ADVERTISEMENT

2012ರಲ್ಲಿಯೇ ಭಾರತಕ್ಕೆ ಉಪಗ್ರಹ ನಿಗ್ರಹ ಕ್ಷಿಪಣಿ ತಂತ್ರಜ್ಞಾನ ಸಿದ್ಧಿಸಿತ್ತು !

ಐದು ವರ್ಷ ತಡವಾಯ್ತು ಅನುಷ್ಠಾನ

​ಪ್ರಜಾವಾಣಿ ವಾರ್ತೆ
Published 27 ಮಾರ್ಚ್ 2019, 20:39 IST
Last Updated 27 ಮಾರ್ಚ್ 2019, 20:39 IST
   

ನವದೆಹಲಿ: ಭಾರತವು ಈಗ ವಿಶ್ವದ ‘ಸ್ಪೇಸ್‌ ಸೂಪರ್‌ಪವರ್’ (ಬಾಹ್ಯಾಕಾಶ ಶಕ್ತ) ರಾಷ್ಟ್ರವಾಗಿದೆ. ವಿಶ್ವದಲ್ಲಿ ಈಗ ಅಮೆರಿಕ, ರಷ್ಯಾ ಮತ್ತು ಚೀನಾಗಳಿಗೆ ಮಾತ್ರ ಉಪಗ್ರಹಗಳನ್ನು ಹೊಡೆದುರುಳಿಸುವ ಸಾಮರ್ಥ್ಯ ಇದೆ. ಈ ಸಾಲಿನಲ್ಲಿಭಾರತದ ಹೆಸರೂ ಸೇರುವಂಥ ಮಹತ್ತರ ಸಾಧನೆಯನ್ನುರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯ (ಡಿಆರ್‌ಡಿಒ) ವಿಜ್ಞಾನಿಗಳು ಮಾಡಿದ್ದಾರೆ.

‘ಭಾರತವುಉಪಗ್ರಹ ನಿಗ್ರಹ ಕ್ಷಿಪಣಿ ಪ್ರಯೋಗಿಸಿ ಕೆಳ ಕಕ್ಷೆಯಲ್ಲಿದ್ದ (ಭೂಮಿಯ ಸನಿಹ) ಉಪಗ್ರಹವನ್ನು ಹೊಡೆದುರುಳಿಸಿತು. ಮಿಷನ್ ಶಕ್ತಿ ಯೋಜನೆಯಡಿ ನಮ್ಮ ವಿಜ್ಞಾನಿಗಳು ಈ ಸಾಧನೆ ಮಾಡಿದ್ದಾರೆ. ಕೇವಲ ಮೂರು ನಿಮಿಷಗಳಲ್ಲಿ ಕಾರ್ಯಾಚರಣೆ ಪೂರ್ಣಗೊಂಡಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಬುಧವಾರ ಬೆಳಿಗ್ಗೆ ದೇಶವನ್ನು ಉದ್ದೇಶಿಸಿ ಮಾಡಿದಭಾಷಣದಲ್ಲಿ ತಿಳಿಸಿದ್ದರು.

ಬುಧವಾರ ಬೆಳಗ್ಗೆ 11.45- 12 ಗಂಟೆಯೊಳಗೆ ತಾನು ಮಹತ್ವದ ಸಂದೇಶವೊಂದನ್ನು ನೀಡಲಿದ್ದೇನೆ ಎಂದು ಮೋದಿ ಟ್ವೀಟಿಸಿದ್ದರು. ಮೋದಿ ಏನು ಹೇಳುತ್ತಾರೆ ಎಂಬ ಕುತೂಹಲದಿಂದ ದೇಶದ ಜನರು ಕಾದು ಕುಳಿತಿದ್ದರು.ಹೇಳಿದ ಸಮಯಕ್ಕಿಂತ ತುಸು ತಡವಾಗಿ ಭಾಷಣ ಆರಂಭಿಸಿದ ಮೋದಿ, ‘ಮಿಷನ್ ಶಕ್ತಿ’ ಬಗ್ಗೆ ಮಾತನಾಡಿದರು.

