ADVERTISEMENT

ಜಾರ್ಖಂಡ್ ಚುನಾವಣೆ: ‘ಇಂಡಿಯಾ’ದಿಂದ 7 ‘ಗ್ಯಾರಂಟಿ’ಗಳ ಪ್ರಣಾಳಿಕೆ ಬಿಡುಗಡೆ

10 ಲಕ್ಷ ನೌಕರಿ ಸೃಷ್ಟಿ, ₹15 ಲಕ್ಷದ ಆರೋಗ್ಯ ವಿಮೆ

​ಪ್ರಜಾವಾಣಿ ವಾರ್ತೆ
Published 6 ನವೆಂಬರ್ 2024, 1:01 IST
Last Updated 6 ನವೆಂಬರ್ 2024, 1:01 IST
ಜಾರ್ಖಂಡ್ ವಿಧಾನಸಭೆ ಚುನಾವಣೆಯಲ್ಲಿ ಮಂಗಳವಾರ ನಡೆದ ‘ಇಂಡಿಯಾ’ ಮೈತ್ರಿಕೂಟದ ಸಭೆಯಲ್ಲಿ ಮಲ್ಲಿಕಾರ್ಜುನ ಖರ್ಗೆ, ಹೇಮಂತ್ ಸೊರೇನ್ ಇತರರು ಭಾಗವಹಿಸಿದ್ದರು –ಪಿಟಿಐ ಚಿತ್ರ
ಜಾರ್ಖಂಡ್ ವಿಧಾನಸಭೆ ಚುನಾವಣೆಯಲ್ಲಿ ಮಂಗಳವಾರ ನಡೆದ ‘ಇಂಡಿಯಾ’ ಮೈತ್ರಿಕೂಟದ ಸಭೆಯಲ್ಲಿ ಮಲ್ಲಿಕಾರ್ಜುನ ಖರ್ಗೆ, ಹೇಮಂತ್ ಸೊರೇನ್ ಇತರರು ಭಾಗವಹಿಸಿದ್ದರು –ಪಿಟಿಐ ಚಿತ್ರ   

ರಾಂಚಿ: ಯುವಜನರಿಗಾಗಿ 10 ಲಕ್ಷ ನೌಕರಿ ಸೃಷ್ಟಿಸುವ ಹಾಗೂ ಬಡಜನರಿಗೆ ₹ 15 ಲಕ್ಷದವರೆಗೂ ಆರೋಗ್ಯ ವಿಮಾ ಭದ್ರತೆ ಒದಗಿಸುವುದು ಸೇರಿದಂತೆ  ಗ್ಯಾರಂಟಿಗಳಿರುವ ಪ್ರಣಾಳಿಕೆಯನ್ನು ‘ಇಂಡಿಯಾ’ ಮೈತ್ರಿಕೂಟ ಮಂಗಳವಾರ ಇಲ್ಲಿ ಬಿಡುಗಡೆ ಮಾಡಿತು.

ಮೀಸಲು ಪ್ರಮಾಣವನ್ನು ಪರಿಶಿಷ್ಟ ಪಂಗಡದವರಿಗೆ ಶೇ 28ಕ್ಕೆ, ಪ‍ರಿಶಿಷ್ಟ ಜಾತಿಯವರಿಗೆ ಶೇ 12ಕ್ಕೆ ಹಾಗೂ ಇತರೆ ಹಿಂದುಳಿದ ವರ್ಗದವರಿಗೆ ಶೇ 27ಕ್ಕೆ ಏರಿಸುವ ಭರವಸೆಯನ್ನು ‘ಇಂಡಿಯಾ’ ನೀಡಿದೆ. ಪ್ರಸ್ತುತ ಮೀಸಲಾತಿ ಪ್ರಮಾಣ ಕ್ರಮವಾಗಿ ಶೇ 26, ಶೇ 10 ಮತ್ತು ಶೇ 14ರಷ್ಟಿದೆ. 

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಜಾರ್ಖಂಡ್‌ ಮುಖ್ಯಮಂತ್ರಿ ಹೇಮಂತ್ ಸೊರೇನ್ ಮತ್ತು ಆರ್‌ಜೆಡಿ ನಾಯಕ ಜೆ.ಪಿ.ಯಾದವ್ ಅವರು ಜಂಟಿಯಾಗಿ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದರು.

