ADVERTISEMENT

Independence Day: ಕೆಂಪುಕೋಟೆಯಲ್ಲಿ ಪ್ರಧಾನಿ ಮೋದಿ ಭಾಷಣದ ಪ್ರಮುಖಾಂಶಗಳು

ಪಿಟಿಐ
Published 15 ಆಗಸ್ಟ್ 2024, 15:34 IST
Last Updated 15 ಆಗಸ್ಟ್ 2024, 15:34 IST
ನರೇಂದ್ರ ಮೋದಿ
ನರೇಂದ್ರ ಮೋದಿ   

ನವದೆಹಲಿ: ಮಹಿಳೆಯರ ವಿರುದ್ಧ ನಡೆಯುವ ಅಪರಾಧಗಳ ಕುರಿತು ರಾಜ್ಯ ಸರ್ಕಾರಗಳು ಅತ್ಯಂತ ತುರ್ತಾಗಿ ಕ್ರಮ ಕೈಗೊಳ್ಳಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಗುರುವಾರ ಹೇಳಿದರು.

ಸ್ವಾತಂತ್ರ್ಯೋತ್ಸವ ಅಂಗವಾಗಿ ಕೆಂಪುಕೋಟೆಯಿಂದ ಭಾಷಣ ಮಾಡಿದ ಅವರು, ಕೋಲ್ಕತ್ತದಲ್ಲಿ ವೈದ್ಯ ವಿದ್ಯಾರ್ಥಿನಿ ಮೇಲೆ ನಡೆದ ಅತ್ಯಾಚಾರ ಮತ್ತು ಕೊಲೆ ಪ್ರಕರಣವನ್ನು ಪರೋಕ್ಷವಾಗಿ ಪ್ರಸ್ತಾಪಿಸಿದರು.

ಮಹಿಳೆಯ ಮೇಲೆ ಅತ್ಯಾಚಾರ ಹಾಗೂ ಅವರ ವಿರುದ್ಧ ಹಿಂಸಾಚಾರದ ಘಟನೆಗಳ ಬಗ್ಗೆ ಕಳವಳ ವ್ಯಕ್ತಪಡಿಸಿದ ಅವರು, ‘ಈ ವಿಚಾರವಾಗಿ ಜನರಿಂದ ವ್ಯಕ್ತವಾಗುತ್ತಿರುವ ಆಕ್ರೋಶ ನನಗೆ ಅರ್ಥವಾಗುತ್ತದೆ’ ಎಂದರು.

ADVERTISEMENT

‘ಮಹಿಳೆಯರ ಮೇಲಿನ ಅಪರಾಧಗಳ ಕುರಿತು ತ್ವರಿತವಾಗಿ ತನಿಖೆ ನಡೆಸಬೇಕು. ಇಂತಹ ಪೈಶಾಚಿಕ ಕೃತ್ಯಗಳನ್ನು ಎಸಗುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು’ ಎಂದ ಅವರು, ‘ಇಂತಹ ಕೃತ್ಯಗಳ ಬಗ್ಗೆ ಸಮಾಜವು ಸಹ ಆತ್ಮಾವಲೋಕನ ನಡೆಸಬೇಕು’ ಎಂದರು.

‘ಅಪರಾಧಿಗಳಲ್ಲಿ ಅವರು ಎದುರಿಸಬೇಕಾದ ಶಿಕ್ಷೆ ಬಗ್ಗೆ ಭಯ ಉಂಟಾಗುವಂತೆ ಮಾಡಬೇಕು. ಇಂತಹ ಪಾಪದ ಕೆಲಸಗಳನ್ನು ಮಾಡಿದರೆ, ನಮ್ಮನ್ನು ಗಲ್ಲಿಗೇರಿಸಲಾಗುತ್ತದೆ ಎಂಬ ಅರಿವು ಅಪರಾಧ ಎಸಗುವವರಲ್ಲಿರಬೇಕು ’ ಎಂದು ಹೇಳಿದರು.