ADVERTISEMENT

ಮೋದಿ ಹೇಳಿದ್ದೇನು?

‘ಭೂಮಿಗೆ ಸನಿಹದ ಕಕ್ಷೆಯಲ್ಲಿದ್ದ (Low Earth Orbit – LEO) ಉಪಗ್ರಹವನ್ನು ಹೊಡೆದುರುಳಿಸಿದ ಉಪಗ್ರಹ ನಿಗ್ರಹ ಕ್ಷಿಪಣಿ ‘ಎ–ಸ್ಯಾಟ್’ (A-SAT) ಬತ್ತಳಿಕೆಗೆ ಸೇರುವುದರೊಂದಿಗೆ ಭಾರತವು ಇದೀಗ ವಿಶ್ವದ ಬಾಹ್ಯಾಕಾಶ ಶಕ್ತಿಯಾಗಿ ಹೊರಹೊಮ್ಮಿದೆ. ಭೂಮಿಯಿಂದ 2000 ಕಿ.ಮೀ. ಎತ್ತರವನ್ನು ಭೂ ಸನಿಹದ ಕಕ್ಷೆ ಎನ್ನುತ್ತಾರೆ. ಎ–ಸ್ಯಾಟ್ ಕ್ಷಿಪಣಿ ವ್ಯವಸ್ಥೆಯು ಈ ಕಕ್ಷೆಯಲ್ಲಿರುವ ಉಪಗ್ರಹಗಳನ್ನು ನಾಶಪಡಿಸುವ ಸಾಮರ್ಥ್ಯ ಹೊಂದಿದೆ.

‘ಮಿಷನ್ ಶಕ್ತಿ ಹೆಸರಿನ ಈ ಸಾಹಸವು ಭಾರತದ ಸುರಕ್ಷೆ, ಆರ್ಥಿಕ ಪ್ರಗತಿ ಮತ್ತು ತಾಂತ್ರಿಕ ಮುನ್ನಡೆಯ ದ್ಯೋತಕವಾಗಿದೆ. ನಮ್ಮ ಶಕ್ತಿಯನ್ನು ನಾವು ಯಾರ ವಿರುದ್ಧವೂ ಬಳಸುವುದಿಲ್ಲ ಎಂದು ವಿಶ್ವ ಸಮುದಾಯಕ್ಕೆ ನಾನು ಖಾತ್ರಿಪಡಿಸುತ್ತೇನೆ. ಇದು ಸಂಪೂರ್ಣವಾಗಿ ಭಾರತದ ಭದ್ರತೆಗೆ ಸಂಬಂಧಿಸಿದ ವಿಚಾರವಾಗಿದೆ. ಬಾಹ್ಯಾಕಾಶದಲ್ಲಿ ಶಸ್ತ್ರಾಸ್ತ್ರ ಪೈಪೋಟಿಯನ್ನೂ ನಾವು ವಿರೋಧಿಸುತ್ತೇವೆ. ಎ–ಸ್ಯಾಟ್ ಪರೀಕ್ಷೆಯು ಯಾವುದೇ ಅಂತರರಾಷ್ಟ್ರೀಯ ನಿಯಮ, ಕಾನೂನು ಅಥವಾ ಒಪ್ಪಂದವನ್ನು ಉಲ್ಲಂಘಿಸುವುದಿಲ್ಲ.

