ನವದೆಹಲಿ: ಆಗಸ್ಟ್ 15ರ ಸ್ವಾತಂತ್ರ್ಯೋತ್ಸವದಂದು ಪ್ರಧಾನಿ ನರೇಂದ್ರ ಮೋದಿಯವರು ದೇಶವನ್ನುದ್ದೇಶಿಸಿ ಭಾಷಣ ಮಾಡುವ ದೆಹಲಿಯ ಕೆಂಪುಕೋಟೆಯಲ್ಲಿ ಬಿಗಿ ಭದ್ರತೆಯನ್ನು ಕೈಗೊಳ್ಳಲಾಗಿದೆ. ಒಂದು ಸಾವಿರ ಫೇಶಿಯಲ್ ರೆಕಗ್ನಿಷನ್ ಕ್ಯಾಮೆರಾಗಳು, ಆ್ಯಂಟಿ ಡ್ರೋನ್ ವ್ಯವಸ್ಥೆ ಅಳವಡಿಸಲಾಗಿದ್ದು, 10 ಸಾವಿರಕ್ಕೂ ಅಧಿಕ ಪೊಲೀಸರನ್ನು ನಿಯೋಜಿಸಲಾಗಿದೆ.
ರಾಷ್ಟ್ರ ರಾಜಧಾನಿಯಲ್ಲಿ ನಡೆಯುವ ಸಮಾರಂಭದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನ ಸೇರುವ ನಿರೀಕ್ಷೆ ಇದ್ದು, ಅದಕ್ಕೆ ಬೇಕಾದ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ. ಎರಡು ವರ್ಷಗಳ ಬಳಿಕ ಕೋವಿಡ್ ನಿರ್ಬಂಧಗಳನ್ನು ತೆಗೆದುಹಾಕಲಾಗಿದೆ.
ಕೆಲ ದಿನಗಳ ಹಿಂದಷ್ಟೇ ಹರಿಯಾಣದ ನೂಹ್ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ನಡೆದ ಹಿಂಸಾಚಾರದಿಂದಾಗಿ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ.
ಈ ಬಗ್ಗೆ ಮಾಹಿತಿ ಹಂಚಿಕೊಂಡಿರುವ ಕಾನೂನು ಸುವ್ಯವಸ್ಥೆಯ ವಿಶೇಷ ಆಯುಕ್ತ ದೀಪೇಂದ್ರ ಪಾಠಕ್, ‘ಈ ಬಾರಿ ಸ್ವಾತಂತ್ರ್ಯ ದಿನಾಚರಣೆಯನ್ನು ಭಾರಿ ಉತ್ಸಾಹದಿಂದ ಆಚರಿಸಲಾಗುತ್ತದೆ. ಸ್ಥಳದಲ್ಲಿ ಯಾವುದೇ ಕೋವಿಡ್ 19 ನಿರ್ಬಂಧಗಳು ಇರುವುದಿಲ್ಲ’ ಎಂದು ಹೇಳಿದ್ದಾರೆ.
‘ಸ್ಥಳದಲ್ಲಿ ಅಗತ್ಯ ಸಂಖ್ಯೆಯ ಪೊಲೀಸರನ್ನು ನಿಯೋಜಿಸಲಾಗುವುದು. ಭದ್ರತೆ ಒದಗಿಸುವ ಇತರೆ ಏಜೆನ್ಸಿಗಳ ಜತೆಗೆ ಕ್ಷಣ ಕ್ಷಣದ ಮಾಹಿತಿ ಹಂಚಿಕೊಳ್ಳುವ ವ್ಯವಸ್ಥೆ ಕೂಡ ಮಾಡಲಾಗಿದೆ. ಭದ್ರತೆಗಾಗಿ ತಂತ್ರಜ್ಞಾನವನ್ನು ಬಳಸಲಾಗುತ್ತದೆ. ಈ ಬಗ್ಗೆ ಎಲ್ಲಾ ತಾಲೀಮು ಈಗಾಗಲೇ ನಡೆದಿದೆ’ ಎಂದು ಅವರು ನುಡಿದಿದ್ದಾರೆ.
ಕೆಂಪುಕೋಟೆಯ ಎದುರಿನಲ್ಲಿರುವ ಜ್ಞಾನಪಥವನ್ನು ಹೂವುಗಳಿಂದ ಸಿಂಗರಿಸಲಾಗುತ್ತದೆ. ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯ ಫಲಾನುಭವಿಗಳು ಸೇರಿ 1,800 ವಿಶೇಷ ಅತಿಥಿಗಳನ್ನು ಸರ್ಕಾರ ಆಹ್ವಾನಿಸಿದೆ. ನಾಗರಿಕರು ಹಾಗೂ ಅಧಿಕಾರಿಗಳು ಸೇರಿ 20 ಸಾವಿರಕ್ಕೂ ಅಧಿಕ ಮಂದಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ನಿರೀಕ್ಷೆ ಇದೆ.
