ಲುಧಿಯಾನ(ಪಿಟಿಐ): ‘ಎಲ್ಲರನ್ನೂ ಜೊತೆಗೆ ಕರೆದುಕೊಂಡು ಹೋಗುವುದರಲ್ಲಿ ಭಾರತ ನಂಬಿಕೆ ಇಟ್ಟಿದೆ. ವಿಶ್ವದ ಹಲವು ರಾಷ್ಟ್ರಗಳು ಇಂದು ಭಾರತದತ್ತ ನೋಡುತ್ತಿವೆ’ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದರು.
ಸದ್ಗುರು ಪ್ರತಾಪ್ ಸಿಂಗ್ ಮತ್ತು ಮಾತಾ ಭೂಪಿಂದರ್ ಕೌರ್ ಅವರ ಸ್ಮರಣಾರ್ಥ ನಾಮಧಾರಿ ಮಿಷನ್ ಭಾನುವಾರ ಲುಧಿಯಾನದ ‘ಭೈನಿ ಸಾಹಿಬ್’ನಲ್ಲಿ ಆಯೋಜಿಸಿದ್ದ ಸಭೆ ಉದ್ದೇಶಿಸಿ ಭಾಗವತ್ ಮಾತನಾಡಿದರು.
‘ವಿಶ್ವದಲ್ಲಿ ಸಮತೋಲನ ಸಾಧಿಸುವ ಕೆಲಸವನ್ನು ಭಾರತ ಮಾಡುತ್ತಿದೆ. ತನ್ನ ಪಾತ್ರವನ್ನು ಉತ್ತಮವಾಗಿ ನಿರ್ವಹಿಸುತ್ತಿದೆ. ಭಾರತ ಸ್ವಾರ್ಥಿ ರಾಷ್ಟ್ರವಲ್ಲ. ಎಲ್ಲರನ್ನೂ ಒಟ್ಟಿಗೆ ಕರೆದೊಯ್ಯುವ ತತ್ವದಲ್ಲಿ ನಂಬಿಕೆ ಇರಿಸಿದೆ’ ಎಂದು ಮೋಹನ್ ಭಾಗವತ್ ಹೇಳಿದರು.
‘ಸಮಾಜದ ವಿಭಜಕ ಶಕ್ತಿಗಳು ದೇಶವನ್ನು ಮಾತ್ರವಲ್ಲದೆ ಜಗತ್ತನ್ನೂ ಹಾನಿಗೊಳಿಸುತ್ತಿವೆ. ಅವುಗಳ ವಿರುದ್ಧ ಜಂಟಿಯಾಗಿ ಹೋರಾಡಬೇಕು’ ಎಂದು ಅವರು ಸಲಹೆ ನೀಡಿದರು.
‘ಭಾರತವು ಇಡೀ ಜಗತ್ತಿಗೆ ಹೊಸ ಮಾರ್ಗವನ್ನು ತೋರಿಸಬೇಕಿದೆ. ಅದೇ ಸಂದರ್ಭದಲ್ಲಿ ಸಂಪ್ರದಾಯ, ಸಂಸ್ಕೃತಿ ಮತ್ತು ಪರಂಪರೆಯನ್ನು ಮುಂದುವರಿಸಿಕೊಂಡು ಹೋಗಬೇಕು’ ಎಂದು ಭಾಗವತ್ ಹೇಳಿದರು.
‘ಧರ್ಮದ ಅರ್ಥ ಒಗ್ಗೂಡುವುದು. ಅದು ವಿಭಜನೆಯ ಬಗ್ಗೆ ಮಾತನಾಡುವುದಿಲ್ಲ’ ಎಂದೂ ಅವರು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ನಾಮಧಾರಿ ಸಮುದಾಯದ ಸದ್ಗುರು ಉದಯ್ ಸಿಂಗ್ ಉಪಸ್ಥಿತರಿದ್ದರು.
ಬಿಗಿ ಭದ್ರತೆಯ ನಡುವೆ ಭೈನಿ ಸಾಹಿಬ್ ತಲುಪಿದ ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್, ಸದ್ಗುರು ಉದಯ್ ಸಿಂಗ್ ಅವರೊಂದಿಗೆ ಗೌಪ್ಯ ಸಭೆ ನಡೆಸಿದರು ಎಂದು ಮೂಲಗಳು ತಿಳಿಸಿವೆ.
ದೆಹಲಿಯಿಂದ ರೈಲಿನಲ್ಲಿ ಶನಿವಾರ ಲುಧಿಯಾನಕ್ಕೆ ಆಗಮಿಸಿದ ಭಾಗವತ್, ಇಲ್ಲಿನ ಆರ್‌ಎಸ್‌ಎಸ್ ಪ್ರಧಾನ ಕಚೇರಿಯಲ್ಲಿ ತಂಗಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.