ನವದೆಹಲಿ: ಭಾರತದ ಆಂತರಿಕ ವಿಷಯಗಳ ಕುರಿತು ವಿದೇಶಿಯರ ಅಪಪ್ರಚಾರದ ವಿರುದ್ಧ ಬಾಲಿವುಡ್ ಹಾಗೂ ಕ್ರೀಡಾ ತಾರೆಗಳು ತೀವ್ರ ಖಂಡನೆಯನ್ನು ವ್ಯಕ್ತಪಡಿಸಿದ್ದಾರೆ.
ದೆಹಲಿಯಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆ ಸಂಬಂಧ ಅಂತರರಾಷ್ಟ್ರೀಯ ಪಾಪ್ ತಾರೆ ರಿಹಾನ್ನಾ ಸೇರಿದಂತೆ ಅನೇಕ ವಿದೇಶಿ ಗಣ್ಯ ವ್ಯಕ್ತಿಗಳು ಪ್ರತಿಕ್ರಿಯಿಸಿದ್ದರು.
ಭಾರತದ ವಿಷಯಗಳ ಬಗ್ಗೆ ವಿದೇಶಿಯರು ಮಾತನಾಡಿರುವ ಬಗ್ಗೆತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಭಾರತೀಯ ಸೆಲೆಬ್ರಿಟಿಗಳು, ದೇಶದ ಆಂತರಿಕ ವಿಷಯಗಳಲ್ಲಿ ವಿದೇಶಿಯರು ಅಪಪ್ರಚಾರ ನಡೆಸುವ ಅಗತ್ಯವಿಲ್ಲ ಎಂದು ಹೇಳಿದ್ದಾರೆ.
ದೇಶದ ಆಂತರಿಕ ವಿಷಯಗಳಲ್ಲಿ ಬಾಹ್ಯ ಶಕ್ತಿಗಳು ಅಭಿಪ್ರಾಯಮಂಡಿಸಿರುವವಿರುದ್ಧ ಭಾರತ ವಿದೇಶಾಂಗ ಸಚಿವಾಲಯ ವಿಸೃತವಾದ ಪ್ರಕಟಣೆ ಹೊರಡಿಸಿತ್ತು. ಇದನ್ನು ಉಲ್ಲೇಖ ಮಾಡಿ ಸೆಲೆಬ್ರಿಟಿಗಳು ವಿದೇಶಿಯರ ಪ್ರಚಾರದ ವಿರುದ್ಧ ಟ್ವೀಟ್ ಮಾಡಿದ್ದಾರೆ.
#IndiaAgainstPropaganda #IndiaStandsTogether #IndiaTogether ಹ್ಯಾಶ್‌ಟ್ಯಾಗ್ ಅಡಿಯಲ್ಲಿ ಭಾರತೀಯ ಸೆಲೆಬ್ರಿಟಿಗಳ ಹೇಳಿಕೆಗಳು ಟ್ವಿಟರ್‌ನಲ್ಲಿ ಟ್ರೆಂಡ್ ಆಗಿವೆ.
ಈ ಸಂಬಂಧ ಬಾಲಿವುಡ್ ಹಾಗೂ ಕ್ರೀಡಾ ತಾರೆಗಳು ನೀಡಿರುವ ಪ್ರತಿಕ್ರಿಯೆಗಳು ಇಲ್ಲಿವೆ:
ಸಚಿನ್ ತೆಂಡೂಲ್ಕರ್:
ಭಾರತದ ಸಾರ್ವಭೌಮತ್ವದ ವಿಚಾರದಲ್ಲಿ ರಾಜಿ ಮಾಡಿಕೊಳ್ಳಲಾಗದು. ವಿದೇಶ ಶಕ್ತಿಗಳು ಪ್ರೇಕ್ಷಕರಾಗಬಹುದೇ ವಿನಹ ದೇಶದ ಒಳಗಿನ ವಿಚಾರದಲ್ಲಿ ಹಸ್ತಕ್ಷೇಪ ಮಾಡುವಂತಿಲ್ಲ. ಭಾರತ ಏನು ಎಂಬುದು ಮತ್ತು ಭಾರತಕ್ಕೆ ಏನು ಬೇಕು ಎಂಬುದನ್ನು ನಿರ್ಧರಿಸಲು ಭಾರತೀಯರಿಗೆ ಗೊತ್ತಿದೆ. ಒಂದು ದೇಶವಾಗಿ ನಾವು ಒಗ್ಗಟ್ಟಿನಿಂದಿರೋಣ ಎಂದು ಟ್ವೀಟ್ ಮಾಡಿದ್ದಾರೆ.
