ADVERTISEMENT

ಸ್ವಾತಂತ್ರ್ಯೋತ್ಸವ: ಕೆಂಪುಕೋಟೆಗೆ ತ್ರಿವರ್ಣದ ಮೆರುಗು

ಪಿಟಿಐ
Published 15 ಆಗಸ್ಟ್ 2022, 19:45 IST
Last Updated 15 ಆಗಸ್ಟ್ 2022, 19:45 IST
   

ನವದೆಹಲಿ: ರಾಷ್ಟ್ರ ರಾಜಧಾನಿಯ ಕೆಂಪುಕೋಟೆ ಪ್ರದೇಶದಲ್ಲಿ ಕಣ್ಣು ಹಾಯಿಸಿದಲ್ಲೆಲ್ಲ ತ್ರಿವರ್ಣ ಧ್ವಜಗಳೇ ಸೋಮವಾರ ರಾರಾಜಿಸುತ್ತಿದ್ದವು. ದೇಶದ ಸ್ವಾತಂತ್ರ್ಯ ಹೋರಾಟದ ಪ್ರಮುಖ ಘಟನೆಗಳನ್ನು ತೋರಿಸುವ ಭಿತ್ತಿಚಿತ್ರಗಳನ್ನು‍ ರಚಿಸಲಾಗಿತ್ತು. ಹೂಗಳನ್ನು ಬಳಸಿಯೂ ಘಟನೆಗಳನ್ನು ವಿವರಿಸುವ ಪ್ರಯತ್ನ ಮಾಡಲಾಗಿತ್ತು. ಹೀಗೆ, 76ನೇಸ್ವಾತಂತ್ರ್ಯೋತ್ಸವಕ್ಕೆ ಐತಿಹಾಸಿಕ ಕೆಂಪುಕೋಟೆಯು ಸಾಕ್ಷಿಯಾಯಿತು.

ಪ್ರಧಾನಿ ನರೇಂದ್ರ ಮೋದಿ ಭಾಷಣಕ್ಕೆ ಮುನ್ನ,ಎಂಐ–17 ಹೆಲಿಕಾಪ್ಟರ್‌ಗಳ ಮೂಲಕ ಕೆಂಪುಕೋಟೆಯ ಮೇಲೆ ಹೂಮಳೆ ಸುರಿಸಲಾಯಿತು. ಇದೇ ಮೊದಲ ಬಾರಿಗೆ ಈ ರೀತಿ ಮಾಡಲಾಗಿದೆ. ಪ್ರಧಾನಿ ಭಾಷಣದ ಬಳಿಕ, ತ್ರಿವರ್ಣದ ಬಲೂನುಗಳ ಗುಚ್ಛವನ್ನು ಆಕಾಶಕ್ಕೆ ಹಾರಿ ಬಿಡಲಾಯಿತು.

ಕೆಂಪುಕೋಟೆಯ ದ್ವಾರದಲ್ಲಿ ಆನೆಯ ಎರಡು ಗೊಂಬೆಗಳನ್ನು ಇರಿಸಲಾಗಿತ್ತು. ಯಂತ್ರವನ್ನು ಅಳವಡಿಸಿದ್ದ ಈ ಆನೆಗಳ ಒಳಗೆ ಕುಳಿತು ನಿರ್ವಾಹಕರು ಅವುಗಳನ್ನು ನಿರ್ವಹಿಸಿದರು. ಇದು ಜನರ ಆಕರ್ಷಣೆಯ ಕೇಂದ್ರವಾಗಿತ್ತು. ಕಾರ್ಯಕ್ರಮದ ಬಳಿಕ ಈ ಆನೆಗಳ ಸುತ್ತಲೂ ಭಾರಿ ಸಂಖ್ಯೆಯಲ್ಲಿ ಜನರು ಸೇರಿದ್ದರು.

ADVERTISEMENT

ಎನ್‌ಸಿಸಿ ಕೆಡೆಟ್‌ಗಳು ತಮ್ಮ ತಮ್ಮ ರಾಜ್ಯದ ಸಾಂಪ್ರದಾಯಿಕ ದಿರಿಸಿನಲ್ಲಿ ಕೆಂಪುಕೋಟೆಯ ‘ಜ್ಞಾನಪಥ’ದಲ್ಲಿ ಭಾರತದ ನಕ್ಷೆಯನ್ನು ಬಿಂಬಿಸುವ ರೀತಿಯಲ್ಲಿ ಕುಳಿತಿದ್ದರು. ಪ್ರಧಾನಿ ಅವರು ಭಾಷಣ ಮುಗಿಸಿ ಹಿಂದಿರುಗುವ ಮುನ್ನ ಈ ಸ್ಥಳಕ್ಕೆ ಹೋಗಿ, ಎನ್‌ಸಿಸಿ ಕೆಡೆಟ್‌ಗಳನ್ನು ಮಾತನಾಡಿಸಿದರು.

