ನವದೆಹಲಿ (ಪಿಟಿಐ): ‘ಪ್ರಸ್ತುತ ಅಪಾಯ ಎದುರಿಸುತ್ತಿರುವ ಪ್ರಜಾಪ್ರಭುತ್ವ ಮತ್ತು ಸಂವಿಧಾನದ ಮೌಲ್ಯಗಳನ್ನು ಎತ್ತಿಹಿಡಿಯುವ ಪ್ರತಿಜ್ಞೆ ನಮ್ಮದಾಗಿದೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮಂಗಳವಾರ ಹೇಳಿದರು.
ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸ್ವಾತಂತ್ರ್ಯ ಹೋರಾಟದಲ್ಲಿ ಬಲಿದಾನ ಮಾಡಿದ ಅಸಂಖ್ಯ ಹೋರಾಟಗಾರರಿಗೆ ನಮಿಸಿದರು. ಅವರು ಸ್ವಾತಂತ್ರ್ಯ ಹೋರಾಟದಲ್ಲಷ್ಟೇ ಭಾಗವಹಿಸಲಿಲ್ಲ. ಭಾರತಕ್ಕೆ ಭದ್ರ ಬುನಾದಿ ಹಾಕಿದರು ಎಂದು ಸ್ಮರಿಸಿದರು.
ದೇಶದ ಅಭಿವೃದ್ಧಿಗಾಗಿ ಅಟಲ್ ಬಿಹಾರಿ ವಾಜಪೇಯಿ ಸೇರಿದಂತೆ ಮಾಜಿ ಪ್ರಧಾನಿಗಳ ಕೊಡುಗೆಯನ್ನು ಉಲ್ಲೇಖಿಸಿದ ಅವರು, ಇಂದು ಪ್ರಜಾಪ್ರಭುತ್ವ, ಸಂವಿಧಾನ, ವಿವಿಧ ಸ್ವಾಯತ್ತ ಸಂಸ್ಥೆಗಳು ದೊಡ್ಡ ಅಪಾಯ ಎದುರಿಸುತ್ತಿವೆ ಎಂದು ಅಭಿಪ್ರಾಯಪಟ್ಟರು.
ಪ್ರಜಾಪ್ರಭುತ್ವ ಮತ್ತು ಸಂವಿಧಾನ ದೇಶದ ಆತ್ಮಗಳು. ಸ್ವಾತಂತ್ರ್ಯೋತ್ಸವದ ಈ ಹೊತ್ತಿನಲ್ಲಿ ಪ್ರಜಾಪ್ರಭುತ್ವ, ಸ್ವಾತಂತ್ರ್ಯ, ಸಂವಿಧಾನದ ಏಕತೆ ಮತ್ತು ದೇಶದ ಸಾರ್ವಭೌಮತೆ, ಪ್ರೀತಿ, ಭ್ರಾತೃತ್ವ, ಸೌಹಾರ್ದವನ್ನು ಎತ್ತಿಹಿಡಿಯುವ ಪ್ರತಿಜ್ಞೆ ಮಾಡುತ್ತೇವೆ ಎಂದು ಹೇಳಿದರು.
‘ಇಂಡಿಯಾ’ ಮೈತ್ರಿಕೂಟದ ಘೋಷವಾಕ್ಯವಾದ ‘ಭಾರತ್ ಜುಡೇಗಾ, ಇಂಡಿಯಾ ಜೀತೆಗಾ’ ಘೋಷಣೆಯನ್ನು ಪುನರುಚ್ಚರಿಸಿದರು.
ಪ್ರತಿಪಕ್ಷಗಳ ಧ್ವನಿ ಅಡಗಿಸುವ ಕೆಲಸ ಇಂದು ನಡೆಯುತ್ತಿದೆ. ಸಿಬಿಐ, ಇ.ಡಿ., ಆದಾಯ ತೆರಿಗೆ ದಾಳಿಗಳಾಗುತ್ತಿವೆ. ಚುನಾವಣಾ ಆಯೋಗ ದುರ್ಬಲವಾಗುತ್ತಿದೆ. ಸಂಸತ್ತಿನಲ್ಲಿಯು ವಿಪಕ್ಷ ಸದಸ್ಯರ ಅಮಾನತು ಮೂಲಕ ಧ್ವನಿ ಅಡಗಿಸುವ ಕೆಲಸ ಆಗುತ್ತಿದೆ. ಕೆಲವರು ಮಾತನಾಡುವಾಗ ಮೈಕ್ ಆಫ್ ಮಾಡಲಾಗುತ್ತದೆ ಎಂದು ಖರ್ಗೆ ಹೇಳಿದರು.
‘ದೊಡ್ಡ ಮನುಷ್ಯರು ಹೊಸ ಇತಿಹಾಸ ದಾಖಲಿಸಲು ಹಳೆಯದನ್ನು ಅಳಿಸುವುದಿಲ್ಲ, ಅವರು ತಮ್ಮದೇ ಇತಿಹಾಸವನ್ನು ದೊಡ್ಡದಾಗಿ ದಾಖಲಿಸುತ್ತಾರೆ. ಈಗಾಗಲೇ ದಾಖಲಾದ ಇತಿಹಾಸದ ಗೆರೆಗಳನ್ನು ಅಳಿಸಿಹಾಕುವುದಿಲ್ಲ‘ ಎಂದು ಅಭಿಪ್ರಾಯಪಟ್ಟರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.