ದಾರ್ ಎಸ್ ಸಲಾಮ್ (ತಾಂಜಾನಿಯಾ): ಭಾರತ ಮತ್ತು ತಾಂಜಾನಿಯಾ ಸ್ಥಳೀಯ ಕರೆನ್ಸಿ ಮೂಲಕ ವ್ಯವಹಾರ ಆರಂಭಿಸಿವೆ. ಇದರಿಂದ ಉಭಯ ದೇಶಗಳ ವಾಣಿಜ್ಯ ವ್ಯವಹಾರಗಳಿಗೆ ಉತ್ತೇಜನ ದೊರಕಲಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್ ಶನಿವಾರ ಹೇಳಿದರು.
ಕಾರ್ಯಕ್ರಮದಲ್ಲಿ ಕೈಗಾರಿಕೋದ್ಯಮಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ಉಭಯ ದೇಶಗಳ ನಡುವಣ ದ್ವಿಪಕ್ಷೀಯ ವ್ಯಾಪಾರವು ಬಲಿಷ್ಠವಾಗಿ ಬೆಳೆಯುತ್ತಿದೆ. 2022–23ನೇ ಸಾಲಿನಲ್ಲಿ ₹52,873 ಕೋಟಿ (6.4 ಬಿಲಿಯನ್ ಡಾಲರ್) ತಲುಪಿದೆ ಎಂದು ತಿಳಿಸಿದರು.
ಬ್ಯಾಂಕ್ ಆಫ್ ಇಂಡಿಯಾ, ಬ್ಯಾಂಕ್ ಆಫ್ ಬರೋಡ ಮತ್ತು ಕೆನರಾ ಬ್ಯಾಂಕ್‌ಗಳು ತಾಂಜಾನಿಯಾದಲ್ಲಿ ಕಾರ್ಯನಿರ್ವಹಿಸುತ್ತಿವೆ.
ತಾಂಜಾನಿಯಾ ಅಧ್ಯಕ್ಷೆ ಭೇಟಿ: ಜೈಶಂಕರ್ ಅವರು ತಾಂಜಾನಿಯಾ ಅಧ್ಯಕ್ಷೆ ಸಮಿಯಾ ಹಸನ್ ಅವರನ್ನು ಭೇಟಿ ಮಾಡಿದರು. ಈ ವೇಳೆ ರಕ್ಷಣೆ, ಭದ್ರತೆ, ಸಾಮರ್ಥ್ಯ ವೃದ್ಧಿ ಸೇರಿದಂತೆ ವಿವಿಧ ವಲಯಗಳ ದ್ವಿಪಕ್ಷೀಯ ಸಂಬಂಧ ವೃದ್ಧಿ ಕುರಿತು ಚರ್ಚೆ ನಡೆಸಿದರು.
ವಿದೇಶಾಂಗ ವ್ಯವಹಾರಗಳ ಸಚಿವ ಡಾ.ಸ್ಟೆರ್ಗೊಮೆನಾ ಟಾಕ್ಸ್ ಅವರೊಂದಿಗೂ ಮಾತುಕತೆ ನಡೆಸಿದರು. ಈ ವೇಳೆ ತಾಂಜಾನಿಯಾ ಜತೆಗಿನ ಬಾಂಧವ್ಯ ವೃದ್ಧಿಗೆ ಭಾರತ ಬದ್ಧ ಎಂದು ಹೇಳಿದರು.
ವಿವೇಕಾನಂದ ಪುತ್ಥಳಿ ಅನಾವರಣ:
ಇಲ್ಲಿನ ಭಾರತೀಯ ಸಾಂಸ್ಕೃತಿಕ ಕೇಂದ್ರದಲ್ಲಿ ಸ್ಥಾಪಿಸಲಾದ ಸ್ವಾಮಿ ವಿವೇಕಾನಂದ ಪುತ್ಥಳಿಯನ್ನು ಎಸ್.ಜೈಶಂಕರ್ ಅನಾವರಣಗೊಳಿಸಿದರು.
ಈ ವೇಳೆ ಮಾತನಾಡಿದ ಅವರು, ‘ಮಾನವ ಕುಲಕ್ಕೆ ನಂಬಿಕೆಯ ಸಂದೇಶ ಸಾರಿದ ವಿವೇಕಾನಂದರ ಕಾಲಾತೀತ ಬೋಧನೆಗಳಿಗೆ ಇದು ಸಾಕ್ಷಿಯಾಗಿ ನಿಲ್ಲುತ್ತದೆ’ ಎಂದು ತಿಳಿಸಿದರು.
‘ಶ್ರೇಷ್ಠ ಆಧ್ಯಾತ್ಮಿಕ ನಾಯಕರೊಬ್ಬರ ಪುತ್ಥಳಿ ಅನಾವರಣಗೊಳಿಸುತ್ತಿರುವುದು ಅವಿಸ್ಮರಣೀಯ ಗಳಿಗೆ’ ಎಂದು ಬಣ್ಣಿಸಿದರು.
‘ಸಾಂಸ್ಕೃತಿಕ ಕೇಂದ್ರವು ಭಾರತದ ಸಂಸ್ಕೃತಿಗೆ ಉತ್ತೇಜನ ನೀಡುವ ಜೊತೆಗೆ ತಾಂಜಾನಿಯಾ ಸಂಸ್ಕೃತಿಯನ್ನೂ ಭಾರತಕ್ಕೆ ಪರಿಚಯಿಸುತ್ತಿದೆ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.