ADVERTISEMENT

ದೇಶದಲ್ಲಿ ಸೌರಕ್ರಾಂತಿಯ ಸುವರ್ಣಕಾಲ: ಪ್ರಧಾನಿ ನರೇಂದ್ರ ಮೋದಿ

ಜಾಗತಿಕ ನವೀಕರಿಸಬಹುದಾದ ಇಂಧನ ಹೂಡಿಕೆದಾರರ ಸಮ್ಮೇಳನ

ಪಿಟಿಐ
Published 16 ಸೆಪ್ಟೆಂಬರ್ 2024, 15:26 IST
Last Updated 16 ಸೆಪ್ಟೆಂಬರ್ 2024, 15:26 IST
ಗುಜರಾತ್‌ನ ಗಾಂಧಿನಗರದಲ್ಲಿ ಸೋಮವಾರ ನಡೆದ ಜಾಗತಿಕ ನವೀಕರಣ ಇಂಧನ ಹೂಡಿಕೆದಾರರ ಸಮ್ಮೇಳನವನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದರು. ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳು ಭಾಗವಹಿಸಿದ್ದರು–ಪಿಟಿಐ ಚಿತ್ರ 
ಗುಜರಾತ್‌ನ ಗಾಂಧಿನಗರದಲ್ಲಿ ಸೋಮವಾರ ನಡೆದ ಜಾಗತಿಕ ನವೀಕರಣ ಇಂಧನ ಹೂಡಿಕೆದಾರರ ಸಮ್ಮೇಳನವನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದರು. ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳು ಭಾಗವಹಿಸಿದ್ದರು–ಪಿಟಿಐ ಚಿತ್ರ    

ಗಾಂಧಿನಗರ: ‘ಭಾರತವು ವೈವಿಧ್ಯತೆ, ಗಾತ್ರ, ಸಾಮರ್ಥ್ಯದ ವಿಚಾರದಲ್ಲಿ ಅನನ್ಯತೆ ಹೊಂದಿದ್ದು, 21ನೇ ಶತಮಾನದ ಬೆಳವಣಿಗೆಯಲ್ಲಿ ಅತ್ಯುತ್ತಮ ಸಾಧನೆ ಮಾಡಲಿದೆ ಎಂದು ವಿಶ್ವವೇ ಮನಗಾಣುತ್ತಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ವಿಶ್ವಾಸ ವ್ಯಕ್ತಪಡಿಸಿದರು.

ಗಾಂಧಿನಗರದಲ್ಲಿ ನಡೆದ ‘ಜಾಗತಿಕ ನವೀಕರಿಸಬಹುದಾದ ಇಂಧನ ಹೂಡಿಕೆದಾರರ ಸಮ್ಮೇಳನ’ದ 4ನೇ ಆವೃತ್ತಿಗೆ ಚಾಲನೆ ನೀಡಿ ಮಾತನಾಡಿದ ಅವರು, ‘21ನೇ ಶತಮಾನದ ಇತಿಹಾಸ ಬರೆಯುವ ವೇಳೆ, ಭಾರತದ ಸೌರಕ್ರಾಂತಿಯನ್ನು ಸುವರ್ಣಾಕ್ಷರಗಳಲ್ಲಿ ಬರೆದಿಡಬೇಕು’ ಎಂದು ತಿಳಿಸಿದರು.

‘ಎನ್‌ಡಿಎ ಸರ್ಕಾರದ ಮೂರನೇ ಅವಧಿಯ 100 ದಿನಗಳಲ್ಲಿ ದೇಶದ ಪ್ರತಿ ಕ್ಷೇತ್ರದ ಸಮಸ್ಯೆಗಳನ್ನು ಬಗೆಹರಿಸಲು ಶ್ರಮಿಸುತ್ತಿದ್ದು, ದೇಶವು ಕ್ಷಿಪ್ರ ಅಭಿವೃದ್ಧಿಯೆಡೆಗೆ ಸಾಗುತ್ತಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ADVERTISEMENT

