ಹೈದರಾಬಾದ್: ಭಾರತವು ಹಿಂದುಗಳ ದೇಶ ಎಂದು ಹೇಳಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಹೇಳಿಕೆಗೆ ‘ಅಖಿಲ ಭಾರತ ಮಜ್ಲಿಸ್ ಇ ಇತ್ತೇದುಲ್ ಮುಸ್ಲಿಮಿನ್– ಎಐಎಂಐಎಂ’ ಪಕ್ಷದ ಸಂಸದ ಅಸಾದುದ್ದೀನ್ ಒವೈಸಿ ಸೋಮವಾರ ತಿರುಗೇಟು ನೀಡಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಒವೈಸಿ, ‘ರಾಹುಲ್ ಮತ್ತು ಕಾಂಗ್ರೆಸ್ ಹಿಂದುತ್ವಕ್ಕಾಗಿ ಭೂಮಿ ಹದ ಮಾಡಿವೆ. ಈಗ ಅವರು ‘ಬಹುಸಂಖ್ಯಾತ ವಾದ’ದ ಬೆಳೆ ಬೆಳೆಯಲು ಪ್ರಯತ್ನ ನಡೆಸುತ್ತಿದ್ದಾರೆ. ಹಿಂದೂಗಳನ್ನು ಅಧಿಕಾರಕ್ಕೆ ತರುವುದು 2021ರ ಅವರ 'ಜಾತ್ಯತೀತ' ಕಾರ್ಯಸೂಚಿಯೂ ಆಗಿದೆ. ವಾಹ್...! ಭಾರತವು ಭಾರತೀಯರಿಗೆ ಸೇರಿದ್ದು. ಹಿಂದುಗಳಿಗೆ ಮಾತ್ರ ಸೇರಿದ್ದಲ್ಲ. ಹಲವು ನಂಬುಗೆಗಳನ್ನು ಹೊಂದಿರುವ, ನಂಬುಗೆಗಳನ್ನೇ ಹೊಂದದ ಎಲ್ಲ ಜನರದ್ದು’ ಎಂದು ಅವರು ಹೇಳಿದ್ದಾರೆ.
ಭಾನುವಾರ ಜೈಪುರದ ಕಾಂಗ್ರೆಸ್ ಸಮಾವೇಶದಲ್ಲಿ ಮಾತನಾಡಿದ್ದ ರಾಹುಲ್ ಗಾಂಧಿ ಅವರು, ‘ಹಿಂದು ಮತ್ತು ಹಿಂದುತ್ವದ ನಡುವೆ ಬಹಳ ವ್ಯತ್ಯಾಸವಿದೆ. ಭಾರತವು ಹಿಂದುಗಳಿಗೆ ಸೇರಿದ್ದು, ಹಿಂದುತ್ವವಾದಿಗಳದ್ದಲ್ಲ,’ ಎಂದು ಹೇಳಿದ್ದರು.
ಜೊತೆಗೆ, ಮಹಾತ್ಮ ಗಾಂಧೀಜಿ ಅವರನ್ನು ಹಿಂದು ಎಂದಿದ್ದ ರಾಹುಲ್ ಗಾಂಧಿ ಅವರು, ಗೋಡ್ಸೆಯನ್ನು ಹಿಂದುತ್ವವಾದಿ ಎಂದು ಕರೆದಿದ್ದರು. ರಾಹುಲ್ ಅವರ ಈ ಅಭಿಪ್ರಾಯವು ಚರ್ಚೆಗೆ ಗುರಿಯಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.