ಮೋದಿ ಭಾಷಣದ ಪ್ರಮುಖ ಅಂಶಗಳು

ಮಹಿಳೆ

  • ವೇತನ ಸಹಿತ ಹೆರಿಗೆ ರಜೆಯನ್ನು 12 ವಾರಗಳಿಂದ 26 ವಾರಗಳಿಗೆ ಹೆಚ್ಚಿಸಲಾಗಿದೆ. ತಾಯಿಯ ಆರೈಕೆಯಲ್ಲಿ ಬೆಳೆಯುವ ಮಗು ಮಾದರಿ ಪ್ರಜೆಯಾಗಬಲ್ಲ ಎಂಬ ಉದಾತ್ತ ಚಿಂತನೆಯೇ ಇಂತಹ ನಿರ್ಧಾರಕ್ಕೆ ಕಾರಣ

  • 10 ಕೊಟಿಗೂ ಅಧಿಕ ಮಹಿಳೆಯರನ್ನು ಸ್ವಸಹಾಯ ಗುಂಪುಗಳಿಗೆ ಸೇರ್ಪಡೆ ಮಾಡಲಾಗಿದೆ. ಕುಟುಂಬದಲ್ಲಿ ನಿರ್ಧಾರ ಕೈಗೊಳ್ಳುವಲ್ಲಿ ಹಾಗೂ ಸಾಮಾಜಿಕ ಬದಲಾವಣೆಯಲ್ಲಿ ಅವರ ಪಾತ್ರ ಹೆಚ್ಚಿದೆ

  • ಉದ್ಯೋಗ, ನಾವೀನ್ಯತೆ, ಉದ್ಯಮಶೀಲತೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ‘ಮಹಿಳೆ ಕೇಂದ್ರಿತ ಅಭಿವೃದ್ಧಿ ಮಾದರಿ’ಗೆ ಉತ್ತೇಜನ ನೀಡಲಾಗಿದೆ

  • ವಾಯುಪಡೆ, ನೌಕಾಪಡೆ, ಸೇನೆ ಹಾಗೂ ಬಾಹ್ಯಾಕಾಶ ಕ್ಷೇತ್ರದಲ್ಲಿಯೂ ಮಹಿಳೆಯರು ಛಾಪು ಮೂಡಿಸಿದ್ದಾರೆ

ವಿಕಸಿತ ಭಾರತ

  • ‘ವಿಕಸಿತ ಭಾರತ 2047’ ಎಂಬುದು ಕೇವಲ ಪದಪುಂಜವಲ್ಲ. 140 ಕೋಟಿ ಭಾರತೀಯರ ಕನಸು ಮತ್ತು ಸಂಕಲ್ಪ

  • ಹವಾಮಾನ ಬದಲಾವಣೆ ವಿರುದ್ಧ ಹೋರಾಡಲು ಹಾಗೂ ಇಂಧನ ಬೇಡಿಕೆ ವಿಚಾರದಲ್ಲಿ ಸ್ವಾವಲಂಬಿಯಾಗಲು ಭಾರತ ಶ್ರಮಿಸುತ್ತಿದೆ

  • ನೂತನ ಅಪರಾಧಿಕ ಕಾಯ್ದೆಗಳಲ್ಲಿ, ಶಿಕ್ಷೆ ವಿಧಿಸುವುದಕ್ಕಿಂತಲೂ ನ್ಯಾಯ ಒದಗಿಸುಲು ಆದ್ಯತೆ ನೀಡಲಾಗಿದೆ

ಬಾಹ್ಯಾಕಾಶ

  • ಭಾರತವನ್ನು ಶಕ್ತಿಶಾಲಿ ರಾಷ್ಟ್ರವನ್ನಾಗಿ ಮಾಡಲು ಬಾಹ್ಯಾಕಾಶ ಕ್ಷೇತ್ರದಲ್ಲಿಯೂ ಪ್ರಗತಿ ಅಗತ್ಯ. ಉಜ್ವಲ ಭವಿಷ್ಯ ಇರುವ ಈ ಕ್ಷೇತ್ರವನ್ನು ಬಲಪಡಿಸಲಾಗುತ್ತಿದೆ 

  • ಚಂದ್ರಯಾನ ಕಾರ್ಯಕ್ರಮದ ಯಶಸ್ಸು ದೇಶದ ಯುವ ಸಮುದಾಯದಲ್ಲಿ ವೈಜ್ಞಾನಿಕ ಮನೋಧರ್ಮ ಹೆಚ್ಚುವಂತೆ ಮಾಡಿದೆ. ಯುವ ಜನತೆಯಲ್ಲಿನ ಇಂತಹ ಬದಲಾವಣೆಯನ್ನು ಶೈಕ್ಷಣಿಕ ಸಂಸ್ಥೆಗಳಲ್ಲಿ ಪೋಷಿಸಬೇಕು

ಶಿಕ್ಷಣ

  • ವಿದ್ಯಾರ್ಥಿಗಳು ಉನ್ನತ ಶಿಕ್ಷಣಕ್ಕಾಗಿ ವಿದೇಶಗಳಿಗೆ ಹೋಗುವ ಅಗತ್ಯವಿಲ್ಲದಂತಹ ಶಿಕ್ಷಣ ವ್ಯವಸ್ಥೆಯನ್ನು ರೂಪಿಸುವ ಬಯಕೆ ಇದೆ

