ADVERTISEMENT

‘ಇಂಡಿಯಾ’ ರ‍್ಯಾಲಿ ವ್ಯಕ್ತಿ ವಿರುದ್ಧ ಅಲ್ಲ: ಕಾಂಗ್ರೆಸ್‌

ರ‍್ಯಾಲಿಯಲ್ಲಿ 28 ಪಕ್ಷಗಳು ಭಾಗಿ: ಜೈರಾಮ್‌ ರಮೇಶ್‌

ಪಿಟಿಐ
Published 30 ಮಾರ್ಚ್ 2024, 14:26 IST
Last Updated 30 ಮಾರ್ಚ್ 2024, 14:26 IST
ಜೈರಾಮ್ ರಮೇಶ್‌
ಜೈರಾಮ್ ರಮೇಶ್‌   

ನವದೆಹಲಿ: ವಿರೋಧ ಪಕ್ಷಗಳ ಒಕ್ಕೂಟ ‘ಇಂಡಿಯಾ’ ಆಯೋಜಿಸಿರುವ ‘ಲೋಕತಂತ್ರ ಬಚಾವೊ ರ‍್ಯಾಲಿ’ಯು ಒಬ್ಬ ವ್ಯಕ್ತಿ ವಿರುದ್ಧ ಪ್ರತಿಭಟಿಸುವ ಉದ್ದೇಶವನ್ನು ಹೊಂದಿಲ್ಲ. ಬದಲಾಗಿ ಸಂವಿಧಾನ ಮತ್ತು ಪ್ರಜಾಪ್ರಭುತ್ವವನ್ನು ಉಳಿಸುವ ಮಹತ್ವದ ಗುರಿಯನ್ನು ಹೊಂದಿದೆ ಎಂದು ಕಾಂಗ್ರೆಸ್‌ ಶನಿವಾರ ತಿಳಿಸಿದೆ.

ಭಾನುವಾರ ದೆಹಲಿಯ ರಾಮಲೀಲಾ ಮೈದಾನದಲ್ಲಿ ಆಯೋಜಿಸಿರುವ ರ‍್ಯಾಲಿಯು ‘ಬಿಜೆಪಿ ನೇತೃತ್ವದ ಸರ್ಕಾರದ ಕಾಲ ಮುಗಿಯಿತು’ ಎಂಬ ಸಂದೇಶವನ್ನು ಲೋಕ ಕಲ್ಯಾಣ ಮಾರ್ಗಕ್ಕೆ (ಪ್ರಧಾನಿ ನಿವಾಸ ಇರುವ ಸ್ಥಳ) ರವಾನಿಸಲಿದೆ ಎಂದೂ ಹೇಳಿದೆ.

ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್‌, ‘ರ‍್ಯಾಲಿಯನ್ನು ಉದ್ದೇಶಿಸಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಪಕ್ಷದ ನಾಯಕ ರಾಹುಲ್‌ ಗಾಂಧಿ ಮಾತನಾಡಲಿದ್ದಾರೆ’ ಎಂದು ತಿಳಿಸಿದರು.

ADVERTISEMENT

‘ಇದು ನಿರ್ದಿಷ್ಟ ವ್ಯಕ್ತಿ ವಿರುದ್ಧದ ರ‍್ಯಾಲಿ ಅಲ್ಲ. ಹಾಗಾಗಿಯೇ ‘ಲೋಕತಂತ್ರ ಬಚಾವೊ ರ‍್ಯಾಲಿ’ ಎಂದು ಹೆಸರಿಡಲಾಗಿದೆ. ಇದು ಒಂದು ಪಕ್ಷದ ರ‍್ಯಾಲಿ ಸಹ ಅಲ್ಲ. 27–28 ಪಕ್ಷಗಳು ಪಾಲ್ಗೊಳ್ಳಲಿವೆ’ ಎಂದು ಹೇಳಿದರು.

ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಅವರ ಬಂಧನವನ್ನು ಖಂಡಿಸಿ ರ‍್ಯಾಲಿ ಆಯೋಜಿಸಲಾಗಿದೆ ಎಂದು ಆಮ್‌ ಆದ್ಮಿ ಪಕ್ಷದ ಮುಖಂಡರು ಹೇಳಿಕೆ ನೀಡುತ್ತಿರುವ ಹೊತ್ತಲ್ಲೇ ಈ ಸ್ಪಷ್ಟನೆ ನೀಡಿದರು.

‘ಇಂಡಿಯಾ ಒಕ್ಕೂಟವು ಮಾ.17ರಂದು ಮುಂಬೈನಲ್ಲಿ ಲೋಕಸಭಾ ಚುನಾವಣೆಯ ಮೊದಲ ರಣಕಹಳೆ ಊದಿದೆ. ಇದು ಎರಡನೇ ರಣಕಹಳೆಯಾಗಲಿದೆ. ರ‍್ಯಾಲಿಯು ಒಕ್ಕೂಟದ ನಡುವಿನ ಒಗ್ಗಟ್ಟು ಮತ್ತು ಏಕತೆಯ ಸಂದೇಶವನ್ನೂ ರವಾನಿಸಲಿದೆ’ ಎಂದು ಹೇಳಿದರು.

‘ರ‍್ಯಾಲಿಯ ಪ್ರಮುಖ ಉದ್ದೇಶ ಸಂವಿಧಾನದ ರಕ್ಷಣೆಯಾಗಿದೆ. ಬಿಜೆಪಿ ನಾಯಕರು ಸಂವಿಧಾನವನ್ನು ಬದಲಾಯಿಸುವ ಮಾತನಾಡುತ್ತಿದ್ದಾರೆ. ಇದು ಅಪಾಯಕಾರಿ’ ಎಂದು ಹೇಳಿದರು.

‘ನಿರುದ್ಯೋಗ, ಬೆಲೆ ಏರಿಕೆ, ಆರ್ಥಿಕ ತಾರತಮ್ಯ, ಸಾಮಾಜಿಕ ಧ್ರುವೀಕರಣ ಮತ್ತು ಕಾರ್ಮಿಕರ ವಿರುದ್ಧದ ಅನ್ಯಾಯದ ಬಗ್ಗೆ ರ‍್ಯಾಲಿಯು ಧ್ವನಿ ಎತ್ತಲಿದೆ. ಜೊತೆಗೆ ಕೇಂದ್ರೀಯ ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವುದರ ವಿರುದ್ಧವೂ ಪ್ರತಿಭಟಿಸಲಾಗುವುದು’ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.