ಭದ್ರತಾ ದೃಷ್ಠಿಯಿಂದ ಹಾಗೂ ವಿವಿಐಪಿಗಳ ಸಂಚಾರದ ಬಗ್ಗೆ ನಿಗಾ ವಹಿಸಲು ಕೆಂಪುಕೋಟೆಯ ಸುತ್ತಮುತ್ತ ಫೇಶಿಯಲ್ ರೆಕಗ್ನಿಷನ್ ಹಾಗೂ ವಿಡಿಯೊ ವಿಶ್ಲೇಷಣಾತ್ಮಕ 1,000 ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಕೆಂಪುಕೋಟೆಯಲ್ಲಿ ಆ್ಯಂಟಿ ಡ್ರೋನ್ ವ್ಯವಸ್ಥೆಯನ್ನೂ ಮಾಡಿಕೊಳ್ಳಲಾಗಿದೆ.
ಏರ್ ಡಿಫೆನ್ಸ್ ಗನ್ ಸಹಿತ ಉಗ್ರ ವಿರೋಧಿ ಕ್ರಮಗಳನ್ನೂ ಕೈಗೊಳ್ಳಲಾಗಿದೆ. ಪ್ರಧಾನ ಮಂತ್ರಿ ಹಾಗೂ ವಿವಿಐಪಿಗಳ ಭದ್ರತೆಗೆ ಆಯಕಟ್ಟಿನ ಸ್ಥಳಗಳಲ್ಲಿ ಡಿಫೆನ್ಸ್ ಗನ್, ಸ್ವಾಟ್ ಕಮಾಂಡ್ ಹಾಗೂ ಶಾರ್ಪ್ ಶೂಟರ್‌ಗಳನ್ನು ನಿಯೋಜಿಸಲಾಗಿದೆ.
ಯಾವುದೇ ಅಹಿತಕರ ಘಟನೆ ನಡೆಯದಂತೆ ಸಿಬ್ಬಂದಿಗಳು ಹೈ ಅಲರ್ಟ್‌ನಲ್ಲಿ ಇರುವಂತೆ ಸೂಚಿಸಲಾಗಿದೆ. ಗುಪ್ತಚರ ಇಲಾಖೆಯಿಂದ ಬಂದ ಮಾಹಿತಿಯ ಆಧಾರದಲ್ಲಿ ಗಸ್ತು ತಿರುಗುವಿಕೆ ಹಾಗೂ ಹೆಚ್ಚಿನ ತುಕಡಿಗಳನ್ನು ನಿಯೋಜಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ದೆಹಲಿಯ ಗಡಿಗಳಲ್ಲಿ ಕಠಿಣ ತಪಾಸಣೆ ನಡೆಸುತ್ತಿರುವ ಪೊಲೀಸರು ಪೊಲೀಸರು ಕಾನೂನು ಸುವ್ಯವಸ್ಥೆಗೆ ಭಂಗ ತರುವವರ ವಿರುದ್ಧ ಕಠಿಣ ಕ್ರಮದ ಎಚ್ಚರಿಕೆ ನೀಡಿದ್ದಾರೆ.
ಕಾರ್ಯಕ್ರಮ ಮುಗಿಯುವವರೆಗೆ ಕೆಂಪುಕೋಟೆಯ ಸುತ್ತಮುತ್ತಲಿನ ಪ್ರದೇಶವನ್ನು ’ಗಾಳಿಪಟ ಹಾರಾಟ ನಿಷೇಧ ವಲಯ’ವನ್ನಾಗಿ ಘೋಷಿಸಲಾಗಿದೆ. ಒಟ್ಟು 153 ಮಂದಿ ಗಾಳಿಪಟ ಹಿಡಿಯುವವರನ್ನು ನಿಯೋಜಿಸಲಾಗಿದೆ. ಗಾಳಿಪಟ ಹಾರಿಸದಂತೆ ಕೆಂಪುಕೋಟೆಯ ಸುತ್ತಮುತ್ತಲಿನ ನಿವಾಸಿಗಳಲ್ಲಿ ಮನವಿ ಮಾಡಿದ್ದಾಗಿ ಪೊಲೀಸರು ತಿಳಿಸಿದ್ದಾರೆ.
ಹೋಟೆಲ್‌ಗಳು, ಅತಿಥಿಗೃಹಗಳು, ಪಾರ್ಕಿಂಗ್ ಸ್ಥಳಗಳು ಹಾಗೂ ರೆಸ್ಟೋರೆಂಟ್‌ಗಳಲ್ಲಿ ತಪಾಸಣೆ ಹೆಚ್ಚಿಸಲಾಗಿದೆ. ವಿವಿಧ ಸಂಘ ಸಂಸ್ಥೆಗಳೊಂದಿಗೆ ಸಭೆ ಕೂಡ ನಡೆಸಲಾಗಿದೆ.
ಕೆಂಪುಕೋಟೆ, ರಾಜ್‌ಘಾಟ್ ಹಾಗೂ ಆದಾಯ ತೆರಿಗೆ ಇಲಾಖೆ ಕಚೇರಿ ಹಾಗೂ ಇನ್ನಿತರ ಪ್ರದೇಶಗಳಲ್ಲಿ ಸಿಆರ್‌ಪಿಸಿಯ ಸೆಕ್ಷನ್ 144ರಡಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.