ADVERTISEMENT

ವಿನೇಶ್ ಫೋಗಟ್ ಅನರ್ಹತೆ: ವಿಪಕ್ಷಗಳಿಂದ ಕಲಾಪ ಬಹಿಷ್ಕಾರ

​ಪ್ರಜಾವಾಣಿ ವಾರ್ತೆ
Published 7 ಆಗಸ್ಟ್ 2024, 18:51 IST
Last Updated 7 ಆಗಸ್ಟ್ 2024, 18:51 IST
ವಿನೇಶ್‌ ಫೋಗಟ್ ಅವರಿಗೆ ನ್ಯಾಯ ಒದಗಿಸುವಂತೆ ಆಗ್ರಹಿಸಿ ‘ಇಂಡಿಯಾ’ ಮೈತ್ರಿಕೂಟದ ಸಂಸದರು ಸಂಸತ್ತಿನ ಆವರಣದಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು –ಪಿಟಿಐ ಚಿತ್ರ 
ವಿನೇಶ್‌ ಫೋಗಟ್ ಅವರಿಗೆ ನ್ಯಾಯ ಒದಗಿಸುವಂತೆ ಆಗ್ರಹಿಸಿ ‘ಇಂಡಿಯಾ’ ಮೈತ್ರಿಕೂಟದ ಸಂಸದರು ಸಂಸತ್ತಿನ ಆವರಣದಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು –ಪಿಟಿಐ ಚಿತ್ರ    

ನವದೆಹಲಿ: ವಿನೇಶ್ ಫೋಗಟ್ ಅವರ ಅನರ್ಹತೆಯ ಹಿಂದೆ ‘ಪಿತೂರಿ’ ನಡೆದಿದೆ ಎಂದು ಆರೋಪಿಸಿರುವ ‘ಇಂಡಿಯಾ’ ಮೈತ್ರಿಕೂಟದ ಸಂಸದರು ಸಂಸತ್ತಿನ ಆವರಣದಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು. 

ಈ ವಿಷಯದ ಕುರಿತು ಹೆಚ್ಚಿನ ಚರ್ಚೆಗೆ ಅವಕಾಶ ನೀಡದ್ದಕ್ಕೆ ಕಾಂಗ್ರೆಸ್‌, ಟಿಎಂಸಿ, ಎನ್‌ಸಿಪಿ (ಎಸ್‌ಪಿ), ಜೆಎಂಎಂ, ಆರ್‌ಜೆಡಿ ಮತ್ತು ಎಸ್‌ಪಿ ಸಂಸದರು ಲೋಕಸಭೆ ಮತ್ತು ರಾಜ್ಯಸಭೆ ಕಲಾಪಗಳನ್ನು ಬಹಿಷ್ಕರಿಸಿ ಹೊರನಡೆದರು. ವಿನೇಶ್‌ ಅವರಿಗೆ ನ್ಯಾಯ ದೊರಕಿಸಲು ಒತ್ತಾಯಿಸಿದರು.

‘ಪ್ರಧಾನಿ ಮೋದಿ ಅವರು ವಿನೇಶ್‌ ಅವರಿಗೆ ಸಾಂತ್ವನ ಹೇಳಿ ಟ್ವೀಟ್ ಮಾಡಿದ್ದಾರೆ. ಮೋದಿಜಿ ಅವರೇ, ಇಲ್ಲಿ ಸಾಂತ್ವನದ ಟ್ವೀಟ್‌ ಸಾಲದು. ಅವರಿಗೆ ನ್ಯಾಯ ಸಿಗಬೇಕು’ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಣದೀಪ್‌ ಸಿಂಗ್‌ ಸುರ್ಜೇವಾಲಾ ಸುದ್ದಿಗಾರರಿಗೆ ತಿಳಿಸಿದರು.

ADVERTISEMENT

‘ಮೊದಲು ಅವರನ್ನು (ವಿನೇಶ್‌) ದೆಹಲಿಯ ಬೀದಿಯಲ್ಲಿ ಪ್ರತಿಭಟನೆಗೆ ಇಳಿಸಲಾಯಿತು. ಇದೀಗ ಅವರು ಒಲಿಂಪಿಕ್ಸ್‌ನಿಂದ ಅನರ್ಹಗೊಂಡಾಗ ಸರ್ಕಾರ ಮೌನವಹಿಸಿದೆ. ಇದು ಪಿತೂರಿ ನಡೆದಿರುವುದರತ್ತ ಬೊಟ್ಟು ಮಾಡಿದೆ’ ಎಂದು ಆರೋಪಿಸಿದರು.

ಕೇಂದ್ರ ಕ್ರೀಡಾ ಸಚಿವ ಮನ್ಸುಖ್‌ ಮಾಂಡವೀಯ ಅವರು ವಿನೇಶ್‌ ಅನರ್ಹತೆ ಮತ್ತು ಅವರಿಗೆ ನೀಡಲಾದ ಎಲ್ಲ ನೆರವಿನ ವಿವರಗಳನ್ನು ಲೋಕಸಭೆಯ ಮುಂದಿಟ್ಟರು. ಅದಕ್ಕೆ ತೃಪ್ತರಾಗದ ವಿಪಕ್ಷಗಳ ಸಂಸದರು ಹೊರನಡೆದರು. ಆ ಬಳಿಕ ಸಂಸತ್‌ ಆವರಣದಲ್ಲಿ ಪ್ರತಿಭಟನೆ ನಡೆಸಿ, ‘ವಿನೇಶ್ ಫೋಗಟ್ ವಿರುದ್ಧದ ಪಿತೂರಿ ನಿಲ್ಲಿಸಿ', 'ಅವರಿಗೆ ನ್ಯಾಯ ಒದಗಿಸಿ’ ಎಂದು ಘೋಷಣೆ ಕೂಗಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.