ವಿರಾಟ್ ಕೊಹ್ಲಿ:
ಭಿನ್ನಭಿಪ್ರಾಯಗಳ ಈ ಸಮಯದಲ್ಲಿ ನಾವೆಲ್ಲರೂ ಒಗ್ಗಟ್ಟಿನಿಂದ ಇರೋಣ. ರೈತರು ನಮ್ಮ ದೇಶದ ಅವಿಭಾಜ್ಯ ಅಂಗ. ಶಾಂತಿ ನೆಲೆಸಲು ಹಾಗೂ ಒಗ್ಗಟ್ಟಾಗಿ ಎಲ್ಲರೂ ಮುಂದುವರಿಯಲು ಎಲ್ಲ ಪಕ್ಷಗಳ ನಡುವೆ ಸೌಹಾರ್ದಯುತ ಪರಿಹಾರ ಸಿಗಲಿದೆ ಎಂಬುದರಲ್ಲಿ ನನಗೆ ಖಾತ್ರಿಯಿದೆ ಎಂದು ವಿರಾಟ್ ಕೊಹ್ಲಿ ತಿಳಿಸಿದರು.
ಅನಿಲ್ ಕುಂಬ್ಳೆ:
ಜಗತ್ತಿನ ಅತಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾಗಿ ಭಾರತ ದೇಶವು ತನ್ನ ಆಂತರಿಕ ಸಮಸ್ಯೆಗಳನ್ನು ಸೌಹಾರ್ದಯುತವಾಗಿ ಬಗೆಹರಿಸುವ ಸಾಮರ್ಥ್ಯ ಹೊಂದಿದೆ ಎಂದು ಅನಿಲ್ ಕುಂಬ್ಳೆ ತಿಳಿಸಿದ್ದಾರೆ.
ಅಜಿಂಕ್ಯ ರಹಾನೆ:
ನಾವು ಒಗ್ಗಟ್ಟಾಗಿ ನಿಂತರೆ ಪರಿಹರಿಸಲಾಗದ ಯಾವುದೇ ಸಮಸ್ಯೆ ಇಲ್ಲ. ನಾವು ಒಂದಾಗಿ ಇರೋಣ ಮತ್ತು ಆಂತರಿಕ ಸಮಸ್ಯೆಗಳನ್ನು ಬಗೆಹರಿಸಲು ಪ್ರಯತ್ನಿಸೋಣ ಎಂದು ರಹಾನೆ ಟ್ವೀಟ್ ಮಾಡಿದರು.
ಅಕ್ಷಯ್ ಕುಮಾರ್:
ರೈತರು ನಮ್ಮ ದೇಶದ ಅವಿಭಾಜ್ಯ ಅಂಗ. ಅವರ ಸಮಸ್ಯೆಗಳನ್ನು ಬಗೆಹರಿಸಲು ಕ್ರಮವನ್ನು ಕೈಗೊಳ್ಳಲಾಗಿದೆ. ಭಿನ್ನಭಿಪ್ರಾಯವನ್ನು ಸೃಷ್ಟಿಸುವ ಯಾರಿಗಾದರೂ ಗಮನಕೊಡುವ ಬದಲು ಅನೋನ್ಯ ಸೌರ್ಹಾದಯುತ ಪರಿಹಾರಕ್ಕಾಗಿ ಬೆಂಬಲಿಸೋಣ ಎಂದು ಹೇಳಿದರು.
