನು ಉಲ್ಲೇಖಿಸಿ ಬ್ಲಿಂಕೆನ್‌ ಹೇಳಿಕೆ ನೀಡಿದ್ದಾರೆ.

‘ವಿಶ್ವದಾದ್ಯಂತ ಜನರು ತಮ್ಮ ಧಾರ್ಮಿಕ ಸ್ವಾತಂತ್ರ್ಯವನ್ನು ರಕ್ಷಿಸಲು ಹೋರಾಟ ನಡೆಸುತ್ತಿದ್ದಾರೆ’ ಎಂದೂ ಅವರು ತಿಳಿಸಿದ್ದಾರೆ.

ADVERTISEMENT

ಧಾರ್ಮಿಕ ಸ್ವಾತಂತ್ರ್ಯದ ವಿಚಾರದಲ್ಲಿ ಭಾರತದಲ್ಲಿ ಆಗುತ್ತಿರುವ ಬೆಳವಣಿಗೆಗಳ ಬಗ್ಗೆ ಅಮೆರಿಕದ ಅಧಿಕಾರಿಗಳು 2023ರಲ್ಲಿ ಹಲವು ಸಲ ತಮ್ಮ ಕಳವಳ ವ್ಯಕ್ತಪಡಿಸಿದ್ದಾರೆ ಎಂಬುದನ್ನು ವರದಿಯಲ್ಲಿ ಉಲ್ಲೇಖಿಸಲಾಗಿದೆ.

‘ಭಾರತದ 28 ರಾಜ್ಯಗಳ ಪೈಕಿ ಹತ್ತು ರಾಜ್ಯಗಳಲ್ಲಿ ಮತಾಂತರ ನಿಷೇಧ ಕಾನೂನು ಜಾರಿಯಲ್ಲಿದೆ. ಕೆಲವು ರಾಜ್ಯಗಳಲ್ಲಿ ಮದುವೆಯ ಉದ್ದೇಶಕ್ಕಾಗಿ ಬಲವಂತದ ಮತಾಂತರ ಮಾಡಿದರೆ ದಂಡ ವಿಧಿಸಲಾಗುತ್ತದೆ’ ಎಂದು ವರದಿ ತಿಳಿಸಿದೆ.

‘ಮತಾಂತರ ನಿಷೇಧ ಕಾನೂನಿನಡಿ ಕ್ರೈಸ್ತರು ಮತ್ತು ಮುಸ್ಲಿಮರನ್ನು ಬಂಧಿಸಲಾಗಿದೆ. ಧಾರ್ಮಿಕ ಅಲ್ಪಸಂಖ್ಯಾತರ ಮೇಲೆ ಸುಳ್ಳು ಆರೋಪ ಹೊರಿಸಿ ಅವರನ್ನು ಜೈಲಿಗಟ್ಟಲು ಈ ಕಾನೂನನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತದೆ ಎಂಬ ಆರೋಪಗಳೂ ಇವೆ’ ಎಂದು ಹೇಳಿದೆ.

ಪ್ರಧಾನಿ ನರೇಂದ್ರ ಮೋದಿ ಅವರು ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಜಾರಿಗೊಳಿಸುವುದನ್ನು ಪುನರುಚ್ಚರಿಸುತ್ತಲೇ ಇದ್ದಾರೆ. ಯುಸಿಸಿ ಜಾರಿಗೊಳಿಸುವುದು ಭಾರತವನ್ನು ‘ಹಿಂದೂ ರಾಷ್ಟ್ರ’ ಆಗಿ ಪರಿವರ್ತಿಸುವ ಯೋಜನೆಯ ಭಾಗವಾಗಿದೆ ಎಂದು ಮುಸ್ಲಿಂ, ಸಿಖ್, ಕ್ರೈಸ್ತ ಮತ್ತು ಬುಡಕಟ್ಟು ಸಮುದಾಯಗಳ ಮುಖಂಡರು ಆರೋಪಿಸಿದ್ದಾರೆ ಎಂದು ವರದಿ ತಿಳಿಸಿದೆ.

ಮಾನವ ಹಕ್ಕುಗಳಿಗೆ ಸಂಬಂಧಿಸಿದಂತೆ ಅಮೆರಿಕದ ವಿದೇಶಾಂಗ ಸಚಿವಾಲಯವು ಈ ಹಿಂದೆ ಬಿಡುಗಡೆ ಮಾಡಿದ್ದ ವರದಿಯನ್ನು ಭಾರತವು ತಿರಸ್ಕರಿಸಿತ್ತು. ವರದಿಯು ‘ಸುಳ್ಳು ಮಾಹಿತಿ ಮತ್ತು ತಪ್ಪು ತಿಳುವಳಿಕೆ’ಯಿಂದ ಕೂಡಿದೆ ಎಂದಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.