‘ಮುಂದಿನ ಸಾವಿರ ವರ್ಷದ ತಳಹದಿಯ ಮೇಲೆ ದೇಶದ ಅಭಿವೃದ್ಧಿಯ ಗುರಿ ಹೊಂದಲಾಗಿದ್ದು, ಉನ್ನತ ಶ್ರೇಣಿಯನ್ನು ಪಡೆಯುವುದಷ್ಟೇ ನಮ್ಮ ಗುರಿಯಾಗಿಟ್ಟುಕೊಂಡಿಲ್ಲ, ಸುಸ್ಥಿರ ಬೆಳವಣಿಗೆಗೂ ಆದ್ಯತೆ ನೀಡಲಾಗಿದೆ’ ಎಂದರು. 

‘2047ರ ಅವಧಿಗೆ ದೇಶ ಅಭಿವೃದ್ಧಿ ಹೊಂದಿದ ದೇಶವಾಗಲಿದೆ. ಆಗಿನ, ಇಂಧನದ ಅಗತ್ಯತೆಯನ್ನು ಭಾರತವು ಈಗಲೇ ಮನಗಂಡಿದ್ದು, ಸ್ವಾವಲಂಬಿ ಸಾಧಿಸಲು ದೇಶದಲ್ಲಿ ತೈಲ ಹಾಗೂ ಅನಿಲ ಸಂಪನ್ಮೂಲ ಹೊಂದಿಲ್ಲ. ಹೀಗಾಗಿ, ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು, ಸೌರ, ಪವನ, ಅಣು ಹಾಗೂ ಜಲವಿದ್ಯುತ್‌ಗೆ ಹೆಚ್ಚಿನ ಆದ್ಯತೆ ನೀಡಿದ್ದೇವೆ’ ಎಂದು ಮೋದಿ ತಿಳಿಸಿದರು.

‘ಹಸಿರು ಇಂಧನ ವಲಯ ಅಭಿವೃದ್ಧಿಗೆ ಕೇಂದ್ರ ಸರ್ಕಾರ ಮಹತ್ವದ ಕ್ರಮಗಳನ್ನು ತೆಗೆದುಕೊಂಡಿದ್ದು, 7 ಸಾವಿರ ಕೋಟಿ ಮೊತ್ತದ ವಿದೇಶಿ ಹೂಡಿಕೆ ಯೋಜನೆ ಸೇರಿದಂತೆ 31 ಸಾವಿರ ಮೆಗಾವಾಟ್‌ ಜಲವಿದ್ಯುತ್‌ ಉತ್ಪಾದನೆಯ ₹12 ಸಾವಿರ ಕೋಟಿ ಯೋಜನೆಗಳಿಗೆ ಅನುಮೋದನೆ ನೀಡಲಾಗಿದೆ’ ಎಂದು ತಿಳಿಸಿದರು.

ಅಯೋಧ್ಯಾ ಸೌರನಗರಿ: ‘ಅಯೋಧ್ಯಾ’ವನ್ನು ‘ಸೌರನಗರಿ’ಯಾಗಿ ಪರಿವರ್ತಿಸಲು ಸರ್ಕಾರ ಪ್ರಯತ್ನ ನಡೆಸುತ್ತಿದ್ದು, ಪ್ರತಿ ಮನೆ ಹಾಗೂ ಕಚೇರಿಯೂ ಕೂಡ ಸೌರಇಂಧನದಿಂದಲೇ ಕಾರ್ಯನಿರ್ವಹಿಸುವ ಗುರಿ ಹೊಂದಲಾಗಿದೆ. ಇದೇ ಮಾದರಿಯಲ್ಲಿ ದೇಶದ 17 ನಗರಗಳನ್ನು ಸೌರನಗರವಾಗಿ ಅಭಿವೃದ್ಧಿಪಡಿಸಲಾಗುವುದು’ ಎಂದು ತಿಳಿಸಿದರು..

ಮೋದಿ ಹೇಳಿದ್ದೇನು..?