ಅಜಯ್ ದೇವಗನ್:
ಭಾರತ ಹಾಗೂ ಅದರ ನೀತಿಗಳ ವಿರುದ್ಧ ಪ್ರಚಾರದಲ್ಲಿ ಮರುಳಾಗಬೇಡಿ. ಈ ಗಳಿಗೆಯಲ್ಲಿ ನಾವೆಲ್ಲರೂ ಒಗ್ಗಟ್ಟಾಗಿ ನಿಲ್ಲುವುದು ಅತಿ ಮುಖ್ಯ ಎಂದು ತಿಳಿಸಿದರು.
ಸುನಿಲ್ ಶೆಟ್ಟಿ:
ನಾವು ಯಾವತ್ತೂ ವಿಷಯಗಳ ಬಗ್ಗೆ ವಿಶಾಲವಾದ ದೃಷ್ಟಿಕೋನವನ್ನು ಹೊಂದಿರಬೇಕು. ಅರ್ಧ ಸತ್ಯಕ್ಕಿಂತ ಅಪಾಯಕಾರಿ ಬೇರೆ ಏನು ಇಲ್ಲ ಎಂದು ಹೇಳಿದ್ದಾರೆ.
ಕರಣ್ ಜೋಹರ್:
ನಾವು ಪ್ರಕ್ಷುಬ್ಧ ಕಾಲದಲ್ಲಿ ವಾಸಿಸುತ್ತೇವೆ. ಈ ಸಮಯದಲ್ಲಿ ವಿವೇಚನೆ ಹಾಗೂ ತಾಳ್ಮೆ ಅಗತ್ಯ. ಎಲ್ಲರೂ ಒಟ್ಟಾಗಿ ಸಮಸ್ಯೆಗೆ ಪರಿಹಾರ ಕಂಡುಹಿಡಿಯಲು ಪ್ರಯತ್ನಿಸೋಣ. ರೈತರು ದೇಶದ ಬೆನ್ನಲುಬು. ಯಾರಿಂದಲೂ ನಮ್ಮನ್ನು ವಿಭಜಿಸಲು ಬಿಡಬಾರದು ಎಂದು ಹೇಳಿದರು.
ಶಿಖರ್ ಧವನ್:
ಈಗಿನ ಸಂದರ್ಭದಲ್ಲಿ ನಮ್ಮ ಮಹಾನ್ ದೇಶಕ್ಕೆ ಪ್ರಯೋಜನವಾಗುವ ಪರಿಹಾರವನ್ನು ಕಂಡುಹಿಡಿಯುವುದು ಅತ್ಯಂತ ಮುಖ್ಯವೆನಿಸಿದೆ. ನಾವೆಲ್ಲ ಒಗ್ಗಟ್ಟಾಗಿ ನಿಂತು ಉಜ್ವಲ ಭವಿಷ್ಯದತ್ತ ಜೊತೆಯಾಗಿ ಸಾಗೋಣ ಎಂದು ತಿಳಿಸಿದರು.
ಸೈನಾ ನೆಹ್ವಾಲ್:
ರೈತರು ನಮ್ಮ ದೇಶದ ಬಹುಮುಖ್ಯ ಭಾಗವಾಗಿದ್ದಾರೆ. ಅವರ ಸಮಸ್ಯೆಗಳನ್ನು ಬಗೆಹರಿಸಲು ಪ್ರಯತ್ನಗಳನ್ನು ನಡೆಸುತ್ತಿರುವುದು ಸ್ಪಷ್ಟವಾಗಿದೆ. ವಿಭಜನೆಯನ್ನು ಸೃಷ್ಟಿಸುವ ಯಾರಿಗಾದರೂ ಗಮನಕೊಡುವ ಬದಲು ಅನೋನ್ಯ ಸೌರ್ಹಾದಯುತ ಪರಿಹಾರಕ್ಕಾಗಿ ಬೆಂಬಲಿಸೋಣ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.