ತ್ರಿವರ್ಣದ ಟೋಪಿ ಧರಿಸಿ ಕೈಯಲ್ಲಿ ರಾಷ್ಟ್ರಧ್ವಜ ಹಿಡಿದ ಸಾವಿರಾರು ಜನರು ಕೆಂಪುಕೋಟೆಯಲ್ಲಿ ಭಾರಿ ಉತ್ಸಾಹದಿಂದ ಸೇರಿದ್ದರು. ದೇಶದ ವಿವಿಧ ಭಾಗಗಳಿಂದ ಬಂದ ಎನ್‌ಸಿಸಿಯ 792 ಕೆಡೆಟ್‌ಗಳು ಕಾರ್ಯಕ್ರಮದಲ್ಲಿ ಭಾಗಿಯಾದರು. ರಾಷ್ಟ್ರ ರಾಜಧಾನಿ ಮತ್ತು ದೇಶದ ಎಲ್ಲೆಡೆಯೂ ಭಾರಿ ಬಂದೋಬಸ್ತ್‌ ಏರ್ಪಡಿಸಲಾಗಿತ್ತು.

‘ಮಕ್ಕಳಿಗೆ ನಮಿಸುವೆ’
ವಿದೇಶಿ ಆಟಿಕೆಗಳು ಬೇಡ ಎನ್ನುವ ಮಕ್ಕಳಿಗೆ ನಮಿಸುವೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಅಂತಹ ಮಕ್ಕಳಲ್ಲಿ ‘ಆತ್ಮನಿರ್ಭರ ಭಾರತ’ದ ರಕ್ತ ಹರಿಯುತ್ತಿರುತ್ತದೆ ಎಂದರು.

‘5ರಿಂದ 7ರೊಳಗಿನ ಪುಟ್ಟ ಮಕ್ಕಳಿಗೆ ನಮಿಸಲು ಬಯಸುವೆ. ದೇಶದ ಆತ್ಮವು ಎಚ್ಚೆತ್ತಿದೆ. 5–7ರೊಳಗಿನ ಅಸಂಖ್ಯ ಮಕ್ಕಳುವಿದೇಶಿ ಆಟಿಕೆಗಳು ತಮಗೆ ಬೇಡ ಎಂದು ಹೇಳಿದ್ದಾರೆ ಎಂಬುದು ತಿಳಿದಿದೆ. ಐದು ವರ್ಷದ ಮಗುವು ಅಂತಹ ನಿರ್ಧಾರಕ್ಕೆ ಬಂದಾಗ ಆ ಮಗುವಿನಲ್ಲಿ ಸ್ವಾವಲಂಬಿ ಭಾರತದ ಸ್ಫೂರ್ತಿ ಇರುತ್ತದೆ’ ಎಂದರು.

ಭ್ರಷ್ಟಾಚಾರ, ಸ್ವಜನಪಕ್ಷಪಾತದ ಸವಾಲು
ಭ್ರಷ್ಟಾಚಾರ ಮತ್ತು ಸ್ವಜನಪಕ್ಷಪಾತವು ಈ ದೇಶದ ಮುಂದಿರುವ ಎರಡು ದೊಡ್ಡ ಸವಾಲುಗಳು ಎಂದು ಪ್ರಧಾನಿ ಹೇಳಿದ್ದಾರೆ. ಈ ಕೆಡುಕುಗಳನ್ನು ಜನರು ದ್ವೇಷಿಸಬೇಕು ಎಂದು ಹೇಳಿದ್ದಾರೆ.

ವಂಶಾಡಳಿತದ ಸವಾಲುಗಳ ಬಗ್ಗೆ ಅವರು ಮಾತನಾಡಿದರು. ಭ್ರಷ್ಟಾಚಾರವು ದೇಶವನ್ನು ಗೆದ್ದಲಿನಂತೆ ತಿನ್ನುತ್ತಿದೆ ಎಂದ ಅವರು ಭ್ರಷ್ಟಾಚಾರದ ವಿರುದ್ಧದ ಯುದ್ಧದಲ್ಲಿ ದೇಶವು ಮಹತ್ವದ ಘಟ್ಟ ತಲುಪಿದೆ ಎಂದರು.

‘ತ್ಯಾಗವನ್ನು ಕ್ಷುಲ್ಲಕಗೊಳಿಸಿದ ಸರ್ಕಾರ’
ನರೇಂದ್ರ ಮೋದಿ ನೇತೃತ್ವದ ಸರ್ಕಾರವುಸ್ವಾತಂತ್ರ್ಯ ಹೋರಾಟಗಾರರ ತ್ಯಾಗ ಮತ್ತು ದೇಶದ ಸಾಧನೆಯ ಹೆಮ್ಮೆಯನ್ನು ಕ್ಷುಲ್ಲಕವಾಗಿಸಲು ಯತ್ನಿಸುತ್ತಿದೆ ಎಂದು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಆರೋಪಿಸಿದ್ದಾರೆ.