ADVERTISEMENT

‘ನಾವು ಎಂದಾದರೂ ಗ್ಯಾರಂಟಿ ಬಗ್ಗೆ ಮಾತನಾಡಿದರೆ, ಪ‍್ರಧಾನಿ ಹಿಂದೆಯೇ ಅದನ್ನು ಟೀಕಿಸುತ್ತಾರೆ. ಚುನಾವಣೆ ಪ್ರಚಾರದ ವೇಳೆ ನನ್ನ ಹೆಸರು ಉಲ್ಲೇಖಿಸಿ ಕಾಂಗ್ರೆಸ್‌ನ ಗ್ಯಾರಂಟಿ ವಿಶ್ವಾಸಾರ್ಹವಲ್ಲ ಎಂದಿದ್ದಾರೆ. ಆದರೆ, ಕಾಂಗ್ರೆಸ್‌ ಪಕ್ಷ ಎಲ್ಲ ಗ್ಯಾರಂಟಿಗಳನ್ನು ಈಡೇರಿಸಲಿದೆ‘ ಎಂದು ಖರ್ಗೆ ಹೇಳಿದರು.

ಉಳಿದಂತೆ, ಬಡಜನರಿಗೆ ಈಗ ನೀಡುತ್ತಿರುವ ಮಾಸಿಕ ಪಡಿತರವನ್ನು ಈಗಿನ 5 ಕೆ.ಜಿಯಿಂದ 7 ಕೆ.ಜಿಗೆ ಏರಿಸುವುದು, ಅಡುಗೆ ಅನಿಲ ಸಿಲಿಂಡರ್‌ ಅನ್ನು ₹ 450ಕ್ಕೆ ಒದಗಿಸುವುದಾಗಿಯೂ ಭರವಸೆ ನೀಡಿದೆ.

ಚುನಾವಣೆ ಬಳಿಕ ಅಸ್ತಿತ್ವಕ್ಕೆ ಬರುವ ಸರ್ಕಾರ ಈ ಗ್ಯಾರಂಟಿಗಳ ಜಾರಿಗೆ ಒತ್ತು ನೀಡಲಿದೆ ಎಂದು ಮುಖ್ಯಮಂತ್ರಿ ಹೇಮಂತ್ ಸೊರೇನ್‌ ಹೇಳಿದರು.

81 ಸದಸ್ಯ ಬಲದ ವಿಧಾನಸಭೆಗೆ ನವೆಂಬರ್ 13ರಂದು ಚುನಾವಣೆ ನಡೆಯಲಿದ್ದು, ಮತಗಳ ಎಣಿಕೆಯು ನ. 23ರಂದು ನಡೆಯಲಿದೆ.