  • ವಿದೇಶಗಳಲ್ಲಿ ವೈದ್ಯಕೀಯ ಶಿಕ್ಷಣ ಪಡೆಯಲು ವಿದ್ಯಾರ್ಥಿಗಳು ಕೋಟ್ಯಂತರ ರೂಪಾಯಿ ಖರ್ಚು ಮಾಡುತ್ತಾರೆ. ಮುಂದಿನ ಐದು ವರ್ಷಗಳಲ್ಲಿ 75 ಸಾವಿರ ಹೊಸ ವೈದ್ಯಕೀಯ ಸೀಟುಗಳನ್ನು ಸೃಷ್ಟಿಸಲಾಗುವುದು

ವಿಜ್ಞಾನ–ತಂತ್ರಜ್ಞಾನ

  • 5ಜಿ ತಂತ್ರಜ್ಞಾನಕ್ಕೆ ತ್ವರಿತವಾಗಿ ಚಾಲನೆ ನೀಡಲಾಗಿದ್ದರೂ, 6ಜಿ ತಂತ್ರಜ್ಞಾನ ಕುರಿತು ಸಮರೋಪಾದಿಯಲ್ಲಿ ಕೆಲಸ ಮಾಡಲಾಗುತ್ತಿದೆ

  • ‘ಭಾರತದಲ್ಲಿ ವಿನ್ಯಾಸಗೊಳಿಸಿ’ ಎಂಬ ಮಂತ್ರದಿಂದ ಶುರುವಾದ ನಮ್ಮ ಪಯಣ, ಈಗ ‘ವಿಶ್ವಕ್ಕಾಗಿ ವಿನ್ಯಾಸಗೊಳಿಸಿ’ ಎಂಬ ಧ್ಯೇಯವಾಕ್ಯದೊಂದಿಗೆ ಸಾಗಬೇಕಿದೆ

2036 ಒಲಿಂಪಿಕ್ಸ್‌ನತ್ತ ದೃಷ್ಟಿ

2036ರ ಒಲಿಂಪಿಕ್ಸ್‌ನ ಆತಿಥ್ಯ ವಹಿಸಬೇಕು ಎಂಬುದು ಭಾರತದ ಕನಸು. ಈ ಕನಸನ್ನು ನನಸು ಮಾಡುವ ನಿಟ್ಟಿನಲ್ಲಿ ಸಿದ್ಧತೆ ನಡೆಸಲಾಗುತ್ತಿದೆ

‘ಬಾಂಗ್ಲಾದ ಪ್ರಗತಿಯನ್ನೇ ಭಾರತ ಬಯಸುತ್ತದೆ’

ಬಾಂಗ್ಲಾದೇಶದಲ್ಲಿ ಕಳೆದ ಕೆಲ ದಿನಗಳಿಂದ ನಡೆಯುತ್ತಿರುವ ಪ್ರತಿಭಟನೆ ಹಾಗೂ ಹಿಂಸಾಚಾರವನ್ನು ಪ್ರಸ್ತಾಪಿಸಿದ ಮೋದಿ ‘ಬಾಂಗ್ಲಾದೇಶದಲ್ಲಿರುವ ಹಿಂದೂಗಳು ಸೇರಿದಂತೆ ಎಲ್ಲ ಅಲ್ಪಸಂಖ್ಯಾತರ ಸುರಕ್ಷತೆ ಬಗ್ಗೆ 140 ಕೋಟಿ ಭಾರತೀಯರು ಆತಂಕ ಮನೆ ಮಾಡಿದೆ’ ಎಂದು ಹೇಳಿದ್ದಾರೆ.

‘ಬಾಂಗ್ಲಾದೇಶದಲ್ಲಿ ಶೀಘ್ರವೇ ಸಹಜಸ್ಥಿತಿ ಮರಳುವ ವಿಶ್ವಾಸ ಇದೆ’ ಎಂದ ಅವರು ‘ನೆರೆ ರಾಷ್ಟ್ರ ಅಭಿವೃದ್ಧಿ ಹೊಂದಿ ಅಲ್ಲಿ ಶಾಂತಿ–ನೆಮ್ಮದಿ ನೆಲೆಸಬೇಕು ಎಂದು ಭಾರತ ಸದಾ ಬಯಸುತ್ತದೆ’ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.