ದೆಹರಿ/ಬಿಕ್ರಮ್/ಘಾಜಿಪುರ: ‘ಇಂಡಿಯಾ’ ಕೂಟವು ಮುಸ್ಲಿಂ ಮತಬ್ಯಾಂಕ್ ಅಡಿಯಾಳಾಗಿದ್ದು, ಅದರ ಮುಂದೆ ‘ಮುಜ್ರಾ’ (ನೃತ್ಯ) ಮಾಡುತ್ತಿದೆ ಎಂದು ಟೀಕಿಸಿದ ಪ್ರಧಾನಿ ನರೇಂದ್ರ ಮೋದಿ ಅವರು, ಅದು (‘ಇಂಡಿಯಾ’ ಕೂಟ) ದಲಿತರು, ಹಿಂದುಳಿದ ವರ್ಗಗಳ ಮೀಸಲಾತಿ ಕಸಿಯಲು ಅವಕಾಶ ನೀಡುವುದಿಲ್ಲ ಎಂದು ಶನಿವಾರ ಶಪಥ ಮಾಡಿದರು.
ಕಾರಾಕಾಟ್ ಮತ್ತು ಪಾಟಲಿಪುತ್ರ ಲೋಕಸಭಾ ಕ್ಷೇತ್ರಗಳಲ್ಲಿ ಚುನಾವಣಾ ರ್‍ಯಾಲಿ ನಡೆಸಿದ ಅವರು, ‘ಬಿಹಾರವು ಸಾಮಾಜಿಕ ನ್ಯಾಯದ ಹೋರಾಟಕ್ಕೆ ಹೊಸ ದಿಕ್ಕು ನೀಡಿದ ನೆಲವಾಗಿದೆ. ಎಸ್‌ಸಿ, ಎಸ್‌ಟಿ, ಒಬಿಸಿ ಸಮುದಾಯಗಳ ಹಕ್ಕುಗಳನ್ನು ಕಸಿದು, ಅವನ್ನು ಮುಸ್ಲಿಮರಿಗೆ ನೀಡುವ ‘ಇಂಡಿಯಾ’ ಕೂಟದ ಪ್ರಯತ್ನಗಳನ್ನು ವಿಫಲಗೊಳಿಸುತ್ತೇನೆ ಎಂದು ನಾನು ಇಲ್ಲಿ ಘೋಷಿಸುತ್ತೇನೆ’ ಎಂದು ಹೇಳಿದರು.
‘ರಾಜ್ಯದ ವಲಸಿಗರ ಬಗ್ಗೆ ಪಂಜಾಬ್, ತೆಲಂಗಾಣದ ಕಾಂಗ್ರೆಸ್ ನಾಯಕರು ಮತ್ತು ತಮಿಳುನಾಡು ಹಾಗೂ ಪಶ್ಚಿಮ ಬಂಗಾಳದ ಡಿಎಂಕೆ, ಟಿಎಂಸಿ ನಾಯಕರು ಅವಹೇಳನಕಾರಿ ಹೇಳಿಕೆಗಳನ್ನು ನೀಡುತ್ತಿದ್ದಾರೆ. ತಮ್ಮ ಲಾಟೀನಿನೊಂದಿಗೆ (ಚುನಾವಣಾ ಚಿಹ್ನೆ) ‘ಮುಜ್ರಾ’ ಮಾಡುತ್ತಿರುವ ಆರ್‌ಜೆಡಿ ಮುಖಂಡರಿಗೆ, ಅದನ್ನು ಪ್ರತಿಭಟಿಸಿ ಒಂದು ಮಾತು ಆಡುವ ಧೈರ್ಯವೂ ಇಲ್ಲ’ ಎಂದು ಟೀಕಿಸಿದರು.
‘ಇಂಡಿಯಾ’ ಕೂಟ ಅಧಿಕಾರಕ್ಕೆ ಬಂದರೆ, ಅವರು ಮಾಡುವ ಮೊದಲು ಕೆಲಸ, ನ್ಯಾಯಾಲಯ ಕೂಡ ಏನೂ ಮಾಡಲು ಆಗದಂತೆ ಮುಸ್ಲಿಮರಿಗೆ ಮೀಸಲಾತಿ ನೀಡಲು ಸಂವಿಧಾನವನ್ನು ಬದಲಾಯಿಸುವುದು. ನನ್ನ ಹೇಳಿಕೆ ಸುಳ್ಳು ಎನ್ನುವುದಾದರೆ, ಹಾಗೆ ಮಾಡುವುದಿಲ್ಲ ಎಂದು ಲಿಖಿತ ರೂಪದಲ್ಲಿ ನೀಡಿ ಎಂದರೂ ಅವರು ನೀಡಿಲ್ಲ. ಏಕೆಂದರೆ, ಅವರಲ್ಲಿ ತಪ್ಪಿತಸ್ಥ ಭಾವನೆ ಇದೆ’ ಎಂದು ಪ್ರತಿಪಾದಿಸಿದರು.