ಪ್ರಮುಖರ ಪ‍್ರಚಾರಕ್ಕೆ ಸಮಾನ ಅವಕಾಶ
ಜೆಎಂಎಂ ಆಗ್ರಹ ರಾಷ್ಟ್ರಪತಿಗೆ ಪತ್ರ ರಾಂಚಿ (ಪಿಟಿಐ): ಜಾರ್ಖಂಡ್ ವಿಧಾನಸಭೆ ಚುನಾವಣೆಯಲ್ಲಿ ಪಕ್ಷಗಳ ತಾರಾ ಪ್ರಚಾರಕರಿಗೆ ಸಮಾನ ಅವಕಾಶ ಕಲ್ಪಿಸಬೇಕು ಎಂದು ಜಾರ್ಖಂಡ್ ಮುಕ್ತಿ ಮೋರ್ಚಾ (ಜೆಎಂಎಂ) ಒತ್ತಾಯಿಸಿದ್ದು ಈ ವಿಷಯದಲ್ಲಿ ಮಧ್ಯಪ್ರವೇಶಿಸಬೇಕು ಎಂದು ರಾಷ್ಟ್ರ‍ಪತಿ ದ್ರೌಪದಿ ಮುರ್ಮು ಅವರಿಗೆ ಆಗ್ರಹಪಡಿಸಿದೆ. ನವೆಂಬರ್ 4ರಂದು ಪ್ರಧಾನಿ ನರೇಂದ್ರ ಮೋದಿ ಅವರ ರಾಜ್ಯಪ್ರವಾಸದ ಸಂದರ್ಭದಲ್ಲಿ ಮುಖ್ಯಮಂತ್ರಿ ಪ್ರಯಾಣಿಸಬೇಕಿದ್ದ ಹೆಲಿಕಾಪ್ಟರ್ ಅನ್ನು ಒಂದು ಗಂಟೆ ತಡೆಯಲಾಗಿತ್ತು ಎಂದು ಆರೋಪಿಸಿದೆ. ಪಕ್ಷದ ತಾರಾ ಪ್ರಚಾರಕ ಹೇಮಂತ್ ಸೊರೇನ್ ಅವರು ಸಿಮಡೆಗಾದಲ್ಲಿ ಪ್ರಚಾರ ನಡೆಸಬೇಕಿತ್ತು. ಚಾಯಿಬಸದಲ್ಲಿ ಪ್ರಧಾನಿ ಪ್ರಚಾರ ನಡೆಸುವವರಿದ್ದರು. ಉಭಯ ಸ್ಥಳಗಳ ಅಂತರ 80 ಕಿ.ಮೀ ಆಗಿತ್ತು. ಸೊರೇನ್ ಅವರ ಭೇಟಿಗೆ ಚುನಾವಣಾ ಆಯೋಗವೂ ಅನುಮತಿ ನೀಡಿತ್ತು. ಆದರೆ ಶಿಷ್ಟಾಚಾರದ ನೆಪವೊಡ್ಡಿದ ಅಧಿಕಾರಿಗಳು ಸೊರೇನ್‌ ಇದ್ದ ಹೆಲಿಕಾಪ್ಟರ್‌ ಹಾರಾಟಕ್ಕೆ ಅವಕಾಶ ನೀಡಲಿಲ್ಲ ಎಂದು ಪಕ್ಷದ ನಾಯಕ ಸುಪ್ರಿಯೊ ಭಟ್ಟಾಚಾರ್ಯ ರಾಷ್ಟ್ರಪತಿಗೆ ಬರೆದ ಪತ್ರದಲ್ಲಿ ವಿವರಿಸಿದ್ದಾರೆ.
ಜೆಎಂಎಂ ಮೈತ್ರಿ ಜೋಡಿಸಿದ ಪಟಾಕಿ ಬಿಜೆಪಿ ಶಕ್ತಿಯುತ ರಾಕೆಟ್‌ –ರಕ್ಷಣಾ ಸಚಿವ
ರಾಂಚಿ: ಜೆಎಂಎಂ ನೇತೃತ್ವದ ಮೈತ್ರಿ‍ ಜೋಡಿಸಿದ ಪಟಾಕಿಗಳಾಗಿದೆ. ಬಿಜೆಪಿ ಶಕ್ತಿಯತ ರಾಕೆಟ್ ಆಗಿದ್ದು ಜಾರ್ಖಂಡ್ ಅನ್ನು ಹೊಸ ಎತ್ತರಕ್ಕೆ ಒಯ್ಯಲಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ. ಹಟಿಯಾದಲ್ಲಿ ಪಕ್ಷದ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು ಹೇಮಂತ್ ಸೊರೇನ್‌ ಹೆಸರು ಅನುಮೋದಿಸಿದ್ದ ಮಂಡಲ್ ಮುರ್ಮು ಅವರೇ ಮುಳುಗುತ್ತಿರುವ ಹಡಗು ‘ಜೆಎಂಎಂ’ ಬಿಟ್ಟು ಬಿಜೆಪಿ ಸೇರಿದ ಬಳಿಕ ರಾಜ್ಯದಲ್ಲಿ ಯಾವ ಪಕ್ಷ ಸರ್ಕಾರ ರಚಿಸಲಿದೆ ಎಂಬುದು ಸ್ಪಷ್ಟವಾಗಿದೆ ಎಂದರು. ಜೆಎಂಎಂ ನೇತೃತ್ವದ ಸರ್ಕಾರ ರಾಜ್ಯದಲ್ಲಿ ಬುಡಕಟ್ಟು ಸಮುದಾಯದವರ ರಕ್ತ ಹೀರುತ್ತಿದ್ದು ಅವರ ಹಿತಾಸಕ್ತಿಗೆ ವಿರುದ್ಧವಾಗಿ ಕಾರ್ಯನಿರ್ವಹಿಸುತ್ತಿದೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.