ADVERTISEMENT

ಸಂದೇಶ್‌ಖಾಲಿ: ಸ್ವತಂತ್ರ ಸತ್ಯಶೋಧನಾ ಸಮಿತಿಗೆ ತಡೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 25 ಫೆಬ್ರುವರಿ 2024, 7:47 IST
Last Updated 25 ಫೆಬ್ರುವರಿ 2024, 7:47 IST
   

ಕೋಲ್ಕತ್ತ: ಹಿಂಸಾಚಾರ ಪೀಡಿತ ಪಶ್ಚಿಮ‌ ಬಂಗಾಳದ ಸಂದೇಶ್‌ಖಾಲಿಗೆ ತೆರಳುತ್ತಿದ್ದ ಪಟ್ನಾ ಹೈಕೋರ್ಟ್‌ನ ನಿವೃತ್ತ ಮುಖ್ಯ ನ್ಯಾ‌ಯಮೂರ್ತಿ ಎಲ್‌. ನರಸಿಂಹ ರೆಡ್ಡಿ ನೇತೃತ್ವದ ಆರು ಮಂದಿ ಸದಸ್ಯರಿದ್ದ ಸ್ವತಂತ್ರ ಸತ್ಯಶೋಧನಾ ಸಮಿತಿಗೆ ಪೊಲೀಸರು ಭಾನುವಾರ ತಡೆಯೊಡ್ಡಿದ್ದಾರೆ.

ಮಹಿಳೆಯರ ಮೇಲೆ ನಡೆದಿದೆ ಎನ್ನಲಾದ ದೌರ್ಜನ್ಯ ಪ್ರಕರಣಗಳ ಕುರಿತು ತನಿಖೆ ನಡೆಸಲು ಸಮಿತಿಯು ತೆರಳುತ್ತಿತ್ತು.

ಸಂದೇಶ್‌ಖಾಲಿ ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿ 144ನೇ ಸೆಕ್ಷನ್‌ ಜಾರಿಗೊಳಿಸಿರುವ ಕಾರಣ ಸತ್ಯಶೋಧನಾ ಸಮಿತಿಯನ್ನು ಭೋಜೆರ್‌ಹತ್‌ ಎಂಬಲ್ಲಿ ಪೊಲೀಸ್‌ ಅಧಿಕಾರಿಗಳು ತಡೆದಿದ್ದಾರೆ ಎಂದು ಮೂಲಗಳು ತಿಳಿಸಿವೆ.

ADVERTISEMENT

ನಿವೃತ್ತ ಐಪಿಎಸ್‌ ಅಧಿಕಾರಿ ರಾಜ್‌ಪಾಲ್‌ ಸಿಂಗ್‌, ರಾಷ್ಟ್ರೀಯ ಮಹಿಳಾ ಆಯೋಗದ ಮಾಜಿ ಸದಸ್ಯೆ ಚಾರು ವಾಲಿ ಖನ್ನಾ, ವಕೀಲರಾದ ಒ.ಪಿ. ವ್ಯಾಸ್ ಮತ್ತು ಭಾವನಾ ಬಜಾಜ್‌ ಹಾಗೂ ಪತ್ರಕರ್ತ ಸಂಜೀವ್‌ ನಾಯಕ್‌ ಅವರು ನರಸಿಂಹ ರೆಡ್ಡಿ ಜೊತೆಗಿದ್ದರು.

ಸಮಿತಿ ಸದಸ್ಯರಾದ ಆರು ಮಂದಿಯನ್ನು ವಶಕ್ಕೆ ಪಡೆದು, ಬಳಿಕ ಬಿಡುಗಡೆಗೊಳಿಸಲಾಗಿದೆ ಎಂದು ಪೊಲೀಸರು ತಿಳಿಸಿದರು.

‘ಪೊಲೀಸರ ನಡವಳಿಕೆ ಸಂಪೂರ್ಣ ಕಾನೂನುಬಾಹಿರ. ಸಂದೇಶ್‌ಖಾಲಿಯಲ್ಲಿ ಕರ್ಫ್ಯೂ ವಿಧಿಸದ ಕಾರಣ ನಾವು ಎರಡು ತಂಡಗಳಾಗಿ ತೆರಳುತ್ತೇವೆ ಎಂದು ಮನವಿ ಮಾಡಿದರೂ ಪೊಲೀಸರು ನಮ್ಮನ್ನು ತಡೆದಿದ್ದಾರೆ’ ಎಂದು ನರಸಿಂಹ ರೆಡ್ಡಿಆರೋಪಿಸಿದರು.

