ವಿಶ್ವಸಂಸ್ಥೆ: ಭದ್ರತಾ ಮಂಡಳಿಯಲ್ಲಿ ರಷ್ಯಾ ವಿರುದ್ಧ ಅಮೆರಿಕ ಮತ್ತು ಅಲ್ಬೇನಿಯಾ ಮಂಡಿಸಿದ ನಿರ್ಣಯದಿಂದ ಭಾರತ ದೂರ ಉಳಿದಿದೆ.
ಉಕ್ರೇನ್‌ಗೆ ಸೇರಿದ ಆಕ್ರಮಿತ ಪ್ರದೇಶಗಳಲ್ಲಿ ಜನಾಭಿಪ್ರಾಯ ಸಂಗ್ರಹ ಮಾಡಿರುವುದು, ಉಕ್ರೇನ್‌ನ ನಾಲ್ಕು ಪ್ರದೇಶಗಳನ್ನು ರಷ್ಯಾ ಸ್ವಾಧೀನಪಡಿಸಿಕೊಂಡಿರುವುದನ್ನು ಖಂಡಿಸಿ ನಿರ್ಣಯ ಮಂಡಿಸಲಾಗಿತ್ತು. ಇದರ ಜತೆಗೆ, ರಷ್ಯಾ ತನ್ನ ಸೇನಾ ಪಡೆಗಳನ್ನು ಉಕ್ರೇನ್‌ನಿಂದ ಕೂಡಲೇ ಹಿಂದಕ್ಕೆ ಕರೆಸಿಕೊಳ್ಳಬೇಕು ಎಂದು ನಿರ್ಣಯದಲ್ಲಿ ಆಗ್ರಹಿಸಲಾಗಿತ್ತು.
ಉಕ್ರೇನ್‌ನಲ್ಲಿ ಭಾಗಶಃ ವಶಪಡಿಸಿಕೊಂಡಿರುವ ನಾಲ್ಕು ಪ್ರದೇಶಗಳಾದ ಕೆರ್ಸಾನ್, ಝಪೋರಿಝಿಯಾ, ಲುಹಾನ್‌ಸ್ಕ್, ಡೊನೆಟ್‌ಸ್ಕ್ ಪ್ರದೇಶಗಳನ್ನು ರಷ್ಯಾಕ್ಕೆ ಸೇರ್ಪಡೆ ಮಾಡಿಕೊಳ್ಳುವ ಒಪ್ಪಂದಕ್ಕೆ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಶುಕ್ರವಾರ ಸಹಿ ಹಾಕಿದ್ದಾರೆ. ಇದರ ವಿರುದ್ಧ ನಿರ್ಣಯ ಮಂಡಿಸಲಾಗಿತ್ತು.
ಆದರೆ, ರಷ್ಯಾ ತನ್ನ ಮೇಲಿನ ಆರೋಪಗಳನ್ನು ವಿಟೊ ಅಧಿಕಾರ ಬಳಸಿ ನಿರಾಕರಿಸಿದೆ. ಇನ್ನೊಂದೆಡೆ, ಭದ್ರತಾ ಮಂಡಳಿಯ 15 ರಾಷ್ಟ್ರಗಳ ಪೈಕಿ 10 ರಾಷ್ಟ್ರಗಳು ಮಾತ್ರವೇ ನಿರ್ಣಯಕ್ಕೆ ಸಂಬಂಧಿಸಿದಂತೆ ಮತ ಚಲಾವಣೆ ಮಾಡಿದವು. ಭಾರತ ಸೇರಿದಂತೆ ನಾಲ್ಕು ರಾಷ್ಟ್ರಗಳು ಮತ ಹಾಕುವುದರಿಂದ ದೂರ ಉಳಿದವು. ಹೀಗಾಗಿ ನಿರ್ಣಯವು ಅಂಗೀಕಾರ ಪಡೆಯುವಲ್ಲಿ ವಿಫಲವಾಗಿದೆ.
‘ಬೆದರಿಕೆ ಅಥವಾ ಬಲ ಪ್ರಯೋಗದ ಮೂಲಕ ಒಂದು ರಾಷ್ಟ್ರವು ಮತ್ತೊಂದು ರಾಷ್ಟ್ರದ ಭೂಪ್ರದೇಶವನ್ನು ಸ್ವಾಧೀನಪಡಿಸಿಕೊಳ್ಳುವುದು ವಿಶ್ವಸಂಸ್ಥೆಯ ತತ್ವಗಳಿಗೆ ವಿರುದ್ಧವಾದದ್ದು. ಮತ್ತು, ಅಂತರರಾಷ್ಟ್ರೀಯ ಕಾನೂನಿನ ಉಲ್ಲಂಘನೆ’ ಎಂದು ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರೆಸ್ ಹೇಳಿದ್ದಾರೆ.
‘ಉಕ್ರೇನ್‌ನ ನಾಲ್ಕು ಪ್ರದೇಶಗಳನ್ನು ಸ್ವಾಧೀನಪಡಿಸಿಕೊಳ್ಳುವ ನಿರ್ಧಾರವು ಯಾವುದೇ ಕಾನೂನಾತ್ಮಕ ಮೌಲ್ಯವನ್ನು ಹೊಂದಿಲ್ಲ. ಅದು ಖಂಡನಾರ್ಹ’ ಎಂದು ಗುಟೆರೆಸ್ ಹೇಳಿದ್ದಾರೆ.
‘ರಷ್ಯಾದ ಕ್ರಮವನ್ನು ಅಂತರರಾಷ್ಟ್ರೀಯ ಕಾನೂನು ಚೌಕಟ್ಟಿನ ಒಳಗೆ ನೋಡಲು ಸಾಧ್ಯವೇ ಇಲ್ಲ. ಇಡೀ ಅಂತರರಾಷ್ಟ್ರೀಯ ಸಮುದಾಯವು ಯಾವುದರ ವಿರುದ್ಧ ನಿಂತಿದೆಯೋ, ಅದರ ಪರವಾಗಿ ರಷ್ಯಾದ ಈ ನಿರ್ಧಾರ ನಿಂತಿದೆ. ಇದು ವಿಶ್ವಸಂಸ್ಥೆಯ ಉದ್ದೇಶಗಳು ಮತ್ತು ತತ್ವಗಳನ್ನು ಉಲ್ಲಂಘಿಸುತ್ತದೆ. ಇದು ಅಪಾಯಕಾರಿ. ಆಧುನಿಕ ಜಗತ್ತಿನಲ್ಲಿ ಇದಕ್ಕೆ ಸ್ಥಾನವಿಲ್ಲ. ರಷ್ಯಾದ ಕ್ರಮವನ್ನು ಒಪ್ಪಿಕೊಳ್ಳಬಾರದು’ ಎಂದು ಅವರು ಹೇಳಿದರು.
ಇವುಗಳನ್ನೂ ಓದಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.