‘ಮಿಷನ್ ಶಕ್ತಿ ಎರಡು ಕಾರಣಕ್ಕೆ ಮುಖ್ಯವಾಗುತ್ತೆ. ಮೊದಲನೆಯದಾಗಿ, ಭಾರತವು ವಿಶ್ವದಲ್ಲಿ ಈ ಸಾಮರ್ಥ್ಯ ಹೊಂದಿದ ನಾಲ್ಕನೇ ದೇಶವಾಗಿದೆ. ಎರಡನೆಯದಾಗಿ, ಈ ಪ್ರಯೋಗದ ಸಂಪೂರ್ಣ ಜವಾಬ್ದಾರಿಯನ್ನು ಭಾರತವೇ ನಿರ್ವಹಿಸಿದೆ. ವಿಶ್ವದ ಬಾಹ್ಯಾಕಾಶ ಶಕ್ತಿಯಾಗಿ ಭಾರತ ಎತ್ತರದಲ್ಲಿ ನಿಂತಿದೆ’ ಎಂದು ಮೋದಿ ಹೆಮ್ಮೆಯಿಂದ ಹೇಳಿದ್ದರು.

2012ರಲ್ಲಿಯೇ ಭಾರತ ಈ ಸಾಮರ್ಥ್ಯ ಪಡೆದಿತ್ತು

ಪ್ರಧಾನಿ ನರೇಂದ್ರ ಮೋದಿಯವರು ಹೇಳಿದಂತೆ ಭಾರತ ಇದೇ ಮೊದಲ ಬಾರಿಗೆ ಎ-ಸ್ಯಾಟ್ ಪ್ರಯೋಗಿಸಿದ್ದು ನಿಜ. ಆದರೆ ಆ ಸಾಮರ್ಥ್ಯ ಭಾರತಕ್ಕೆ ಏಳು ವರ್ಷ ಹಿಂದೆಯೇ ಸಿದ್ಧಿಸಿತ್ತು. ಎಲ್ಲವೂ ಅಂದುಕೊಂಡಂತೆ, ಯೋಜಿತ ರೀತಿಯಲ್ಲಿ ನಡೆದಿದ್ದರೆ ಐದು ವರ್ಷ ಹಿಂದೆಯೇ ಎ-ಸ್ಯಾಟ್ ಪ್ರಯೋಗ ನಡೆಯಬೇಕಿತ್ತು.

2012ರಲ್ಲಿ ರಕ್ಷಣಾ ಸಚಿವರ ವೈಜ್ಞಾನಿಕ ಸಲಹೆಗಾರ ಮತ್ತು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯ (ಡಿಆರ್‌ಡಿಒ) ಮುಖ್ಯಸ್ಥ ವಿಜಯ್ ಸಾರಸ್ವತ್ ‘ಉಪಗ್ರಹವನ್ನು ಹೊಡೆದುರುಳಿಸುವ ಸಾಮರ್ಥ್ಯವಿರುವ ಉಪಗ್ರಹ ನಿಗ್ರಹ ಕ್ಷಿಪಣಿ ‘ಎ–ಸ್ಯಾಟ್’ ನಿರ್ಮಾಣಕ್ಕೆ ಬೇಕಾಗಿರುವ ಬಿಡಿಭಾಗಗಳನ್ನುಅಭಿವೃದ್ಧಿಪಡಿಸಿದ್ದೇವೆ’ ಎಂದು ಹೇಳಿದ್ದರು. ಸಾರಸ್ವತ್ ಅವರ ಹೇಳಿಕೆ ಆಧರಿಸಿದ ಲೇಖನ‘ಇಂಡಿಯಾ ಟುಡೆ’ನಿಯತಕಾಲಿಕೆಯ ಏಪ್ರಿಲ್ 28, 2012ರ ಸಂಚಿಕೆಯಲ್ಲಿ ಪ್ರಕಟವಾಗಿದೆ.

