ನವದೆಹಲಿ: ದೈಹಿಕ ಶ್ರಮ ಬೇಡುವ ಉದ್ಯೋಗಗಳನ್ನು (ಬ್ಲೂ ಕಾಲರ್ ಉದ್ಯೋಗ) ಸ್ವಯಂಚಾಲಿತಗೊಳಿಸುವುದಕ್ಕೆ ಭಾರತದಲ್ಲಿ ವಿಪುಲ ಅವಕಾಶಗಳಿವೆ ಎಂದು ಫೌಂಟೇನ್ ಸಂಸ್ಥೆ ಹೇಳಿದೆ.
ದೈಹಿಕ ಶ್ರಮಕ್ಕೆ ಬದಲಾಗಿ ತಂತ್ರಜ್ಞಾನ ಬಳಸುವ ‘ಆಟೊಮೇಷನ್ ಸಾಫ್ಟ್‌ವೇರ್’ ಸೇವೆ ಒದಗಿಸುವ ಸಂಸ್ಥೆ ಇದಾಗಿದೆ. ಭಾರತ, ಅಮೆರಿಕ, ಬ್ರಿಟನ್, ಫ್ರಾನ್ಸ್, ದಕ್ಷಿಣ ಆಫ್ರಿಕ ಸೇರಿ ಇನ್ನೂ ಹಲವು ದೇಶಗಳಲ್ಲಿ ಈ ಸಂಸ್ಥೆ ಈಗಾಗಲೇ ಕಾರ್ಯಾಚರಿಸುತ್ತಿದೆ. ಸಂಸ್ಥೆಯ ಕಾರ್ಯಾಚರಣೆಗೆ ದೊಡ್ಡಮಟ್ಟದ ಅವಕಾಶ ಇರುವ ದೇಶಗಳು ಎಂದು ಭಾರತ, ಬ್ರಿಟನ್ ಮತ್ತು ಫ್ರಾನ್ಸ್ ದೇಶಗಳನ್ನು ಸಂಸ್ಥೆ ಗುರುತಿಸಿದೆ.
ಈ ಕುರಿತು ಸುದ್ದಿಸಂಸ್ಥೆ ಜೊತೆ ಮಾತನಾಡಿದ ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ಸೀನ್ ಬೆಹ್ರ್, ಬ್ಲೂ ಕಾಲರ್ ಉದ್ಯೋಗಗಳನ್ನು ಸ್ವಯಂಚಾಲಿತಗೊಳಿಸುವ ದಿಸೆಯಲ್ಲಿ ಭಾರತದ ಮಾರುಕಟ್ಟೆಯ ಮಹತ್ವವನ್ನು ಸಂಸ್ಥೆ ಮನಗಂಡಿದೆ. ಬ್ಲೂ ಕಾಲರ್ ಮತ್ತು ಗ್ರೇ ಕಾಲರ್ ಉದ್ಯೋಗಿಗಳು ನಿರ್ವಹಿಸುವಂಥ ಕೆಲಸಗಳ ಕಡೆ ಸಂಸ್ಥೆ ಗಮನ ಕೇಂದ್ರೀಕರಿಸಿದೆ ಎಂದರು.
ಈ ವರ್ಗದ ಉದ್ಯೋಗಿಗಳು ಪವರ್‌ಪಾಯಿಂಟ್, ಎಕ್ಸೆಲ್‌ನಂಥ ಸಾಫ್ಟ್‌ವೇರ್ ಬಳಸಿ ಕೆಲಸ ಮಾಡುವುದಿಲ್ಲ. ಆದರೆ, ಉತ್ಪನ್ನ ತಯಾರಿಕೆಯಂಥ ಕೆಲಸಗಳಲ್ಲಿ ತೊಡಗುತ್ತಾರೆ. ಈ ವಲಯದಲ್ಲಿ ಉದ್ಯೋಗಿಗಳನ್ನು ನೇಮಿಸಿಕೊಳ್ಳುವುದು ಮತ್ತು ಅವರು ಉದ್ಯೋಗದಲ್ಲಿ ಮುಂದುವರಿಯುವಂತೆ ಮಾಡುವುದು ಈಚಿನ ದಿನಗಳಲ್ಲಿ ಸವಾಲಿನ ಕೆಲಸವಾಗಿದೆ ಎಂದರು.
ಬ್ಲೂ ಮತ್ತು ಗ್ರೇ ಕಾಲರ್ ವಲಯದಲ್ಲಿ ಬಂಡವಾಳ ಹೂಡುವ ಮತ್ತು ಉದ್ಯಮವನ್ನು ವಿಸ್ತರಿಸುವ ದಿಸೆಯಲ್ಲಿ ಭಾರತವು ಅತ್ಯಂತ ಆಕರ್ಷಕ ಮಾರುಕಟ್ಟೆಯಾಗಿದೆ. ಈ ವಲಯದ ಉದ್ಯೋಗ ಮಾರುಕಟ್ಟೆಯ ಸಂಭವನೀಯ ಬೆಳವಣಿಗೆ ಕೂಡಾ ಭಾರತವನ್ನು ಬಂಡವಾಳ ಹೂಡಲು ಅವಕಾಶವಿರುವ ದೇಶವನ್ನಾಗಿಸಿದೆ.
ಚೀನಾ ಕೂಡ ಇಂಥದ್ದೇ ಅವಕಾಶಗಳನ್ನು ಹೊಂದಿದೆ. ಆದರೆ ಅಲ್ಲಿ ಎದುರಾಗುವ ಭೌಗೋಳಿಕ–ರಾಜಕೀಯ ಸವಾಲುಗಳ ಕಾರಣಕ್ಕೆ ಅಲ್ಲಿ ಕಾರ್ಯಾಚರಿಸುವುದು ಕಷ್ಟ ಎಂದು ಸೀನ್ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.