ADVERTISEMENT

ಕ್ರಿಮಿನಲ್ ಪ್ರಕರಣಗಳಲ್ಲಿ ಶಿಕ್ಷೆ ನೀಡುವ ನಿಯಮ ಪರಿಷ್ಕರಿಸಲು ಕೇಂದ್ರ ಚಿಂತನೆ

ರಾಯಿಟರ್ಸ್
Published 5 ನವೆಂಬರ್ 2024, 16:27 IST
Last Updated 5 ನವೆಂಬರ್ 2024, 16:27 IST
   

ನವದೆಹಲಿ: ಅನೇಕ ಪ್ರಕರಣಗಳಲ್ಲಿ ನ್ಯಾಯಾಧೀಶರು ಸಮರ್ಪಕ ವಿಚಾರಣೆ ನಡೆಸುವುದಿಲ್ಲ ಹಾಗೂ ಮನಸ್ಸಿಗೆ ತೋಚಿದಂತೆ ಶಿಕ್ಷೆ ಪ್ರಕಟಿಸುತ್ತಿದ್ದಾರೆ ಎಂಬ ಆರೋಪಗಳು ಕೇಳಿಬಂದ ಕಾರಣ, ಕ್ರಿಮಿನಲ್ ಪ್ರಕರಣಗಳಲ್ಲಿ ಶಿಕ್ಷೆ ನೀಡುವ ನಿಯಮಗಳನ್ನು ಪರಿಷ್ಕರಿಸಲು ಕೇಂದ್ರ ಸರ್ಕಾರ ಮುಂದಾಗಿದೆ.

ಕಾನೂನು ಸಚಿವಾಲಯವು ಈ ಕುರಿತ ಯೋಜನೆಯನ್ನು ಸುಪ್ರೀಂ ಕೋರ್ಟ್‌ಗೆ ಡಿಸೆಂಬರ್‌ ವೇಳೆಗೆ ಸಲ್ಲಿಸಲಿದೆ ಎಂದು ಮೂಲಗಳು ಹೇಳಿವೆ.

ನ್ಯಾಯಾಲಯ ವಿಧಿಸುವ ಶಿಕ್ಷೆ ಅಪರಾಧಕ್ಕೆ ತಕ್ಕಂತೆ ಇರಬೇಕು, ಇದನ್ನು ಖಾತ್ರಿಪಡಿಸಲು ಸೂಕ್ತ ವ್ಯವಸ್ಥೆಯೊಂದನ್ನು ರೂಪಿಸಲು ಸರ್ಕಾರ ಚಿಂತನೆ ನಡೆಸಿದೆ. ಅಲ್ಲದೇ, ಬ್ರಿಟನ್‌, ಕೆನಡಾ ಹಾಗೂ ನ್ಯೂಜಿಲೆಂಡ್‌ನಲ್ಲಿರುವ ನ್ಯಾಯಾಂಗ ವ್ಯವಸ್ಥೆಯನ್ನೇ ಹೋಲುವ ನ್ಯಾಯದಾನ ವ್ಯವಸ್ಥೆಯನ್ನು ಇಲ್ಲಿಯೂ ರೂಪಿಸಲು ಯೋಜಿಸಿದೆ ಎಂದು ಮೂಲಗಳು ಹೇಳಿವೆ.

ADVERTISEMENT

2022ರಲ್ಲಿ, ಅತ್ಯಾಚಾರ ಪ್ರಕರಣವೊಂದರ ವಿಚಾರಣೆ ನಡೆಸಿದ್ದ ಬಿಹಾರದ ನ್ಯಾಯಾಲಯವೊಂದು, 30 ನಿಮಿಷದಲ್ಲಿಯೇ ವಿಚಾರಣೆ ಪೂರ್ಣಗೊಳಿಸಿ ವ್ಯಕ್ತಿಗೆ ಮರಣ ದಂಡನೆ ವಿಧಿಸಿತ್ತು. ಈ ಬಗ್ಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. 

ಇದಾದ ಬಳಿಕ, ತೀರ್ಪು ರದ್ದುಗೊಳಿಸಿದ್ದ ಬಿಹಾರ ಹೈಕೋರ್ಟ್‌, ಪ್ರಕರಣ ಕುರಿತು ಮರು ವಿಚಾರಣೆ ನಡೆಸುವಂತೆ ಆದೇಶಿಸಿತ್ತು. ‘ವ್ಯಕ್ತಿಗೆ ತನ್ನ ಪರ ವಾದ ಮಂಡನೆಗೆ ಅವಕಾಶವನ್ನೇ ನೀಡಿಲ್ಲ. ಅಲ್ಲದೇ, ಈ ವಿಷಯದಲ್ಲಿ ನ್ಯಾಯಾಧೀಶರು ಬಹಳ ಅವಸರದಿಂದ ನಿರ್ಣಯ ಪ್ರಕಟಿಸಿದ್ದಾರೆ’ ಎಂದೂ ಹೈಕೋರ್ಟ್‌ ಹೇಳಿತ್ತು. 

ಈ ಘಟನೆ ನಂತರ, ಶಿಕ್ಷೆ ಪ್ರಕಟಿಸುವ ನಿಯಮಗಳ ಪರಿಷ್ಕರಣೆಗೆ ಸಂಬಂಧಿಸಿ ಸಮಗ್ರ ನೀತಿ ರೂಪಿಸುವಂತೆ ಕೇಂದ್ರಕ್ಕೆ ಸುಪ್ರೀಂ ಕೋರ್ಟ್‌ ಸೂಚಿಸಿತ್ತು.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.