ADVERTISEMENT

ಆರೋಗ್ಯ, ಜೀವ ವಿಮೆ ಮೇಲಿನ ಜಿಎಸ್‌ಟಿ ವಿರೋಧಿಸಿ ‘ಇಂಡಿಯಾ’ ಬಣ ಪ್ರತಿಭಟನೆ

ಕೇಂದ್ರ ಸರ್ಕಾರದ ತೆರಿಗೆ ನೀತಿಗೆ ವಿಪಕ್ಷಗಳ ಆಕ್ರೋಶ

ಪಿಟಿಐ
Published 6 ಆಗಸ್ಟ್ 2024, 14:32 IST
Last Updated 6 ಆಗಸ್ಟ್ 2024, 14:32 IST
<div class="paragraphs"><p>'ಇಂಡಿಯಾ' ಬಣದ ನಾಯಕರು ಪ್ರತಿಭಟನೆ ನಡೆಸಿದರು</p></div>

'ಇಂಡಿಯಾ' ಬಣದ ನಾಯಕರು ಪ್ರತಿಭಟನೆ ನಡೆಸಿದರು

   

–ಪಿಟಿಐ ಚಿತ್ರ

ನವದೆಹಲಿ: ಆರೋಗ್ಯ ಮತ್ತು ಜೀವ ವಿಮಾ ಕಂತಿನ ಮೇಲೆ ವಿಧಿಸಲಾಗಿರುವ 18 ಶೇಕಡಾ ಜಿಎಸ್‌ಟಿಯನ್ನು ಹಿಂಪಡೆಯುಂತೆ ಆಗ್ರಹಿಸಿ 'ಇಂಡಿಯಾ' ಒಕ್ಕೂಟದ ಪಕ್ಷಗಳು ಸಂಸತ್ತಿನ ಆವರಣಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದವು.

ADVERTISEMENT

ಸಂಸತ್ತಿನ ಮಕರ ದ್ವಾರದ ಮುಂದೆ ನಡೆದ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ಕಾಂಗ್ರೆಸ್‌, ತೃಣ ಮೂಲ ಕಾಂಗ್ರೆಸ್ (ಟಿಎಂಸಿ), ಅಮ್‌ ಆದ್ಮಿ(ಎಎಪಿ) ಮತ್ತು ಎನ್‌ಸಿಪಿ (ಶರಾದ್‌ ಪವಾರ್‌ ಬಣ) ಸೇರಿ ಹಲವು ಪಕ್ಷಗಳ ಸಂಸದರು, ‘ತೆರಿಗೆ ಭಯೋತ್ಪಾದನೆ’ ಎಂಬ ಫಲಕಗಳನ್ನು ಹಿಡಿದು ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.

ಬಳಿಕ ‘ಎಕ್ಸ್‌’ನಲ್ಲಿ ಆಕ್ರೋಶ ವ್ಯಕ್ತಪಡಿಸಿದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು, ‘ಮೋದಿ ಸರ್ಕಾರದ ತೆರಿಗೆ ನೀತಿಯಿಂದಾಗಿ ಮಧ್ಯಮವರ್ಗದ ಜನರು ಈಗಾಗಲೇ ಪರಿತಪಿಸುತ್ತಿದ್ದಾರೆ. ಭಾರತದ ವೈದ್ಯಕೀಯ ಕ್ಷೇತ್ರದ ಹಣದುಬ್ಬರವು 2024ರಲ್ಲಿ ಶೇ 14ರಷ್ಟಿದ್ದು, ಇದು ಏಷ್ಯಾದಲ್ಲೇ ಅ‌‌ತ್ಯಧಿಕ ಪ್ರಮಾಣದ ಹಣದುಬ್ಬರವಾಗಿದೆ. ಈ ತೆರಿಗೆ ನೀತಿಯು ವಿಪತ್ತಿನ ಸಂದರ್ಭದಲ್ಲಿ ಲಾಭ ಮಾಡಿಕೊಳ್ಳುವ ಬಿಜೆಪಿಯ ತುಚ್ಛ ನೀತಿಗೆ ಒಂದು ಉದಾಹರಣೆಯಾಗಿದೆ’ ಎಂದು ಟೀಕಿಸಿದರು. 

‘ಆರೋಗ್ಯ ಸಮಸ್ಯೆಗಳಾದಾಗ ನೆರವಿಗೆ ಬರಲಿ ಎಂಬ ಉದ್ದೇಶದಿಂದ ಒಂದೊಂದು ರುಪಾಯಿಯನ್ನೂ ಉಳಿತಾಯ ಮಾಡಿ ಆರೋಗ್ಯ ವಿಮಾ ಕಂತನ್ನು ಪಾವತಿಸುವ ಜನಸಾಮಾನ್ಯರಿಂದ ಮೋದಿ ಸರ್ಕಾರ ₹24 ಸಾವಿರ ಕೋಟಿ ಸಂಗ್ರಹಿಸುತ್ತಿದೆ. ಇದನ್ನು ಇಂಡಿಯಾ ಒಕ್ಕೂಟ ವಿರೋಧಿಸುತ್ತದೆ. ಆರೋಗ್ಯ ಮತ್ತು ಜೀವ ವಿಮಾ ವಲಯವನ್ನು ಜಿಎಸ್‌ಟಿಯಿಂದ ಹೊರಗಿಡಬೇಕು’ ಎಂದು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್‌ ಗಾಂಧಿ ಆಗ್ರಹಿಸಿದರು.