ಜನವರಿ 2007ರಲ್ಲಿ ಚೀನಾದ ಎ-ಸ್ಯಾಟ್ ಕ್ಷಿಪಣಿ ಬಳಕೆಯಲ್ಲಿಲ್ಲದ ಹವಾಮಾನ ಉಪಗ್ರಹವೊಂದನ್ನು ಹೊಡೆದುರುಳಿಸಿತ್ತು. ನಂತರದ ಬೆಳವಣಿಗೆಯಲ್ಲಿ ಭಾರತ ಉಪಗ್ರಹ ನಿಗ್ರಹ ಕ್ಷಿಪಣಿ ತಂತ್ರಜ್ಞಾನ ಅಭಿವೃದ್ಧಿಪಡಿಸಲು ಹೆಚ್ಚು ಗಮನ ನೀಡಿತ್ತು. 2012ರ ಲೇಖನದಲ್ಲಿ ‘ಚೀನಾದ ಕಾರ್ಯನಿರ್ವಹಣೆಗೆ ತಡೆಯೊಡ್ಡುವ ಸಾಮರ್ಥ್ಯವನ್ನು ಇದು (ಎ–ಸ್ಯಾಟ್) ಹೊಂದಿದೆ’ ಎಂದೇ ಇಂಡಿಯಾ ಟುಡೆ ವಿವರಿಸಿದೆ.

ಇಸ್ರೊ2012ರಏಪ್ರಿಲ್ 26ರಂದು ‘ರಡಾರ್ ಇಮೇಜಿಂಗ್ ಸ್ಯಾಟಲೈಟ್-1’ (RISAT) ಉಡಾವಣೆ ಮಾಡಿತ್ತು. ಈ ಬೇಹುಗಾರಿಕಾ ಉಪಗ್ರಹವುಬಾಹ್ಯಾಕಾಶದಲ್ಲಿ ಒಂದು ಮೀಟರ್ ವ್ಯಾಪ್ತಿಯಲ್ಲಿ ಬರುವ ವಸ್ತುಗಳನ್ನು ಗುರುತಿಸುವ ಸಾಮರ್ಥ್ಯ ಹೊಂದಿದೆ. ಚೀನಾ ಈ ಹಿಂದೆರೀತಿಯ ಪರೀಕ್ಷೆಗಳನ್ನು ಮಾಡಿದ್ದರಿಂದಭಾರತವೂ ಇಂಥಉಪಗ್ರಹಗಳ ನಿರ್ಮಾಣಕ್ಕೆ ಮುಂದಾಗಬೇಕಾಯಿತು.

‘5,500 ಕಿ.ಮೀ ದೂರದ ಗುರಿ ಮುಟ್ಟುವ ಸಾಮರ್ಥ್ಯ ಹೊಂದಿರುವ ಖಂಡಾಂತರ ಕ್ಷಿಪಣಿ ‘ಅಗ್ನಿ–5’ಕ್ಕೆಗೇಮ್ ಚೇಂಜರ್’ ಎಂದೇಸಾರಸ್ವತ್ ಶ್ಲಾಘಿಸಿದ್ದರು. 2012ರ ಏ.19ರಂದು ನಡೆಸಿದ ಪರೀಕ್ಷೆಯಲ್ಲಿಈ ಕ್ಷಿಪಣಿಯು ಭೂಮಿಯಿಂದ 600 ಕಿ.ಮೀ. ಎತ್ತರಕ್ಕೆ ಚಿಮ್ಮಿ, ನಂತರ ವಾತಾವರಣಕ್ಕೆ ಹಿಂದಿರುಗಿತ್ತು. ಇಂದು (2019ರ ಮಾರ್ಚ್ 27) ನಡೆದ ಪ್ರಯೋಗದಲ್ಲಿ ‘ಎ–ಸ್ಯಾಟ್’ ಭೂಮಿಯಿಂದ 300 ಕಿ.ಮೀ. ಎತ್ತರದಲ್ಲಿದ್ದ ಉಪಗ್ರಹವನ್ನು ಹೊಡೆದುರುಳಿಸಿದೆ. ‘2014ರ ಹೊತ್ತಿಗೆ ನಾವು (ಡಿಆರ್‌ಡಿಒ) ಪೂರ್ಣ ಪ್ರಮಾಣದ ಎ–ಸ್ಯಾಟ್ ಕ್ಷಿಪಣಿಗಳನ್ನು ಅಭಿವೃದ್ಧಿಪಡಿಸುತ್ತೇವೆ’ ಎಂದುಸರ್ಕಾರಿ ಮೂಲಗಳನ್ನು ಉಲ್ಲೇಖಿಸಿ‘ಇಂಡಿಯಾ ಟುಡೆ’ ವರದಿ ಮಾಹಿತಿ ನೀಡಿತ್ತು. ಈ ವರದಿಯನ್ನು ಆಧರಿಸಿ ಹೇಳುವುದಾದರೆ ಎ–ಸ್ಯಾಟ್ ಕ್ಷಿಪಣಿ ಪ್ರಯೋಗವು ಐದು ವರ್ಷ ತಡವಾಗಿ ನಡೆದಿದೆ.

