ADVERTISEMENT

‘ಇಂಡಿಯಾ’ ಅಧಿಕಾರಕ್ಕೆ ಬಂದರೆ GST ವ್ಯವಸ್ಥೆ ಸರಳೀಕರಣ: ಮಲ್ಲಿಕಾರ್ಜುನ ಖರ್ಗೆ

ಪಿಟಿಐ
Published 18 ಮೇ 2024, 6:19 IST
Last Updated 18 ಮೇ 2024, 6:19 IST
   

ಮುಂಬೈ: ‘ಇಂಡಿಯಾ ಮೈತ್ರಿಕೂಟ ಅಧಿಕಾರಕ್ಕೆ ಬಂದರೆ ಜಿಎಸ್‌ಟಿ ವ್ಯವಸ್ಥೆಯನ್ನು ಸರಳೀಕರಣಗೊಳಿಸಲಾಗುವುದು’ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ತಿಳಿಸಿದರು.

‘ಇಂಡಿಯಾ’ ಮೈತ್ರಿಕೂಟದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಖರ್ಗೆ, ‘ಆಹಾರ ಭದ್ರತೆ ಕಾಯ್ದೆಯನ್ನು ಜಾರಿಗೆ ತಂದಿದ್ದು ಕಾಂಗ್ರೆಸ್‌ ಆದರೆ, ಅದರ ಲಾಭವನ್ನು ಪ್ರಧಾನಿ ಮೋದಿ ಪಡೆದುಕೊಳ್ಳುತ್ತಿದ್ದಾರೆ’ ಎಂದು ಕಿಡಿಕಾರಿದರು.

‘ದೇಶದ 80 ಕೋಟಿ ಬಡವರಿಗೆ 5 ಕೆ.ಜಿ ಪಡಿತರ ನೀಡುವುದಾಗಿ ಪ್ರಧಾನಿ ಮೋದಿ ಹೇಳುತ್ತಿದ್ದಾರೆ. ಇಂಡಿಯಾ ಮೈತ್ರಿಕೂಟ ಅಧಿಕಾರಕ್ಕೆ ಬಂದರೆ 10 ಕೆ.ಜಿ ಪಡಿತರ ಹಂಚಲಾಗುವುದು’ ಎಂದರು.

ADVERTISEMENT

‘ಈಗಿನ ‍ಪ್ರಧಾನಿಯ ಹಾಗೆ ಹಿಂದಿನ ಯಾವ ಪ್ರಧಾನಿಗಳು ಜನರನ್ನು ಪ್ರಚೋದಿಸುವ ಕೆಲಸ ಮಾಡಿಲ್ಲ. ಪದೇ ಪದೇ ಪ್ರಜಾಪ್ರಭುತ್ವದ ಬಗ್ಗೆ ಮಾತನಾಡುವ ಮೋದಿ ಪ್ರಜಾಪ್ರಭುತ್ವದ ತತ್ವಗಳಿಗೆ ಬದ್ಧವಾಗಿಲ್ಲ’ ಎಂದು ಅಸಮಾಧಾನ ಹೊರಹಾಕಿದರು.

‘ಇಂಡಿಯಾ’ ಅಧಿಕಾರಕ್ಕೆ ಬಂದರೆ ಟಿಎಂಸಿಯು ಸರ್ಕಾರದ ಭಾಗವಾಗಲಿದೆಯಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಖರ್ಗೆ, ‘ಮೊದಲಿಗೆ ಇಂಡಿಯಾ ಮೈತ್ರಿಕೂಟಕ್ಕೆ ಬಾಹ್ಯ ಬೆಂಬಲ ನೀಡುವುದಾಗಿ ಹೇಳಿದ್ದ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಇತ್ತೀಚೆಗಷ್ಟೇ ‘ಇಂಡಿಯಾ‘ ಸರ್ಕಾರ ರಚನೆಯಾದರೆ ಟಿಎಂಸಿಯೂ ಸರ್ಕಾರದ ಭಾಗವಾಗಲಿದೆ ಎಂದು ಹೇಳಿದ್ದಾರೆ. ಸ್ವಾಭಾವಿಕವಾಗಿಯೇ ಅವರು ಮೈತ್ರಿಯ ಜೊತೆಗಿದ್ದಾರೆ. ಅಧೀರ್ ರಂಜನ್‌ ಒಬ್ಬರೇ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಿಲ್ಲ’ ಎಂದರು.

‘ಅಧಿಕಾರಕ್ಕೆ ಬಂದ ನಂತರ ದೇಶದ ಎಲ್ಲಾ ಧಾರ್ಮಿಕ ಸ್ಥಳಗಳನ್ನು ರಕ್ಷಿಸಲಾಗುವುದು’ ಎಂದು ಎನ್‌ಸಿಪಿ(ಎಸ್‌ಸಿಪಿ) ಮುಖ್ಯಸ್ಥ ಶರದ್‌ ಪವಾರ್ ತಿಳಿಸಿದರು.

ಜೂನ್‌ 4ರ ನಂತರ ದೇಶದಲ್ಲಿ ಅಚ್ಛೇ ದಿನ ಶುರು: ಉದ್ಧವ್ ಠಾಕ್ರೆ

‘ಇಂಡಿಯಾ ಮೈತ್ರಿಕೂಟ ಅಧಿಕಾರಕ್ಕೆ ಬಂದ ನಂತರ ಜೂನ್‌ 4ರಿಂದ ದೇಶಕ್ಕೆ ಅಚ್ಛೇ ದಿನ್ ಬರಲಿದೆ’ ಎಂದು ಶಿವಸೇನಾ(ಯುಟಿಬಿ) ಮುಖ್ಯಸ್ಥ ಉದ್ಧವ್ ಠಾಕ್ರೆ ಹೇಳಿದರು.

‘ಇಂಡಿಯಾ’ ಮೈತ್ರಿಕೂಟದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಉದ್ಧವ್, ‘ಇಂದು ನಮ್ಮ ಪಕ್ಷವನ್ನು ನಕಲಿ ಎಂದು ಕರೆದವರು, ನಾಳೆ ಆರ್‌ಎಸ್‌ಎಸ್‌ ಅನ್ನು ನಕಲಿ ಎನ್ನಬಹುದು. ಆರ್‌ಎಸ್‌ಎಸ್‌ಗೆ ಬೆದರಿಕೆ ಇದ್ದು. ಮುಂದಿನ ದಿನಗಳಲ್ಲಿ ಬಿಜೆಪಿ ಆರ್‌ಎಸ್‌ಎಸ್‌ ಅನ್ನು ನಿಷೇಧಿಸುವ ಸಾಧ್ಯತೆಯಿದೆ’ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರ ಹೇಳಿಕೆಗೆ ತಿರುಗೇಟು ನೀಡಿದರು.

‘ನಿರುದ್ಯೋಗದಂತ ಸಮಸ್ಯೆಗಳಿಂದ ಜನರ ಗಮನವನ್ನು ಬೇರೆಡೆಗೆ ತಿರುಗಿಸಲು ಬಿಜೆಪಿ ಪ್ರಯತ್ನಿಸಿದ್ದು, ನಮ್ಮ ರ್‍ಯಾಲಿಗಳಲ್ಲಿ ಪಾಕಿಸ್ತಾನ ಧ್ವಜಗಳನ್ನು ಪ್ರದರ್ಶಿಸುತ್ತಿದೆ’ ಎಂದು ಆರೋಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.