ಯಾದವರು ಸೇರಿದಂತೆ ಆರ್‌ಜೆಡಿಯ ಪಾರಂಪರಿಕ ಬೆಂಬಲಿಗರಾದ ಕೆಲವು ಸಮುದಾಯಗಳ ಹೆಸರನ್ನು ಪ್ರಸ್ತಾಪಿಸಿದ ಮೋದಿ, ‘ಇಂಡಿಯಾ’ ಕೂಟದ ಪ್ರಯತ್ನಗಳು ಫಲಿಸಿದರೆ ನೀವು ಮೀಸಲಾತಿ ಕಳೆದುಕೊಳ್ಳಲಿದ್ದೀರಿ ಎಂದು ಹೇಳಿದರು.
‘ಆದಾಗ್ಯೂ, ವಿರೋಧಿ ಕೂಟವು ಜೂನ್ 4ರಂದು ಸೋಲಲಿದ್ದು, ಆರ್‌ಜೆಡಿ ಮತ್ತು ಕಾಂಗ್ರೆಸ್ ಕಾರ್ಯಕರ್ತರು ಪರಸ್ಪರರ ಬಟ್ಟೆಗಳನ್ನು ಹರಿದುಕೊಳ್ಳಲಿದ್ದಾರೆ. ಕಾಂಗ್ರೆಸ್‌ನ ‘ಶಾಹಿ’ ಪರಿವಾರವು ಸೋಲಿನ ಸಂಪೂರ್ಣ ಹೊಣೆಗಾರಿಕೆಯನ್ನು ಮಲ್ಲಿಕಾರ್ಜುನ ಖರ್ಗೆ ಅವರ ಮೇಲೆ ಹೊರಿಸಿ, ರಜೆಗಾಗಿ ವಿದೇಶಕ್ಕೆ ಹಾರಲಿದೆ’ ಎಂದು ತಿಳಿಸಿದರು.
ಉದ್ಯೋಗಕ್ಕಾಗಿ ಜನರ ಭೂಮಿ ಕಸಿದುಕೊಂಡವರ ವಿರುದ್ಧ ಸೂಕ್ತ ಕ್ರಮ ಜರುಗಿಸಲಾಗುವುದು ಎಂದು ಲಾಲೂ ಪ್ರಸಾದ್ ಹೆಸರು ಪ್ರಸ್ತಾಪಿಸದೇ ನುಡಿದರು.
ನಿರಂತರ ವಿದ್ಯುತ್ ಸಂಪರ್ಕ ಹಾಗೂ ಹೆಚ್ಚು ಪಕ್ಕಾ ಮನೆಗಳೊಂದಿಗೆ ತಮ್ಮ ಮುಂದಿನ ಐದು ವರ್ಷಗಳ ಆಡಳಿತದಲ್ಲಿ ಬಿಹಾರದ ತ್ವರಿತ ಅಭಿವೃದ್ಧಿಗಾಗಿ ಶ್ರಮಿಸುವುದಾಗಿ ಭರವಸೆ ನೀಡಿದ ಅವರು, ಹಿಂದಿನ ಯುಪಿಎ ಸರ್ಕಾರ ಜನರಿಗೆ ಉಚಿತ ಆಹಾರ ಧಾನ್ಯ ಒದಗಿಸುವಲ್ಲಿ ವಿಫಲವಾಗಿದೆ ಎಂದು ಆರೋಪಿಸಿದರು.
ನಂತರ ಉತ್ತರ ಪ್ರದೇಶದ ಘಾಜಿಪುರದಲ್ಲಿ ಚುನಾವಣಾ ಪ್ರಚಾರ ನಡೆಸಿದ ಮೋದಿ, ‘ಕಾಂಗ್ರೆಸ್ ಕೆಲಸಗಳನ್ನು ವಿಳಂಬ ಮಾಡುವುದರಲ್ಲಿ ಮತ್ತು ಹಕ್ಕು ಕಸಿಯುವುದರಲ್ಲಿ ಪ್ರಾವೀಣ್ಯತೆ ಗಳಿಸಿದೆ. ನಮ್ಮ ಸೈನಿಕರು ಒಂದು ಶ್ರೇಣಿ, ಒಂದು ಪಿಂಚಣಿ ಪಡೆಯಲು ಕೂಡ ಅವರು ಬಿಡಲಿಲ್ಲ. ಮೋದಿ ಬಂದ ನಂತರ ಅದು ಜಾರಿಯಾಯಿತು’ ಎಂದು ಹೇಳಿದರು.