‘ಉಪಗ್ರಹವೊಂದನ್ನು ಹೊಡೆದುರುಳಿಸುವ ಮೂಲಕ ಆ ಕ್ಷಿಪಣಿಯನ್ನು ನಾವು ಪರೀಕ್ಷಿಸುವುದಿಲ್ಲ.ಈ ರೀತಿ ಮಾಡಿದರೆ ಬಾಹ್ಯಾಕಾಶದಲ್ಲಿ ಉಪಗ್ರಹಗಳ ಅಪಾಯಕಾರಿ ಪಳೆಯುಳಿಕೆಗಳು ಉಳಿಯುತ್ತವೆ. ಇವು ಅಲ್ಲಿರುವ ಉಪಗ್ರಹಗಳಿಗೆ ಅಪಾಯವನ್ನುಂಟು ಮಾಡುತ್ತದೆ. ಇದರ ಬದಲಿಗೆ ಭಾರತದ ಎ-ಸ್ಯಾಟ್ ಸಾಮರ್ಥ್ಯವನ್ನು ಎಲೆಕ್ಟ್ರಾನಿಕ್ ಪರೀಕ್ಷೆಗೊಳಪಡಿಸಲಾಗುವುದು’ ಎಂದು ಸಾರಸ್ವತ್ ಅಂದು ಹೇಳಿದ್ದರು.

ಬಹುತೇಕ ಮಿಲಿಟರಿ ಉಪಗ್ರಹಗಳ ಕಕ್ಷೆ ಭೂಮಿಯ ಮೇಲ್ಮೈಯಿಂದ ಗರಿಷ್ಠ2,000 ಕಿ.ಮೀ. (ಭೂ ಸನಿಹದ ಕಕ್ಷೆ -LEO)ಇರುತ್ತದೆ. ವೈರಿ ರಾಷ್ಟ್ರಗಳ ಸವಾಲುಗಳನ್ನು ಎದುರಿಸುವುದಕ್ಕಾಗಿ 2010ರಲ್ಲಿ ಬಾಹ್ಯಾಕಾಶ ಭದ್ರತಾ ಸಹಯೋಗ ತಂಡ (ಸ್ಪೇಸ್ ಸೆಕ್ಯೂರಿಟಿ ಕೋಆರ್ಡಿನೇಷನ್ ಗ್ರೂಪ್– ಎಸ್‌ಎಸ್‍ಸಿಜಿ) ರೂಪುಗೊಂಡಿತ್ತು. ಈ ತಂಡದಅಧ್ಯಕ್ಷತೆಯನ್ನು ರಾಷ್ಟ್ರೀಯ ಭದ್ರತಾ ಸಲಹೆಗಾರ ಶಿವಶಂಕರ್ ಮೆನನ್ ವಹಿಸಿದ್ದರು.ಡಿಆರ್‌ಡಿಒ, ಭಾರತೀಯ ವಾಯುಪಡೆಮತ್ತು ರಾಷ್ಟ್ರೀಯ ತಾಂತ್ರಿಕ ಸಂಶೋಧನಾ ಸಂಸ್ಥೆ (ಎನ್‌ಟಿಆರ್‌ಒ) ಪ್ರತಿನಿಧಿಗಳು ಇದ್ದರು.ಸರ್ಕಾರದ ಬಾಹ್ಯಾಕಾಶ ನೀತಿಯನ್ನು ರೂಪಿಸುವುದರ ಜತೆಗೆ ಈ ಸಮಿತಿಯು ಬಾಹ್ಯಾಕಾಶ ಕುರಿತಅಂತರರಾಷ್ಟ್ರೀಯ ನೀತಿ ಸಂಹಿತೆಗೆ ಸಂಬಂಧಿಸಿದ ವ್ಯವಹಾರಗಳನ್ನೂ ನಿರ್ವಹಿಸುತ್ತಿತ್ತು.

