ADVERTISEMENT

ಗಡಿಯಿಂದ ಸೇನೆ ವಾಪಸು ಪ್ರಸ್ತಾಪ: ಭಾರತ–ಚೀನಾ ನಡುವೆ ಸುದೀರ್ಘ ಚರ್ಚೆ

ಪಿಟಿಐ
Published 25 ಜನವರಿ 2021, 6:01 IST
Last Updated 25 ಜನವರಿ 2021, 6:01 IST
ಪೂರ್ವ ಲಡಾಖ್ (ಸಂಗ್ರಹ ಚಿತ್ರ)
ಪೂರ್ವ ಲಡಾಖ್ (ಸಂಗ್ರಹ ಚಿತ್ರ)   

ನವದೆಹಲಿ: ಪೂರ್ವ ಲಡಾಖ್‌ ಭಾಗದಿಂದ ಸೇನೆ ತುಕಡಿಗಳನ್ನು ವಾಪಸು ಕರೆಸಿಕೊಳ್ಳುವ ಕುರಿತಂತೆ ಭಾರತ ಮತ್ತು ಚೀನಾ ಸೇನೆ ಅಧಿಕಾರಿಗಳ ನಡುವೆ ಸುದೀರ್ಘ ಅಂದರೆ ಸುಮಾರು 16 ಗಂಟೆ ವಿಸ್ತೃತ ಚರ್ಚೆಯಾಗಿದೆ ಎಂದು ಸೇನೆ ಮೂಲಗಳು ಸೋಮವಾರ ತಿಳಿಸಿವೆ.

ಸೇನೆಯ ಕಮಾಂಡರ್‌ ಹಂತದ ಮಾತುಕತೆಯು ಭಾನುವಾರ ಬೆಳಿಗ್ಗೆ 10.30 ಗಂಟೆಗೆ ಆರಂಭವಾಗಿ, ಸೋಮವಾರ ಬೆಳಗಿನ ಜಾವ 2.30 ಗಂಟೆಗೆ ಮುಗಿದಿದೆ. ವಾಸ್ತವ ಗಡಿ ನಿಯಂತ್ರಣ ರೇಖೆಗೆ ಹೊಂದಿಕೊಂಡು, ಪೂರ್ವ ಲಡಾಖ್‌ನಲ್ಲಿ ಚೀನಾ ಸರಹದ್ದಿನಲ್ಲಿರುವ ಮೊಲ್ಡೊ ಗಡಿಯಲ್ಲಿ ಚರ್ಚೆ ನಡೆಯಿತು ಎಂದು ಮೂಲಗಳು ವಿವರಿಸಿವೆ.

ಆದರೆ, ಮಾತುಕತೆಯ ಫಲಶ್ರುತಿ ಸದ್ಯ ತಿಳಿದುಬಂದಿಲ್ಲ. ಚರ್ಚೆಗೆ ಹತ್ತಿರವಾಗಿದ್ದವರ ಪ್ರಕಾರ, ಪೂರ್ವಲಡಾಖ್‌ನಲ್ಲಿ ಆಯಕಟ್ಟಿನ ಸ್ಥಳಗಳಿಂದ ಚೀನಾ ತನ್ನ ಸೇನೆಯ ತುಕಡಿಗಳನ್ನು ವಾಪಸು ಕರೆಸು ಪ್ರಕ್ರಿಯೆಯನ್ನು ತ್ವರಿತವಾಗಿ ಕೈಗೊಳ್ಳಬೇಕು ಎಂದು ಭಾರತ ಬಲವಾಗಿ ಪ್ರತಿಪಾದಿಸಿದೆ.

ADVERTISEMENT

ಎಲ್ಲ ಆಯಕಟ್ಟಿನ ಸ್ಥಳಗಳಿಂದ ಸೇನೆಯ ತುಕಡಿಯನ್ನು ಹಿಂಪಡೆಯುವ ಕಾರ್ಯ, ಉಭಯ ಕಡೆಯೂ ಏಕಕಾಲದಲ್ಲಿ ನಡೆಯಬೇಕು. ಭಾಗಶಃ ಹಿಂಪಡೆಯುವ ಪ್ರಕ್ರಿಯೆಯು ಒಪ್ಪಿತವಲ್ಲ ಎಂದೂ ಭಾರತ ತನ್ನ ನಿಲುವನ್ನು ಸ್ಪಷ್ಟಪಡಿಸಿದೆ.

