ADVERTISEMENT

ನಾಳೆ ಸ್ವಾತಂತ್ರ್ಯೋತ್ಸವ: ಭದ್ರತೆ ಕಾರಣದಿಂದ ಸಿಸೋಡಿಯಾ ಪಾದಯಾತ್ರೆ ಮುಂದೂಡಿದ AAP

ಪಿಟಿಐ
Published 14 ಆಗಸ್ಟ್ 2024, 6:13 IST
Last Updated 14 ಆಗಸ್ಟ್ 2024, 6:13 IST
<div class="paragraphs"><p>ಮನೀಶ್ ಸಿಸೋಡಿಯಾ</p></div>

ಮನೀಶ್ ಸಿಸೋಡಿಯಾ

   

– ಪಿಟಿಐ ಚಿತ್ರ

ADVERTISEMENT

ನವದೆಹಲಿ: ಆಮ್‌ ಆದ್ಮಿ ಪಕ್ಷದ (ಎಎಪಿ) ನಾಯಕ ಮನೀಷ್‌ ಸಿಸೋಡಿಯಾ ಅವರು ರಾಷ್ಟ್ರ ರಾಜಧಾನಿಯಲ್ಲಿ ಇಂದು (ಬುಧವಾರ) ನಡೆಸಲು ಉದ್ದೇಶಿಸಿದ್ದ ಪಾದಯಾತ್ರೆಯನ್ನು ಆಗಸ್ಟ್ 16ಕ್ಕೆ ಮುಂದೂಡಲಾಗಿದೆ.

ದೆಹಲಿ ಪೊಲೀಸರ ಸಲಹೆಯನ್ನು ಪರಿಗಣಿಸಿ ಈ ತೀರ್ಮಾನ ಕೈಗೊಂಡಿರುವುದಾಗಿ ಎಎಪಿ ನಾಯಕ ಹಾಗೂ ದೆಹಲಿ ಸಚಿವ ಸೌರಭ್‌ ಭಾರದ್ವಾಜ್‌ ಅವರು ಹೇಳಿದ್ದಾರೆ.

'ಮನೀಶ್‌ ಸಿಸೋಡಿಯಾ ಅವರ ಪಾದಯಾತ್ರೆ ಇಂದು ಸಂಜೆ 5ಕ್ಕೆ ಆರಂಭವಾಗಬೇಕಿತ್ತು. ಸ್ವಾತಂತ್ರ್ಯೋತ್ಸವದ ಮುನ್ನಾದಿನವಾಗಿರುವುದರಿಂದ ಭದ್ರತೆಯ ದೃಷ್ಟಿಯಿಂದ ಪಾದಯಾತ್ರೆಯನ್ನು ಮುಂದೂಡುವಂತೆ ದೆಹಲಿ ಪೊಲೀಸರು ಸಲಹೆ ನೀಡಿದ್ದರು. ಅವರ ಸಲಹೆ ಉತ್ತಮವಾದದ್ದು ಎಂಬುದನ್ನು ಗಮನಿಸಿ, ಪಾದಯಾತ್ರೆಯನ್ನು ಆಗಸ್ಟ್‌ 16ಕ್ಕೆ ಮುಂದೂಡಲು ನಿರ್ಧರಿಸಿದ್ದೇವೆ. ಈ ಸಮಯದಲ್ಲಿ ನಾವು ಘರ್ಷಣೆಯನ್ನು ಬಯಸುವುದಿಲ್ಲ' ಎಂದಿದ್ದಾರೆ.

ಆಗಸ್ಟ್‌ 16ರಂದು ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಅವರ ಜನ್ಮದಿನ. ಅದೇ ದಿನ ಪಾದಯಾತ್ರೆ ನಡೆಸಬೇಕು ಎಂದು ಪ್ರಕೃತಿಯೇ ಯೋಜಿಸಿದ ಹಾಗಿದೆ ಎಂದೂ ಅವರು ಹೇಳಿದ್ದಾರೆ.

'ಹಿಂದಿ ಕ್ಯಾಲೆಂಡರ್‌ ಪ್ರಕಾರ, ಅವರು (ಅರವಿಂದ ಕೇಜ್ರಿವಾಲ್‌) ಹುಟ್ಟಿದ್ದು ಜನ್ಮಾಷ್ಠಮಿಯಂದು. ಆದರೆ, ಇಂಗ್ಲಿಷ್‌ ಕ್ಯಾಲೆಂಡರ್‌ ಪ್ರಕಾರ, ಆಗಸ್ಟ್‌ 16ರಂದು. ಏನೇ ಆದರೂ ಒಳ್ಳೆಯದೇ ಆಗಿದೆ. ಬಹುಶಃ ಕೇಜ್ರಿವಾಲ್‌ ಅವರ ಜನ್ಮದಿನದಂದೇ ಪಾದಯಾತ್ರೆ ನಡೆಯಬೇಕು ಎಂಬುದು ಪಕೃತಿಯ ಯೋಜನೆ ಇರಬಹುದು' ಎಂದು ಅಭಿಪ್ರಾಯ ಪಟ್ಟಿದ್ದಾರೆ.

ಪಾದಯಾತ್ರೆಯು ದೆಹಲಿಯ ಎಲ್ಲ ಪ್ರದೇಶಗಳನ್ನೂ ತಲುಪಲಿದೆ ಎಂದೂ ಹೇಳಿದ್ದಾರೆ.

ದೆಹಲಿ ಸರ್ಕಾರ ಸದ್ಯ ಹಿಂಪಡೆದಿರುವ ಮದ್ಯ ನೀತಿ ಜಾರಿ ವೇಳೆ ನಡೆದಿದೆ ಎನ್ನಲಾದ ಹಣದ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಕಳೆದ 17 ತಿಂಗಳಿನಿಂದ ಜೈಲಿನಲ್ಲಿದ್ದ ಸಿಸೋಡಿಯಾ, ಆಗಸ್ಟ್‌ 9ರಂದು ಜಾಮೀನನ ಮೇಲೆ ಬಿಡುಗಡೆಯಾಗಿದ್ದಾರೆ.

ಜೈಲಿನಿಂದ ಹೊರಬಂದ ಬಳಿಕ ಎಎಪಿ ನಾಯಕರೊಂದಿಗೆ ಆಗಸ್ಟ್‌ 11ರಂದು ಸಭೆ ನಡೆಸಿದ್ದ ಅವರು, ದೆಹಲಿಯ ಸದ್ಯದ ರಾಜಕೀಯ ಪರಿಸ್ಥಿತಿ ಹಾಗೂ ಮುಂಬರುವ ವಿಧಾನಸಭೆ ಚುನಾವಣೆ ಕುರಿತು ಚರ್ಚಿಸಿದ್ದರು. ಅದರ ಭಾಗವಾಗಿ ಪಾದಯಾತ್ರೆ ಕೈಗೊಳ್ಳಲು ಮುಂದಾಗಿದ್ದರು.

70 ಸದಸ್ಯ ಬಲದ ದೆಹಲಿ ವಿಧಾನಸಭೆಗೆ 2025ರ ಆರಂಭದಲ್ಲಿ ಚುನಾವಣೆ ನಡೆಯುವ ಸಾಧ್ಯತೆ ಇದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.