ಬಳಕೆಯಲ್ಲಿಲ್ಲದ ಉಪಗ್ರಹವೊಂದನ್ನು ಹೊಡೆದುರುಳಿಸಿದ ಚೀನಾದ ಕ್ಷಿಪಣಿ ಪರೀಕ್ಷೆಗೆ ಅಮೆರಿಕ ಆಕ್ಷೇಪಿಸಿತ್ತು. ಬಾಹ್ಯಾಕಾಶದಲ್ಲಿ ಅಸ್ತ್ರ ಪ್ರಯೋಗಕ್ಕೆ ತಡೆಯೊಡ್ಡುವ ಹೊಸ ಒಡಂಬಡಿಕೆಯನ್ನು ಮಾಡುವುದಾಗಿ ಅಮೆರಿಕ 2010 ಜೂನ್ ತಿಂಗಳಲ್ಲಿ ಸೂಚನೆ ನೀಡಿತ್ತು.ಭಾರತದ ಎ-ಸ್ಯಾಟ್ ಪರೀಕ್ಷೆಗೆ ಈ ಒಡಂಬಡಿಕೆ ಅಡ್ಡಿಯಾಗುವ ಆತಂಕ ಉಂಟಾಗಿತ್ತು. ಭಾರತೀಯ ವಿಶ್ಲೇಷಕರ ಪ್ರಕಾರ, ಈ ಒಡಂಬಡಿಕೆಯುಬಾಹ್ಯಾಕಾಶದಲ್ಲಿಅಸ್ತ್ರಗಳ ಪರೀಕ್ಷೆಗೆ ತಡೆಯೊಡ್ಡುತ್ತದೆ.ಏತನ್ಮಧ್ಯೆ ಎ-ಸ್ಯಾಟ್ ಕ್ಷಿಪಣಿಯವೇಗ ಹೆಚ್ಚಿಸುವಂತೆಡಿಆರ್‌ಡಿಒಗೆಎಸ್‌ಎಸ್‍ಸಿಜಿ ನಿರ್ದೇಶನ ನೀಡಿತ್ತು.

ಭಾರತದತ್ತ ಶತ್ರು ದೇಶಗಳು ಹಾರಿಸುವ ಖಂಡಾಂತರ ಕ್ಷಿಪಣಿಯನ್ನು ಸುಮಾರು 2000 ಕಿಮೀ ದೂರದಲ್ಲಿಯೇ ಗುರುತಿಸಿ, ಹೊಡೆದುರುಳಿಸುವ ‘ಪೃಥ್ವಿ ಡಿಫೆನ್ಸ್ ವೆಹಿಕಲ್’ (ಪಿಡಿವಿ)ಪರೀಕ್ಷೆಯ ಮೂಲಕ ಎ-ಸ್ಯಾಟ್ ಮತ್ತೊಂದು ಮೈಲಿಗಲ್ಲು ಸ್ಥಾಪಿಸಿತು.ಎರಡು ಹಂತದ ರಾಕೆಟ್ ವ್ಯವಸ್ಥೆಹೊಂದಿರುವ ಈ ಕ್ಷಿಪಣಿಗಳು 150 ಕಿ.ಮೀ.ಎತ್ತರದಲ್ಲಿ ಬರುವ ಖಂಡಾಂತರ ಕ್ಷಿಪಣಿಗಳನ್ನು ಹೊಡೆದುರುಳಿಸಬಲ್ಲವು.ವೈರಿಗಳು ದೇಶದ ಮೇಲೆ ಖಂಡಾಂತರ ಕ್ಷಿಪಣಿ ದಾಳಿ ಮಾಡಿದರೆ ಅವುಗಳಿಂದ ರಕ್ಷಣೆ ಒದಗಿಸುವ ಗುರಿಯನ್ನು ಖಂಡಾಂತರ ಕ್ಷಿಪಣಿ ರಕ್ಷಣೆ (BMsD) ಯೋಜನೆ ಹೊಂದಿದೆ.

