ADVERTISEMENT

ಜೂನ್‌ 4ಕ್ಕೆ ‘ಇಂಡಿಯಾ’ ಮೈತ್ರಿಕೂಟ ಸರ್ಕಾರ ರಚಿಸಲಿದೆ: ಅರವಿಂದ ಕೇಜ್ರಿವಾಲ್‌

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 16 ಮೇ 2024, 6:13 IST
Last Updated 16 ಮೇ 2024, 6:13 IST
   

ಲಖನೌ: ‘ಬಿಜೆಪಿಯು 220ಕ್ಕಿಂತಲೂ ಕಡಿಮೆ ಸ್ಥಾನಗಳನ್ನು ಗೆಲ್ಲಲಿದೆ ಎಂದು ಈಗಿನ ಟ್ರೆಂಡ್ ಹೇಳುತ್ತಿದೆ. ಹರಿಯಾಣ, ದೆಹಲಿ, ಪಂಜಾಬ್, ಕರ್ನಾಟಕ, ಮಹಾರಾಷ್ಟ್ರ, ಪಶ್ಚಿಮ ಬಂಗಾಳ, ಉತ್ತರ ಪ್ರದೇಶ, ಬಿಹಾರ, ಜಾರ್ಖಂಡ್ ಮತ್ತು ರಾಜಸ್ಥಾನದಲ್ಲಿ ಬಿಜೆಪಿಗೆ ಹಿನ್ನಡೆಯಾಗಲಿದೆ. ಜೂನ್‌ 4ರಂದು ಇಂಡಿಯಾ ಮೈತ್ರಿಕೂಟ ಸರ್ಕಾರ ರಚಿಸಲಿದೆ’ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ವಿಶ್ವಾಸ ವ್ಯಕ್ತಪಡಿಸಿದರು.

ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್‌ ಅವರ ಜತೆ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೇಜ್ರಿವಾಲ್‌, ‘ಸಂವಿಧಾನವನ್ನು ರಕ್ಷಿಸಲು ಇಂಡಿಯಾ ಮೈತ್ರಿಕೂಟಕ್ಕೆ ಮತ ಹಾಕುವಂತೆ ಉತ್ತರ ಪ್ರದೇಶದ ಜನರಲ್ಲಿ ವಿನಂತಿ ಮಾಡುತ್ತೇನೆ’ ಎಂದರು.

‘ನಾನು ಇಲ್ಲಿ ನಾಲ್ಕು ವಿಷಯಗಳ ಬಗ್ಗೆ ಮಾತನಾಡಲು ಬಯಸುತ್ತೇನೆ. ಮೊದಲನೆಯದಾಗಿ ಈ ಚುನಾವಣೆಯಲ್ಲಿ ಪ್ರಧಾನಿ ಮೋದಿ ಅವರು ಅಮಿತ್ ಶಾ ಅವರನ್ನು ಪ್ರಧಾನಿ ಮಾಡಲು ಮತ ಕೇಳುತ್ತಿದ್ದಾರೆ. ಎರಡನೆಯದಾಗಿ ಬಿಜೆಪಿ ಅಧಿಕಾರಕ್ಕೆ ಬಂದರೆ ಮೂರು ತಿಂಗಳೊಳಗೆ ಮುಖ್ಯಮಂತ್ರಿ ಸ್ಥಾನದಿಂದ ಯೋಗಿ ಆದಿತ್ಯನಾಥ್ ಅವರನ್ನು ಕೆಳಗಿಳಿಸಲಿದೆ. ಮೂರನೆಯದಾಗಿ ಸಂವಿಧಾನವನ್ನು ಬದಲಾಯಿಸುವ ಮೂಲಕ ಬಿಜೆಪಿಯವರು ಮೀಸಲಾತಿಯನ್ನು ತೆಗೆದುಹಾಕಲಿದ್ದಾರೆ. ನಾಲ್ಕನೆಯದಾಗಿ ಜೂನ್ 4ರಂದು ಇಂಡಿಯಾ ಮೈತ್ರಿಕೂಟ ಸರ್ಕಾರ ರಚಿಸಲಿದೆ’ ಎಂದರು.

ADVERTISEMENT

‘ಮಣಿಪುರದಲ್ಲಿ ನಡೆದ ಘಟನೆಯನ್ನು ನೋಡಿ ಇಡೀ ದೇಶವೇ ಮರುಗಿತ್ತು ಆದರೆ ಪ್ರಧಾನಿ ಅವರು ಮಾತ್ರ ಮೌನವಾಗಿದ್ದರು. ಸಾವಿರಾರು ಮಹಿಳೆಯರ ಮೇಲೆ ಅತ್ಯಾಚಾರವೆಸಗಿದ ಸಂಸದ ಪ್ರಜ್ವಲ್ ರೇವಣ್ಣ ಪರ ಮೋದಿ ಮತಯಾಚಿಸಿದ್ದಾರೆ. ಮಹಿಳಾ ಕುಸ್ತಿಪಟುಗಳು ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸುತ್ತಿದ್ದಾಗ ಅಲ್ಲಿಗೆ ತೆರಳಿದ್ದ ದೆಹಲಿ ಮಹಿಳಾ ಆಯೋಗದ ಆಗಿನ ಅಧ್ಯಕ್ಷೆ ಸ್ವಾತಿ ಮಲಿವಾಲ್‌ ಅವರನ್ನು ಥಳಿಸಲಾಯಿತು. ಈ ಎಲ್ಲ ವಿಚಾರಗಳ ಬಗ್ಗೆ ಪ್ರಧಾನಿ ಮೋದಿ ಮೌನ ವಹಿಸಿದ್ದರು’ ಎಂದು ಕಿಡಿಕಾರಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.