  • ಬಡವರಿಗೆ 7 ಕೋಟಿ ಮನೆಗಳ ನಿರ್ಮಾಣದ ಗುರಿ

  • ಸರ್ಕಾರದ 2ನೇ ಅವಧಿಯಲ್ಲಿ 4 ಕೋಟಿ ನಿರ್ಮಾಣ

  • 12 ಕೈಗಾರಿಕ ನಗರಗಳ ಸ್ಥಾಪಿಸಲು ನಿರ್ಧಾರ

  • 8 ಹೈಸ್ಪೀಡ್‌ ರಸ್ತೆ ಕಾರಿಡಾರ್‌ ಯೋಜನೆಗಳ ನಿರ್ಮಾಣ

  • ಸಂಶೋಧನೆಗಾಗಿ ₹1 ಲಕ್ಷ ಕೋಟಿ ನಿಧಿ ಸ್ಥಾಪನೆ

ಹೆಚ್ಚಿನ ಹೂಡಿಕೆಗೆ ಆಹ್ವಾನ
ಗಾಂಧಿನಗರ: ‘ಹಸಿರು ಇಂಧನ ವಲಯ ಯೋಜನೆಗಳಿಗೆ ಬ್ಯಾಂಕ್ ಹಾಗೂ ಹಣಕಾಸು ಸಂಸ್ಥೆಗಳು ₹32.45 ಲಕ್ಷ ಕೋಟಿ ನೆರವು ನೀಡಲು ಬದ್ಧತೆ ವ್ಯಕ್ತಪಡಿಸಿದ್ದು ದೇಶದಲ್ಲಿ ಹೂಡಿಕೆದಾರರು ಈ ಕ್ಷೇತ್ರದಲ್ಲಿ ಹೆಚ್ಚಿನ ಹೂಡಿಕೆ ಮಾಡಲು ಮುಂದೆ ಬರಬೇಕು’ ಎಂದು ಕೇಂದ್ರ ನವೀಕರಿಸಬಹುದಾದ ಇಂಧನ ಇಲಾಖೆಯ ಸಚಿವ ಪ್ರಲ್ಹಾದ್‌ ಜೋಶಿ ತಿಳಿಸಿದರು. ‘ನವೀಕರಿಸಬಹುದಾದ ಇಂಧನ ವಲಯದಲ್ಲಿ ಹೆಚ್ಚುವರಿಯಾಗಿ 570 ಗಿಗಾವ್ಯಾಟ್‌ ಸೇರ್ಪಡೆಗೊಳಿಸಲು ಹೂಡಿಕೆದಾರರು ಬದ್ಧತೆ ವ್ಯಕ್ತಪಡಿಸಿದ್ದಾರೆ’ ಎಂದರು. ‘2030ರ ವೇಳೆಗೆ 500 ಗಿಗಾವ್ಯಾಟ್‌ ಹಸಿರು ಇಂಧನ ಹೊಂದುವ ಸರ್ಕಾರ ಗುರಿ ತಲುಪಲು ರಾಜ್ಯ ಸರ್ಕಾರ ಹಾಗೂ ಕೇಂದ್ರಾಡಳಿತ ಪ್ರದೇಶಗಳು ಸಾಕಷ್ಟು ಬೆಂಬಲ ನೀಡುತ್ತಿವೆ. ಉತ್ಪಾದಕರು ಹಾಗೂ ಹಣಕಾಸು ಸಂಸ್ಥೆಗಳು ಅಗತ್ಯ ಸಹಾಯ ನೀಡುತ್ತಿವೆ’ ಎಂದು ತಿಳಿಸಿದರು. ‘ಈ ಕ್ಷೇತ್ರದಲ್ಲಿ ಹೂಡಿಕೆ ಮಾಡಲು ಭಾರತದಲ್ಲಿ ಸಾಕಷ್ಟು ಅವಕಾಶಗಳಿದ್ದು ಹೂಡಿಕೆದಾರರು ಹೆಚ್ಚಿನ ಹೂಡಿಕೆ ಮಾಡಲು ಮುಂದಾಗಬೇಕು’ ಎಂದು ಕರೆನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.