ವೈರಿ ರಾಷ್ಟ್ರದಿಂದ ಬರುವ ಕ್ಷಿಪಣಿಗಳನ್ನು ದೂರದಿಂದಲೇಪತ್ತೆ ಮಾಡುವ ರಡಾರ್, ಹೊಡೆದುರುಳಿಸುವ ಸಾಮರ್ಥ್ಯದ ಕ್ಷಿಪಣಿ ಅಥವಾ ವೈರಿ ಕ್ಷಿಪಣಿಗಳನ್ನು ಕಕ್ಷೆಯಲ್ಲಿಯೇ ನಾಶಪಡಿಸುವ ಸಾಮರ್ಥ್ಯವಿರುವ ಸಿಡಿತಲೆ- ಈ ಮೂರು ಇದರಪ್ರಧಾನ ಘಟಕಗಳಾಗಿದ್ದು ಇದನ್ನು ಬಿಎಂಡಿ ಯೋಜನೆಯಡಿಯಲ್ಲಿ ಅಭಿವೃದ್ಧಿಪಡಿಸಲಾಗಿದೆ.

ಡಿಆರ್‌ಡಿಒ ನಿರ್ಮಿತ ದೂರಗಾಮಿ ಟ್ರ್ಯಾಕಿಂಗ್ ರಡಾರ್ 600 ಕಿಮೀ ದೂರದಲ್ಲಿರುವ ಗುರಿಯನ್ನು ಪತ್ತೆ ಹಚ್ಚಬಲ್ಲುದಾಗಿದೆ. ಕಿಲ್ ವೆಹಿಕಲ್‌(ಹೊಡೆದುರುಳಿಸುವ)ಸಾಧನಗಳನ್ನುಖಂಡಾಂತರ ಕ್ಷಿಪಣಿ ವ್ಯವಸ್ಥೆಯ ಭಾಗವಾಗಿಯೇ ಅಭಿವೃದ್ಧಿಪಡಿಸಲಾಗುತ್ತದೆ. ಎಲೆಕ್ಟ್ರಾನಿಕ್ ಮತ್ತು ರೇಡಿಯೊ ಕಂಪನಗಳ ಸಹಾಯದಿಂದ ಕೆಲಸ ಮಾಡುವ ಈ ಸಾಧನಗಳು,ಖಂಡಾಂತರ ಕ್ಷಿಪಣಿ ಅಥವಾ ಉಪಗ್ರಹಗಳೊಂದಿಗೆ ಇರುತ್ತವೆ.

‘ಉಪಗ್ರಹಗಳಿಗಾದರೆ ನಿಶ್ಚಿತ ದಾರಿಯಿರುತ್ತದೆ.ಉಪಗ್ರಹಗಳು 1 ಮೀಟರ್‌ ವ್ಯಾಸದಲ್ಲಿ ಮಾತ್ರ ನಿಖರ ಗುರಿಯನ್ನು ಗುರುತಿಸಬಲ್ಲದು. ಆದರೆ ನಮ್ಮಬಿಎಂಡಿ ವ್ಯವಸ್ಥೆಯು 0.1 ಮೀಟರ್ ವ್ಯಾಪ್ತಿಯ ಗುರಿಯನ್ನು(ಯಾವುದೇ ವಸ್ತುವನ್ನು) ಗುರುತಿಸಿನಾಶ ಪಡಿಸಬಲ್ಲುದು’ ಎಂಬಸಾರಸ್ವತ್ ಹೇಳಿಕೆಯನ್ನೂ ಇಂಡಿಯಾ ಟುಡೆ ವರದಿ ಮಾಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.