ಪೂರ್ವ ಲಡಾಖ್‌ ಭಾಗದಲ್ಲಿ ಉಭಯ ಭಾಗದಲ್ಲಿ ಸುಮಾರು 1 ಲಕ್ಷದಷ್ಟು ಚೀನಾ ಮತ್ತು ಭಾರತದ ಯೋಧರು ಜಮಾವಣೆಗೊಂಡಿದ್ದಾರೆ. ಸೌಹಾರ್ದ ಪರಿಹಾರಕ್ಕಾಗಿ ರಾಜತಾಂತ್ರಿಕ ಮತ್ತು ಸೇನಾ ಹಂತದ ಮಾತುಕತೆ ನಡೆಯುತ್ತಿದ್ದರೂ ಗಡಿಭಾಗದಲ್ಲಿ ಅನಿಶ್ಚಿತತೆಯ ಸ್ಥಿತಿ ಮುಂದುವರಿದಿದೆ.

ಭಾರತದ ಸ್ಪಷ್ಟ ನಿಲುವನ್ನು ಪ್ರತಿಪಾದಿಸುತ್ತ ಸೇನೆ ಮುಖ್ಯಸ್ಥ ಜನರಲ್ ಎಂ.ಎಂ.ನರವಣೆ ಅವರು ಸುಮಾರು ಎರಡು ವಾರ ಹಿಂದಷ್ಟೇ, ರಾಷ್ಟ್ರೀಯ ಗುರಿ ಮತ್ತು ಉದ್ದೇಶಸಾಧನೆವರೆಗೂ ದೇಶಿಯ ಸೇನೆ ನೆಲೆ ಇರಲಿದೆ ಎಂದಿದ್ದರು. ಚರ್ಚೆಯಲ್ಲಿ ಸೌಹಾರ್ದ ಪರಿಹಾರ ಸಿಗಲಿದೆ ಎಂದೂ ಆಶಿಸಿದ್ದರು.

ಪೀಪಲ್ಸ್ ಲಿಬರೇಷನ್‌ ಆರ್ಮಿಗೆ ಸೇರಿದ ಯೋಧನೊಬ್ಬನನ್ನು ಭಾರತವು ಚೀನಾಗೆ ಒಪ್ಪಿಸಿದ ಎರಡು ವಾರದ ತರುವಾಯ ಭಾನುವಾರದ ಮಾತುಕತೆ ನಡೆದಿದೆ. ಯೋಧನನ್ನು ಒಪ್ಪಿಸಿದ ಭಾರತದ ನಡೆಯು ಸಕಾರಾತ್ಮಕ ಅಭಿಪ್ರಾಯವನ್ನು ಧ್ವನಿಸಿದೆ ಎಂದು ತಿಳಿದುಬಂದಿದೆ.

ಮಾತುಕತೆಯಲ್ಲಿ ಭಾರತದ ನಿಯೋಗದ ನೇತೃತ್ವವನ್ನು ಲೆಫ್ಟಿನಂಟ್ ಜನರಲ್ ಪಿಜಿಕೆ ಮೆನನ್ ಭಾಗವಹಿಸಿದ್ದರು. ಒಟ್ಟಾರೆಯಾಗಿ, ಕಳೆದ ವರ್ಷದ ಏಪ್ರಿಲ್ ತಿಂಗಳಿನಲ್ಲಿ ಪೂರ್ವಲಡಾಖ್ ಭಾಗದಲ್ಲಿ ಇದ್ದ ಯಥಾಸ್ಥಿತಿ ಕಾಯ್ದುಕೊಳ್ಳಬೇಕು ಎಂಬುದು ಭಾರತದ ಆಗ್ರಹವಾಗಿದೆ. ಅನಿಶ್ಚಿತ ಸ್ಥಿತಿ, ಸೇನೆಗಳ ಮುಖಾಮುಖಿ ಮೇ 5ರಂದು ಆರಂಭವಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.