ನವದೆಹಲಿ: ವಿಶ್ವದ ವಾಹನ ಪ್ರಮಾಣದಲ್ಲಿಶೇ 1ರಷ್ಟನ್ನು ಮಾತ್ರ ಹೊಂದಿರುವಭಾರತದಲ್ಲಿ ರಸ್ತೆ ಅಪಘಾತಗಳಲ್ಲಿ ಮೃತಪಡುವವರ ಸಂಖ್ಯೆ ಜಾಗತಿಕವಾಗಿ ಶೇ11ರಷ್ಟಿದೆ ಎಂದು ವಿಶ್ವಬ್ಯಾಂಕ್‌ನ ವರದಿಯೊಂದು ಹೇಳಿದೆ.
ದೇಶದಲ್ಲಿ ವರ್ಷಕ್ಕೆ ಸುಮಾರು 4.5 ಲಕ್ಷ ಅಪಘಾತಗಳು ಸಂಭವಿಸುತ್ತಿದ್ದು, 1.5 ಲಕ್ಷ ಜನರು ಅಸುನೀಗುತ್ತಿದ್ದಾರೆ. ಇಲ್ಲಿ ಪ್ರತಿ ಗಂಟೆಗೆ 53 ರಸ್ತೆ ಅಪಘಾತಗಳು ಆಗುತ್ತಿವೆ. ಈ ಕಾರಣಕ್ಕೆ ಪ್ರತಿ ನಾಲ್ಕು ನಿಮಿಷಕ್ಕೆ ಒಬ್ಬರು ಸಾಯುತ್ತಿದ್ದಾರೆ ಎಂದು ವರದಿ ಉಲ್ಲೇಖಿಸಿದೆ.
ಕಳೆದ ದಶಕದಲ್ಲಿ ಭಾರತದಲ್ಲಿ ರಸ್ತೆ ಅಪಘಾತಗಳಿಂದಾಗಿ 13 ಲಕ್ಷ ಜನರು ಪ್ರಾಣ ಕಳೆದುಕೊಂಡಿದ್ದರೆ, 50 ಲಕ್ಷ ಜನರು ಗಾಯಗೊಂಡಿದ್ದಾರೆ.
ಕಡಿಮೆ ಮತ್ತು ಮಧ್ಯಮ ಆದಾಯದ ದೇಶಗಳಲ್ಲಿನ ರಸ್ತೆ ಸುರಕ್ಷತೆ ಅವಕಾಶಗಳು ಮತ್ತು ಸವಾಲುಗಳ (2019) ಕುರಿತ ವಿಶ್ವಬ್ಯಾಂಕ್‌ನ ವರದಿಯಲ್ಲಿ ಈ ಅಂಕಿ ಅಂಶಗಳನ್ನು ನೀಡಲಾಗಿದೆ.
2016ರಲ್ಲಿ ಭಾರತದಲ್ಲಿ ಸಂಭವಿಸಿದ ಅಪಘಾತಗಳಿಂದ ಆದ ವೆಚ್ಚ ಜಿಡಿಪಿಯ ಶೇ 7.5ಕ್ಕೆ ಅಥವಾ ₹12.9 ಲಕ್ಷ ಕೋಟಿ ಎಂದು ವರದಿಯಲ್ಲಿ ಅಂದಾಜಿಸಲಾಗಿದೆ. ಇದು ಸರ್ಕಾರ ಉಲ್ಲೇಖಿಸಿದ್ದ ಅಂಕಿ ಅಂಶಕ್ಕಿಂತ ಹೆಚ್ಚು ಎಂದು ಹೇಳಲಾಗಿದೆ.
ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ನಡೆಸಿದ ಇತ್ತೀಚಿನ ಅಧ್ಯಯನವು ಭಾರತದಲ್ಲಿ ರಸ್ತೆ ಅಪಘಾತಗಳ ಸಾಮಾಜಿಕ- ಆರ್ಥಿಕ ವೆಚ್ಚವನ್ನು ₹1,47,114 ಕೋಟಿ ಎಂದು ಅಂದಾಜಿಸಿತ್ತು. ಇದು ದೇಶದ ಜಿಡಿಪಿಯ ಶೇ 0.77ಕ್ಕೆ ಸಮನಾಗಿದೆ ಎಂದೂ ಪ್ರಸ್ತಾಪಿಸಿತ್ತು.
ವೈಯಕ್ತಿಕ ಹಂತದಲ್ಲಿ, ರಸ್ತೆ ಅಪಘಾತದಿಂದಾಗುವ ಸಾವು ನೋವುಗಳು ತೀವ್ರ ಆರ್ಥಿಕ ಹೊರೆ ಉಂಟುಮಾಡುತ್ತದೆಮತ್ತು ಕುಟುಂಬಗಳನ್ನು ಬಡತನಕ್ಕೆ ತಳ್ಳುತ್ತವೆ. ಕಡು ಬಡವರನ್ನು ಸಾಲದ ಶೂಲಕ್ಕೆ ಸಿಲುಕಿಸುತ್ತವೆ ಎಂದು ತಿಳಿಸಲಾಗಿದೆ.
ಸಚಿವಾಲಯದ ಪ್ರಕಾರ, ರಸ್ತೆ ಅಪಘಾತಗಳಲ್ಲಿ ಮೃತಪಡುತ್ತಿರುವವರ ಪೈಕಿ ಶೇ 76.2ರಷ್ಟು ಜನರು 18ರಿಂದ 45ರ ವಯೋಮಾನದವರು.
ರಸ್ತೆ ಅಪಘಾತಗಳಿಗೆ ಸಂಬಂಧಿಸಿದಂತೆ ಶನಿವಾರ ಮಾತನಾಡಿದ್ದ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು, ಭಾರತದಲ್ಲಿ ರಸ್ತೆ ಅಪಘಾತಗಳ ಸನ್ನಿವೇಶವು ಕೋವಿಡ್ 19ರ ಸಾಂಕ್ರಾಮಿಕಕ್ಕಿಂತ ಭೀಕರವಾಗಿದೆ. ಅಪಘಾತಗಳನ್ನು ತಡೆದು ಸಾವು, ನೋವುಗಳು ಆಗದಂತೆ ನೋಡಿಕೊಂಡರೆ ಪ್ರತಿ ವ್ಯಕ್ತಿಗೆ ₹ 90 ಲಕ್ಷ ಉಳಿತಾಯವಾಗಬಹುದು ಎಂದು ಅವರು ವಿವರಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.