ನವದೆಹಲಿ: ಭವಿಷ್ಯದಲ್ಲಿ ಸಾಂಕ್ರಾಮಿಕ ರೋಗಗಳನ್ನು ಸಮಯೋಚಿತ, ಕೇಂದ್ರಿಕೃತ ಹಾಗೂ ಪರಿಣಾಮಕಾರಿಯಾಗಿ ನಿಯಂತ್ರಿಸಲು ವಿಶ್ವ ಆರೋಗ್ಯ ಸಂಸ್ಥೆಯಲ್ಲಿ (ಡಬ್ಲ್ಯುಎಚ್‌ಒ) ಪ್ರಮುಖ ಸುಧಾರಣೆಗಳನ್ನು ತುರ್ತಾಗಿ ಮಾಡುವ ಅವಶ್ಯಕತೆಯಿದೆ ಎಂದು ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ಬುಧವಾರ ಹೇಳಿದ್ದಾರೆ.
ವಿಡಿಯೊ ಕಾನ್ಫರನ್ಸ್ ಮೂಲಕ ಶಾಂಘೈ ಕಾರ್ಪೋರೇಷನ್ ಆರ್ಗನೈಸೇಷನ್ (ಎಸ್‌ಸಿಒ) ರಾಷ್ಟ್ರಗಳ ಆರೋಗ್ಯ ಸಚಿವರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, 'ಕೋವಿಡ್-19 ಸಾಂಕ್ರಾಮಿಕ ರೋಗದಿಂದ ಉಂಟಾಗುವ ಜಾಗತಿಕ ಬಿಕ್ಕಟ್ಟು ವೈರಸ್‌ನ ಹೊಸ ರೂಪಾಂತರಗಳಿಂದ ಮತ್ತಷ್ಟು ಜಟಿಲವಾಗಿದೆ. ಈ ಬಿಕ್ಕಟ್ಟನ್ನು ಎದುರಿಸಲು ರಾಷ್ಟ್ರಗಳ ನಡುವೆ ಹೆಚ್ಚಿನ ಸಹಯೋಗದ ಪ್ರಾಮುಖ್ಯತೆಯನ್ನು ಎತ್ತಿ ತೋರಿಸಿದೆ' ಎಂದು ತಿಳಿಸಿದ್ದಾರೆ.
ಆದ್ದರಿಂದ, ನಮ್ಮ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸುವ ಸಲುವಾಗಿ ನಮ್ಮ ಅನುಭವ, ಅಧ್ಯಯನ, ಉತ್ತಮ ಅಭ್ಯಾಸಗಳು ಮತ್ತು ನಾವೀನ್ಯತೆಗಳನ್ನು ಹಂಚಿಕೊಳ್ಳುವುದನ್ನು ಮುಂದುವರಿಸಬೇಕಿದೆ ಎಂದು ಸಚಿವರ ಹೇಳಿಕೆಯನ್ನು ಆರೋಗ್ಯ ಇಲಾಖೆಯ ಪ್ರಕಟಣೆಯು ತಿಳಿಸಿದೆ.
ಈಗಿನ ಪರಿಸ್ಥಿತಿಯನ್ನು ನಿಭಾಯಿಸಲು ಮತ್ತು ಭವಿಷ್ಯದ ಯಾವುದೇ ಬಿಕ್ಕಟ್ಟನ್ನು ಎದುರಿಸಲು ದೀರ್ಘಕಾಲೀನ ಮಧ್ಯಸ್ಥಿಕೆಗಳನ್ನು ಖಚಿತಪಡಿಸಿಕೊಳ್ಳಲು ಭಾರತ ಸಾಮರ್ಥ್ಯ ಹೆಚ್ಚಿಸಲು ಅವಿರತವಾಗಿ ಕೆಲಸ ನಿರ್ವಹಿಸುತ್ತಿದೆ ಎಂದವರು ಹೇಳಿದ್ದಾರೆ.
'ಇತರೆ ರಾಷ್ಟ್ರಗಳಂತೆ ವಿಶ್ವ ಆರೋಗ್ಯ ಸಂಸ್ಥೆಯಲ್ಲಿ ಪ್ರಮುಖ ಸುಧಾರಣೆಗಳನ್ನು ಕೈಗೊಳ್ಳುವ ತುರ್ತು ಅವಶ್ಯಕತೆಯಿದೆ ಎಂಬುದರಲ್ಲಿ ಭಾರತ ಕೂಡಾ ನಂಬಿಕೆಯನ್ನಿರಿಸಿದೆ. ಈ ಮೂಲಕ ಭವಿಷ್ಯದ ಸಂಭವನೀಯ ಸಾಂಕ್ರಾಮಿಕ ರೋಗಗಳನ್ನು ಸಮಯೋಚಿತ, ಕೇಂದ್ರಿಕೃತ ಹಾಗೂ ಪರಿಣಾಮಕಾರಿಯಾಗಿ ನಿಭಾಯಿಸಲು ಸಹಕಾರಿಯಾಗಲಿದೆ' ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.