‘ಮಾನವ ಹಕ್ಕುಗಳ ಉಲ್ಲಂಘನೆ ಪ್ರಕರಣಗಳು ನಡೆದಿರುವ ಪ್ರದೇಶದ ಸಂತ್ರಸ್ತರನ್ನು ಭೇಟಿಯಾಗುವುದಕ್ಕೆ ನಾಗರಿಕ ಸಮಾಜದ ಪ್ರತಿನಿಧಿಗಳಿಗೆ ತಡೆಯೊಡ್ಡಿರುವುದು ಸರಿಯಲ್ಲ. ಜಿಲ್ಲಾಡಳಿತವು ಏನನ್ನು ಮರೆಮಾಚಲು ಯತ್ನಿಸುತ್ತಿದೆ’ ಎಂದು ಅವರು ಪ್ರಶ್ನಿಸಿದರು.

‘ಪೊಲೀಸರ ನಮ್ಮನ್ನು ತಡೆಯುವ ಮೂಲಕ ಪ್ರಜಾಪ್ರಭುತ್ವದ ಕಗ್ಗೊಲೆ ಮಾಡಿದ್ದಾರೆ. ನಮ್ಮನ್ನು ಕಾನೂನುಬಾಹಿರವಾಗಿ ವಶಕ್ಕೆ ಪಡೆಯಲಾಗಿದೆ’ ಎಂದು ಚಾರು ವಾಲಿ ಖನ್ನಾ ಆರೋಪಿಸಿದರು.

ಟಿಎಂಸಿ ಮುಖಂಡ ಶಹಜಹಾನ್‌ ಶೇಖ್‌ ಮತ್ತು ಸಹಚರರು ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಮತ್ತು ಭೂಮಿಯನ್ನು ಕಬಳಿಸಿದ್ದಾರೆ ಎಂದು ಆರೋಪಿಸಿ ಸಂದೇಶ್‌ಖಾಲಿಯ ಜನರು ಪ್ರತಿಭಟನೆ ಮುಂದುವರಿಸಿದ್ದಾರೆ.

ಸಂದೇಶ್‌ಖಾಲಿಗೆ ಮತ್ತೆ ಭೇಟಿ ನೀಡಿದ ಟಿಎಂಸಿ ನಿಯೋಗ

ಸಂಘರ್ಷಪೀಡಿತ ಸಂದೇಶ್‌ಖಾಲಿಗೆ ಆಡಳಿತಾರೂಢ ಟಿಎಂಸಿಯ ನಿಯೋಗವು ಭಾನುವಾರವೂ ಭೇಟಿ ನೀಡಿ ಜನರ ಅಹವಾಲು ಆಲಿಸಿದೆ. ಸಚಿವರಾದ‌ ಪಾರ್ಥ ಭೌಮಿಕ್‌ ಮತ್ತು ಸುಜಿತ್‌ ಬಸು ಅವರನ್ನೊಳಗೊಂಡ ನಿಯೋಗವು ಬರ್ಮಾಜೂರ್‌ ಪ್ರದೇಶಕ್ಕೆ ಭೇಟಿ ನೀಡಿದೆ. ಇದೇ ನಿಯೋಗವು ಶ‌ನಿವಾರವೂ ಸಂದೇಶ್‌ಖಾಲಿ ಪ್ರದೇಶಕ್ಕೆ ಭೇಟಿ ನೀಡಿತ್ತು. ‘ನಮಗೆ ಒಂದೂವರೆ ತಿಂಗಳ ಕಾಲಾವಕಾಶ ನೀಡಿ. ಭೂಮಿ ಕಬಳಿಸಿರುವುದಕ್ಕೆ ಸಂಬಂಧಿಸಿರುವ ಎಲ್ಲಾ ಪ್ರಕರಣಗಳನ್ನು ಪರಿಶೀಲಿಸಿ ಸಮಸ್ಯೆ ಬಗೆಹರಿಸಲಾಗುವುದು’ ಎಂದು ಭೌಮಿಕ್‌ ಅವರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.