‘ವೈದ್ಯಕೀಯ ಸೇವೆಗಾಗಿ ವಿಶ್ವದಲ್ಲೇ ಅತಿ ಹೆಚ್ಚು ಖರ್ಚು ಮಾಡುವವರು ಭಾರತೀಯರು. ‘2047ರಲ್ಲಿ ಎಲ್ಲರಿಗೆ ವಿಮೆ’ ಎಂಬ ಗುರಿಯನ್ನು ಸಾಧಿಸುವ ಬದಲಿಗೆ ಸರ್ಕಾರವು ಜನರಿಗೆ ವಿಮೆಯು ಕೈಗೆಟುಕದಂತೆ ಮಾಡಲು ಮುಂದಾಗಿದೆಯೇ’ ಎಂದು ಕಾಂಗ್ರೆಸ್‌ ಹಿರಿಯ ನಾಯಕ ಶಶಿ ತರೂರು ಪ್ರಶ್ನಿಸಿದರು. 

ಎಲ್ಲ ದುರಂತಗಳಲ್ಲಿಯೂ ತೆರಿಗೆ ಸಂಗ್ರಹಿಸುವ ಅವಕಾಶವನ್ನು ಹುಡುಕುವ ನಡೆಯು ಬಿಜೆಪಿಯ ಸಂವೇದನಾರಹಿತ ಚಿಂತನೆಗೆ ಸಾಕ್ಷಿಯಾಗಿದೆ 
ರಾಹುಲ್‌ ಗಾಂಧಿ ಲೋಕಸಭೆಯ ವಿರೋಧ ಪಕ್ಷದ ನಾಯಕ
ಆರೋಗ್ಯ ಮತ್ತು ಜೀವ ವಿಮೆ ಮೇಲಿನ ‘ಗಬ್ಬರ್ ಸಿಂಗ್‌ ತೆರಿಗೆ’ಯು ಅಮಾನವೀಯವಾಗಿದೆ
ಮಲ್ಲಿಕಾರ್ಜುನ ಖರ್ಗೆ ಎಐಸಿಸಿ ಅಧ್ಯಕ್ಷ
‘ಸೇನೆಯಲ್ಲಿ ಉದ್ಯೋಗ: ಸರ್ಕಾರದಿಂದ ಗುಟ್ಟು’ ನ
ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಸೇನೆಯಲ್ಲಿ ಇರುವ ಉದ್ಯೋಗಾವಕಾಶಗಳ ಕುರಿತ ಮುಖ್ಯವಾದ ದತ್ತಾಂಶವನ್ನು ಗುಟ್ಟಾಗಿಡುತ್ತಿದೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮಂಗಳವಾರ ಆರೋಪಿಸಿದ್ದಾರೆ. ಸೇನೆಯ ಉದ್ಯೋಗಾವಕಾಶದ ಮಾಹಿತಿ ನೀಡಿದರೆ, ಅಗ್ನಿಪಥ್ ನೇಮಕಾತಿ ಯೋಜನೆಯ ಕುರಿತು ಮತ್ತಷ್ಟು ಪ್ರಶ್ನೆಗಳು ಉದ್ಭವಿಸಲು ಕಾರಣವಾಗಬಹುದು ಎನ್ನುವ ಭಯ ಸರ್ಕಾರಕ್ಕೆ ಇರಬಹುದು ಎಂದೂ ಹೇಳಿದ್ದಾರೆ. ಸೇನೆಯಲ್ಲಿ ಅಧಿಕಾರಿಗಳು, ಯೋಧರು, ವೈದ್ಯಕೀಯ ಸಿಬ್ಬಂದಿಯ ಕೊರತೆ ಇರುವುದು ಕೇಂದ್ರ ಸರ್ಕಾರದ ಗಮನಕ್ಕೆ ಬಂದಿದೆಯೇ ಎಂದು ರಾಜ್ಯಸಭೆಯಲ್ಲಿ ಪ್ರಶ್ನೆ ಕೇಳಲಾಗಿತ್ತು. ಈ ಪ್ರಶ್ನೆಗೆ ಪೂರಕವಾಗಿ ಖರ್ಗೆ ಅವರು ‘ಎಕ್ಸ್‌’ನಲ್ಲಿ ಈ ರೀತಿ ಪೋಸ್ಟ್‌ ಮಾಡಿದ್ದಾರೆ. ರಕ್ಷಣಾ ಖಾತೆಯ ರಾಜ್ಯ ಸಚಿವ ಸಂಜಯ್ ಸೇಥ್ ರಾಜ್ಯಸಭೆಯಲ್ಲಿ ಕೇಳಲಾದ ಪ್ರಶ್ನೆಗೆ ಲಿಖಿತ ಉತ್ತರ ನೀಡಿ, ‘ಕೇಳಿರುವ ಮಾಹಿತಿಯು ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದ ಸೂಕ್ಷ್ಮ ಕಾರ್ಯತಂತ್ರ ಕುರಿತದ್ದಾಗಿದೆ. ಈ ಮಾಹಿತಿಯನ್ನು ಜನರಿಗೆ ಲಭ್ಯವಾಗುವಂತೆ ಮಾಡಲು ಸಾಧ್ಯವಿಲ್ಲ’ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.