ದೇಶ ವಿಭಜನೆಗೆ ಜವಾಹರಲಾಲ್ ನೆಹರೂ ಮತ್ತು ಇತರ ಕೆಲವರು ಕಾರಣ ಎಂದು ಹೇಳುವ ವಿಡಿಯೊವನ್ನು ಬಿಜೆಪಿ ಪ್ರಕಟಿಸಿದ ಮರು ದಿನ ಸೋನಿಯಾ ಅವರು ಈ ಹೇಳಿಕೆ ನೀಡಿದ್ದಾರೆ.

‘75 ವರ್ಷಗಳಲ್ಲಿ ನಾವು ಬಹಳಷ್ಟನ್ನು ಸಾಧಿಸಿದ್ದೇವೆ. ಆದರೆ, ಈಗಿನ ಸ್ವ–ಗೀಳಿನ ಸರ್ಕಾರವು ನಮ್ಮ ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ ಮತ್ತು ದೇಶದ ಮಹತ್ವದ ಸಾಧನೆಗಳನ್ನು ಕ್ಷುಲ್ಲಕ ಎಂಬಂತೆ ನೋಡುತ್ತಿದೆ. ಅದನ್ನು ಒಪ್ಪಿಕೊಳ್ಳಲು ಸಾಧ್ಯವೇ ಇಲ್ಲ’ ಎಂದು ಸೋನಿಯಾ ಹೇಳಿದ್ದಾರೆ.

ಚಾರಿತ್ರಿಕ ಸತ್ಯಗಳನ್ನು ತಿರುಚುವುದು, ಮಹಾತ್ಮ ಗಾಂಧಿ, ಜವಾಹರಲಾಲ್‌ ನೆಹರೂ, ಸರ್ದಾರ್‌ ವಲ್ಲಭಭಾಯಿ ಪಟೇಲ್‌ ಅಬುಲ್ ಕಲಾಂ ಆಜಾದ್‌ ಅಂತಹ ಶ್ರೇಷ್ಠ ನಾಯಕರನ್ನು ಸುಳ್ಳುಗಳ ಆಧಾರದಲ್ಲಿ ರಾಜಕೀಯ ಲಾಭಕ್ಕಾಗಿ ಅವಮಾನಿಸುವುದನ್ನು ಕಾಂಗ್ರೆಸ್‌ ಬಲವಾಗಿ ಖಂಡಿಸುತ್ತದೆ ಎಂದು ಅವರು ಹೇಳಿದ್ದಾರೆ.

75 ವರ್ಷಗಳಲ್ಲಿ ಭಾರತವು ಜಾಗತಿಕ ಮಟ್ಟದಲ್ಲಿ ಅಳಿಸಲಾಗದ ಛಾಪು ಮೂಡಿಸಿದೆ. ವಿಜ್ಞಾನ, ಶಿಕ್ಷಣ, ಆರೋಗ್ಯ, ಮಾಹಿತಿ ತಂತ್ರಜ್ಞಾನದಂತಹ ಕ್ಷೇತ್ರಗಳಲ್ಲಿ ಭಾರತದ ಪ್ರತಿಭಾವಂತರು ಕಠಿಣ ಶ್ರಮ ಹಾಕಿ ಈ ಛಾಪು ಮೂಡಿಸಿದ್ದಾರೆ ಎಂದರು.

‘ದೂರದರ್ಶಿ ನಾಯಕರ ನಾಯಕತ್ವದಲ್ಲಿ ಭಾರತವು ಸ್ವಾತಂತ್ರ್ಯ ಪಡೆದುಕೊಂಡದ್ದು ಮಾತ್ರವಲ್ಲದೆ, ಪಾರದರ್ಶಕ ಚುನಾವಣಾ ವ್ಯವಸ್ಥೆಯನ್ನೂ ರೂಪಿಸಿಕೊಂಡಿದೆ. ಸಾಂವಿಧಾನಿಕ ಸಂಸ್ಥೆಗಳನ್ನು ಬಲಗೊಳಿಸಲಾಗಿದೆ. ಜತೆಗೆ, ಭಾಷೆ, ಧರ್ಮ ಮತ್ತು ಜನಾಂಗಗಳ ಬಹುತ್ವಕ್ಕೆ ಧಕ್ಕೆ ಬಾರದಂತೆ ನೋಡಿಕೊಳ್ಳಲಾಗಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.