‘ಎಂ’ ಅಕ್ಷರದಿಂದ ಆರಂಭವಾಗುವ ಪದಗಳ ಬಗ್ಗೆ ಪ್ರಧಾನಿ ಅವರಿಗೆ ಏಕೆ ಆಕರ್ಷಣೆ? ಮುಸಲ್ಮಾನ್, ಮಚ್ಲಿ, ಮಂಗಳಸೂತ್ರ, ಮಟನ್.. ಈಗ ಮುಜ್ರಾ. ಭಾರತದ ಪ್ರಧಾನಿ ಈ ರೀತಿ ಮಾತನಾಡುವುದು ಉಚಿತವೇ?ಕ್ಲೈಡ್ ಕ್ರಾಸ್ಟೊ, ಎನ್‌ಸಿಪಿ (ಎಸ್‌ಪಿ) ಮುಖಂಡ
ನಮಗೆ ಹಿಂದೆ ಪ್ರಧಾನಿ ಜತೆಗೆ ಭಿನ್ನಾಭಿಪ್ರಾಯಗಳಿದ್ದವು. ಈಗ ಅವರಿಗೆ ವೈದ್ಯಕೀಯ ನೆರವಿನ ಅಗತ್ಯವಿದೆಯೇನೋ ಎಂದು ಆತಂಕವಾಗುತ್ತಿದೆ. ಅವರು ಇತ್ತೀಚೆಗೆ ತಮ್ಮನ್ನು ತಾವು ‘ದೈವಿಕ ಸಾಧನ’ ಎಂದು ಕರೆದುಕೊಂಡಿದ್ದರು. ಅದು ಭವ್ಯತೆಯ ಭ್ರಮೆಯನ್ನು ಸೂಚಿಸುತ್ತಿದೆಮನೋಜ್ ಕುಮಾರ್ ಝಾ, ಆರ್‌ಜೆಡಿ ಮುಖಂಡ
ಬಿಹಾರದಲ್ಲಿ ಪ್ರಧಾನಿ ಆಡಿದ ಮಾತುಗಳನ್ನು ನೀವು ಕೇಳಿದ್ದೀರಾ.. ಅವರು ಎಂತಹ ಪದಗಳನ್ನು ಬಳಸಿದ್ದಾರೆ ಎಂದರೆ, ದೇಶದ ಚರಿತ್ರೆಯಲ್ಲಿ ಯಾವ ಪ್ರಧಾನಿಯೂ ಅಂತಹ ಮಾತುಗಳನ್ನು ಆಡಿರಲಾರರುಪ್ರಿಯಾಂಕಾ ಗಾಂಧಿ ವಾದ್ರಾ, ಕಾಂಗ್ರೆಸ್ ನಾಯಕಿ
ಇಂದು ಪ್ರಧಾನಿಯ ಬಾಯಿಯಿಂದ ‘ಮುಜ್ರಾ’ ಎನ್ನುವ ಪದವನ್ನು ಕೇಳಿದೆ. ಮೋದಿಜೀ ಇದು ಏನು? ಪ್ರಾಯಶಃ ಬಿಸಿಲಿನಲ್ಲಿ ಚುನಾವಣಾ ಪ್ರಚಾರ ಮಾಡಿದ್ದು ನಿಮ್ಮ ಬುದ್ಧಿಯ ಮೇಲೆ ವಿಪರೀತ ಪರಿಣಾಮ ಬೀರಿರಬಹುದುಪವನ್ ಖೇರಾ, ಕಾಂಗ್ರೆಸ್ ಮುಖಂಡ
ಚುನಾವಣೆಯು ಮುಗಿಯುವ ಮುನ್ನವೇ ‘ಇಂಡಿಯಾ’ ಕೂಟವು ಮತಗಟ್ಟೆ ಸಮೀಕ್ಷೆಗಳನ್ನು ಮಾಡಿಸುತ್ತಿದೆ. ಶೀಘ್ರದಲ್ಲೇ ಅವರು ಇವಿಎಂಗಳ ವಿರುದ್ಧ ಕಿರುಚುತ್ತಾ ವಾಪಸ್ ಹೋಗಲಿದ್ದಾರೆ.ನರೇಂದ್ರ ಮೋದಿ ಪ್ರಧಾನಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.