ADVERTISEMENT

ಸೆಂಟರ್‌ ಫಾರ್‌ ಪಾಲಿಸಿ ರಿಸರ್ಚ್: ವಿದೇಶಿ ದೇಣಿಗೆ ಬಂದ್

ನೋಂದಣಿ ರದ್ದುಗೊಳಿಸಿದ ಕೇಂದ್ರ ಗೃಹ ಸಚಿವಾಲಯ

ರಾಯಿಟರ್ಸ್
ಪಿಟಿಐ
Published 17 ಜನವರಿ 2024, 14:36 IST
Last Updated 17 ಜನವರಿ 2024, 14:36 IST
ವಿದೇಶಿ ದೇಣಿಗೆ–ಪ್ರಾತಿನಿಧಿಕ ಚಿತ್ರ
ವಿದೇಶಿ ದೇಣಿಗೆ–ಪ್ರಾತಿನಿಧಿಕ ಚಿತ್ರ   

ನವದೆಹಲಿ: ದೇಶದ ಪ್ರಮುಖ ಸಾರ್ವಜನಿಕ ಚಿಂತಕರ ಚಾವಡಿ ಎನಿಸಿರುವ ‘ಸೆಂಟರ್‌ ಫಾರ್‌ ಪಾಲಿಸಿ ರಿಸರ್ಚ್’ (ಸಿಪಿಆರ್‌) ಸಂಸ್ಥೆಯು ವಿದೇಶಿ ದೇಣಿಗೆ ನಿಯಂತ್ರಣ ಕಾಯ್ದೆಯಡಿ (ಎಫ್‌ಸಿಆರ್‌ಎ) ಹೊಂದಿದ್ದ ನೋಂದಣಿಯನ್ನು ಕೇಂದ್ರ ಗೃಹ ಸಚಿವಾಲಯವು ರದ್ದುಗೊಳಿಸಿದೆ. ಇದರಿಂದ ಈ ಸಂಸ್ಥೆಯು ವಿದೇಶದಿಂದ ದೇಣಿಗೆ ಸ್ವೀಕರಿಸುವ ಅವಕಾಶ ಕಳೆದುಕೊಂಡಿದೆ.

ಕೇಂದ್ರ ಸರ್ಕಾರದ ಕ್ರಮದ ವಿರುದ್ಧ ಕಾನೂನು ಹೋರಾಟ ನಡೆಸುವುದಾಗಿ ಸಿಪಿಆರ್‌ ಹೇಳಿದೆ. ಎಫ್‌ಸಿಆರ್‌ಎ ಅಡಿ ಹೊಂದಿರುವ ನೋಂದಣಿ ರದ್ದಾದರೆ, ಆ ಸಂಸ್ಥೆಯು ವಿದೇಶದಿಂದ ಅಥವಾ ವಿದೇಶಿ ದಾನಿಗಳಿಂದ ಯಾವುದೇ ದೇಣಿಗೆ ಪಡೆಯುವಂತಿಲ್ಲ.

ಎಫ್‌ಸಿಆರ್‌ಎ ಕಾಯ್ದೆಯ ಉಲ್ಲಂಘನೆ ಆರೋಪದಲ್ಲಿ ಸಿಪಿಆರ್‌ನ ಪರವಾನಗಿಯನ್ನು ಅಮಾನತು ಮಾಡಿದ ಒಂದು ವರ್ಷದ ಬಳಿಕ ಗೃಹ ಸಚಿವಾಲಯವು ನೋಂದಣಿ ರದ್ದುಗೊಳಿಸಿದೆ.

ADVERTISEMENT

ಗೃಹ ಸಚಿವಾಲಯವು 2023ರ ಫೆಬ್ರುವರಿಯಲ್ಲಿ ಎಫ್‌ಸಿಆರ್‌ಎ ಪರವಾನಗಿಯನ್ನು 180 ದಿನಗಳ ಮಟ್ಟಿಗೆ ಅಮಾನತು ಮಾಡಿತ್ತು. ಆ ಬಳಿಕ ಅಮಾನತನ್ನು 180 ದಿನಗಳವರೆಗೆ ವಿಸ್ತರಿಸಿತ್ತು. 

ಗೃಹ ಸಚಿವಾಲಯದ ಅಮಾನತು ಕ್ರಮವನ್ನು ಪ್ರಶ್ನಿಸಿ ಸಿಪಿಆರ್‌, ದೆಹಲಿ ಹೈಕೋರ್ಟ್‌ ಮೊರೆ ಹೋಗಿತ್ತು. ‘ಸಿಪಿಆರ್‌ ಸಂಸ್ಥೆಯು ವಿದೇಶಿ ದೇಣಿಗೆಯನ್ನು ಅನಪೇಕ್ಷಿತ ಉದ್ದೇಶಗಳಿಗೆ ಬಳಸುತ್ತಿರುವುದರಿಂದ ದೇಶದ ಆರ್ಥಿಕ ಹಿತಾಸಕ್ತಿಯ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ. ಆದ್ದರಿಂದ ವಿದೇಶಿ ದೇಣಿಗೆಯನ್ನು ನಿಲ್ಲಿಸಬೇಕು’ ಎಂದು ಗೃಹ ಸಚಿವಾಲಯ ಹೈಕೋರ್ಟ್‌ನಲ್ಲಿ ವಾದಿಸಿತ್ತು.

‘ಯಾವ ಆಧಾರದಲ್ಲಿ ಈ ನಿರ್ಧಾರ ತೆಗೆದುಕೊಂಡಿದೆ ಎಂಬುದನ್ನು ಅರ್ಥಮಾಡಿಕೊಳ್ಳಲು ಆಗುತ್ತಿಲ್ಲ. ಗೃಹ ಸಚಿವಾಲಯ ನೀಡಿರುವ ಕೆಲವು ಕಾರಣಗಳು ಸಂಶೋಧನಾ ಸಂಸ್ಥೆಯ ಕಾರ್ಯನಿರ್ವಹಣೆಯ ಬುನಾದಿಯನ್ನೇ ಪ್ರಶ್ನಿಸುವಂತಿದೆ’ ಎಂದು ಸಂಸ್ಥೆಯ ಅಧ್ಯಕ್ಷೆ ಯಾಮಿನಿ ಅಯ್ಯರ್‌ ಪ್ರತಿಕ್ರಿಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.