ADVERTISEMENT

ಸಂವಿಧಾನ ಅಂಗೀಕರಿಸಿ 75 ವರ್ಷ: ಮಾತನಾಡಲು ಅವಕಾಶ ನೀಡುವಂತೆ ‘ಇಂಡಿಯಾ’ ಬಣ ಪತ್ರ

ಪಿಟಿಐ
Published 25 ನವೆಂಬರ್ 2024, 11:25 IST
Last Updated 25 ನವೆಂಬರ್ 2024, 11:25 IST
<div class="paragraphs"><p>‘ಇಂಡಿಯಾ’ ಬಣದ ನಾಯಕರು</p></div>

‘ಇಂಡಿಯಾ’ ಬಣದ ನಾಯಕರು

   

ನವದೆಹಲಿ: ಸಂವಿಧಾನವನ್ನು ಅಂಗೀಕರಿಸಿ ನವೆಂಬರ್‌ 26ಕ್ಕೆ (ಮಂಗಳವಾರ) 75 ವರ್ಷ ತುಂಬಲಿದೆ. ಇದೇ ದಿನದಂದು 75ನೇ ವರ್ಷಾಚರಣೆ ಅಂಗವಾಗಿ ಸಂಸತ್ತಿನ ಜಂಟಿ ಅಧಿವೇಶನ ನಡೆಯಲಿದೆ. ಹಾಗಾಗಿ ಉಭಯ ಸದನಗಳಲ್ಲಿ ವಿರೋಧ ಪಕ್ಷದ ನಾಯಕರಿಗೂ ಮಾತನಾಡಲು ಅವಕಾಶ ನೀಡಬೇಕು ಎಂದು ಒತ್ತಾಯಿಸಿ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರಿಗೆ ‘ಇಂಡಿಯಾ’ ಬಣದ ನಾಯಕರು ಪತ್ರ ಬರೆದಿದ್ದಾರೆ.

ಸಂವಿಧಾನ ರಚನಾ ಸಭೆಯು 1949ರ ನ.26ರಂದು ಸಂವಿಧಾನ ಅಂಗೀಕರಿಸಿದ ಹಳೆಯ ಸಂಸತ್‌ ಭವನವಾದ ಸಂವಿಧಾನ ಸದನದ ಐತಿಹಾಸಿಕ ‘ಸೆಂಟ್ರಲ್‌ ಹಾಲ್‌’ನಲ್ಲಿ ಕಾರ್ಯಕ್ರಮ ನಡೆಯಲಿದ್ದು, ರಾಷ್ಟ್ರಪತಿ ದ್ರೌಪದಿ ಮುರ್ಮು, ಉಪರಾಷ್ಟ್ರಪತಿ ಜಗದೀಪ್‌ ಧನಕರ್‌ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರು ಭಾಗವಹಿಸಲಿದ್ದಾರೆ.

ADVERTISEMENT

ಸಂಸದೀಯ ಪ್ರಜಾಪ್ರಭುತ್ವದ ಸಂಪ್ರದಾಯಗಳನ್ನು ಅನುಸರಿಸುವುದರ ಜತೆಗೆ ಈ ಐತಿಹಾಸಿಕ ಸಂದರ್ಭದಲ್ಲಿ ಮಾತನಾಡಲು ಉಭಯ ಸದನಗಳಲ್ಲಿ ವಿರೋಧ ಪಕ್ಷದ ನಾಯಕರಿಗೂ ಅವಕಾಶ ನೀಡಬೇಕು ಎಂದು ಸ್ಪೀಕರ್‌ಗೆ ಬರೆದ ಪತ್ರದಲ್ಲಿ ‘ಇಂಡಿಯಾ’ ಬಣದ ನಾಯಕರು ಒತ್ತಾಯಿಸಿದ್ದಾರೆ.

ಟಿ.ಆರ್ ಬಾಲು, ತಿರುಚಿ ಶಿವ, ಕನಿಮೋಳಿ, ಸುಪ್ರಿಯಾ ಸುಳೆ, ರಾಘವ್ ಚಡ್ಡಾ, ಪಿ.ಸಂತೋಷ್ ಕುಮಾರ್, ಮೊಹಮ್ಮದ್ ಬಶೀರ್, ಕೆ.ರಾಧಾಕೃಷ್ಣನ್, ರಾಮ್‌ಜಿ ಲಾಲ್ ಸುಮನ್, ಎನ್‌.ಕೆ. ಪ್ರೇಮಚಂದ್ರನ್ ಸೇರಿದಂತೆ ಹಲವು ನಾಯಕರು ಪತ್ರಕ್ಕೆ ಸಹಿ ಮಾಡಿದ್ದಾರೆ.

ಲಂಚ ಹಾಗೂ ವಂಚನೆ ಪ್ರಕರಣದಲ್ಲಿ ಉದ್ಯಮಿ ಗೌತಮ್ ಅದಾನಿ ವಿರುದ್ಧ ಬಂಧನ ವಾರೆಂಟ್ ಹೊರಡಿಸಿರುವ ಅಮೆರಿಕ ನ್ಯಾಯಾಲಯದ ಪ್ರಕರಣ ಕುರಿತು ಚರ್ಚೆಗೆ ಅವಕಾಶ ನೀಡುವಂತೆ ವಿರೋಧ ಪಕ್ಷ ಕಾಂಗ್ರೆಸ್‌ ಪಟ್ಟು ಹಿಡಿದಿದ್ದರಿಂದ, ರಾಜ್ಯಸಭಾ ಕಲಾಪವನ್ನು ಬುಧವಾರದವರೆಗೆ (ನ. 27) ಮುಂದೂಡಲಾಗಿದೆ.

ಅದಾನಿ ವಿಷಯದ ಜತೆಗೆ, ಮಣಿಪುರ ಹಿಂಸಾಚಾರ, ಉತ್ತರ ಪ್ರದೇಶದ ಸಂಭಲ್ ಜಿಲ್ಲೆಯಲ್ಲಿ ನಡೆದ ಹಿಂಸಾಚಾರ ಮತ್ತು ಕೇರಳದ ವಯನಾಡ್‌ನಲ್ಲಿ ಸಂಭವಿಸಿದ ಭೂಕುಸಿತ ಘಟನೆಗಳ ಕುರಿತ ಚರ್ಚೆಗೂ ರೂಲ್ 267ರಡಿಯಲ್ಲಿ ಮನವಿ ಸಲ್ಲಿಸಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.