ರಾಮಪುರಹಟ್ (ಪಶ್ಚಿಮ ಬಂಗಾಳ): ವಿಪಕ್ಷಗಳ ಇಂಡಿಯಾ ಮೈತ್ರಿಕೂಟ ಕೇವಲ 2024ರ ಲೋಕಸಭೆಗೆ ಮಾತ್ರ ಸೀಮಿತ. ಯಾವುದೇ ರಾಜ್ಯಗಳ ವಿಧಾನಸಭೆ ಚುನಾವಣೆಗೆ ಈ ಮೈತ್ರಿ ಅನ್ವಯವಾಗುವುದಿಲ್ಲ ಎಂದು ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಹೇಳಿದ್ದಾರೆ.
ಇಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಮಹಾರಾಷ್ಟ್ರದಲ್ಲಿ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್, ಎನ್‌ಸಿಪಿ ಹಾಗೂ ಶಿವಸೇನಾದ ಮೈತ್ರಿಕೂಟ ಒಟ್ಟಾಗಿ ಸ್ಪರ್ಧಿಸಲಿದೆ. ಬೇರೆ ರಾಜ್ಯಗಳಲ್ಲಿ ಇಂಡಿಯಾ ಒಕ್ಕೂಟದ ಪಕ್ಷಗಳೊಂದಿಗೆ ಮೈತ್ರಿ ಇಲ್ಲ’ ಎಂದು ಹೇಳಿದ್ದಾರೆ.
‘ಲೋಕಸಭೆ ಚುನಾವಣೆಯಲ್ಲಿ ಇಂಡಿಯಾ ಮೈತ್ರಿಕೂಟದ 27 ಪಕ್ಷಗಳು ಒಗ್ಗಟ್ಟಾಗಿ ಚುನಾವಣೆ ಎದುರಿಸಲಿವೆ. ಬಿಜೆಪಿ ಹಾಗೂ ಆರ್.ಎಸ್.ಎಸ್. ಸಿದ್ಧಾಂತಗಳನ್ನು ಸೋಲಿಸಲು ಇಂಡಿಯಾ ಒಕ್ಕೂಟವನ್ನು ರಚಿಸಲಾಗಿದೆ’ ಎಂದಿದ್ದಾರೆ.
‘ಲೋಕಸಭಾ ಚುನಾವಣೆಯ ದೃಷ್ಠಿಯಿಂದ ಭಾರತ ಜೋಡೊ ನ್ಯಾಯ ಯಾತ್ರೆಯು ಲಾಭವಾಗಲಿದೆ. ಇದೊಂದು ರಾಜಕೀಯ ಕಾರ್ಯಕ್ರಮವಾಗಿದ್ದು, ಚುನಾವಣಾ ಪ್ರಚಾರ ಅಲ್ಲ. ಬಿಜೆಪಿಯೊಂದಿಗೆ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಕೈಜೋಡಿಸದ ಪಕ್ಷವೊಂದಿದ್ದರೆ ಅದು ಕಾಂಗ್ರೆಸ್ ಮಾತ್ರ’ ಎಂದು ಅವರು ನುಡಿದಿದ್ದಾರೆ.
‘ದೇಶದ ಪ್ರಜಾಪ್ರಭುತ್ವ ಅಪಾಯದಲ್ಲಿದ್ದು, ಹೀಗಾಗಿ ಬಿಜೆಪಿಯನ್ನು ಸೋಲಿಸುವುದು ಅನಿವಾರ್ಯ. ಈ ಯಾತ್ರೆಯಿಂದ ಕಾಂಗ್ರೆಸ್ ಸಂಘಟನೆಗೆ ಹೊಸ ಶಕ್ತಿ ಬಂದಿದೆ’ ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.