ನವದೆಹಲಿ: ‘ಬಿಜೆಪಿ ತನ್ನ ‘ಶತ ಕೋಟ್ಯಧಿಪತಿ ಗೆಳೆಯರಿಗೆ’ ನೀಡಿದ್ದಕ್ಕಿಂತಲೂ ಹೆಚ್ಚಿನ ಆರ್ಥಿಕ ನೆರವನ್ನು ಕಾಂಗ್ರೆಸ್ ಪಕ್ಷವು ಮಹಿಳೆಯರು, ಯುವಜನರು, ರೈತರು ಮತ್ತು ಬಡಜನರಿಗೆ ನೀಡಲಿದೆ’ ಎಂದು ಕಾಂಗ್ರೆಸ್ ನಾಯಕ ರಾಹುಲ್‌ಗಾಂಧಿ ಹೇಳಿದ್ದಾರೆ.
ಜಾರ್ಖಂಡ್‌ನಲ್ಲಿ ಮಹಿಳೆಯರಿಗೆ ನೀಡಲಿರುವ ಗೌರವಧನವನ್ನು ₹2,500ಕ್ಕೆ ಏರಿಸಲು ‘ಇಂಡಿಯಾ’ ಮೈತ್ರಿಕೂಟ ತೀರ್ಮಾನಿಸಿದೆ ಎಂದು ಹೇಳಿದ್ದಾರೆ.
ರಾಜ್ಯದಲ್ಲಿ ಕಾಂಗ್ರೆಸ್ –ಜಾರ್ಖಂಡ್ ಮುಕ್ತಿ ಮೋರ್ಚಾ ಮೈತ್ರಿ ಹೊಂದಿದ್ದು, ಅಧಿಕಾರ ಉಳಿಸಿಕೊಳ್ಳಲು ಯತ್ನಿಸುತ್ತಿದೆ. 81 ಸದಸ್ಯ ಬಲದ ವಿಧಾನಸಭೆಗೆ ನವೆಂಬರ್ 13, 20ರಂದು ಎರಡು ಹಂತದಲ್ಲಿ ಮತದಾನ ನಡೆಯಲಿದೆ. ನ.23ರಂದು ಮತಎಣಿಕೆ ನಡೆಯಲಿದೆ.
‘ಮೈಯ್ಯಾ ಸಮ್ಮಾನ್’ ಯೋಜನೆಯಡಿ ನೀಡುತ್ತಿರುವ ನೆರವಿನ 4ನೇ ಕಂತಿನ ಮೊತ್ತವು ಸೋಮವಾರ ಫಲಾನುಭವಿಗಳ ಖಾತೆಗೆ ಜಮೆಯಾಗಿದೆ. ಈ ಯೋಜನೆ ಮಹಿಳೆಯರಿಗೆ ಹಣದುಬ್ಬರದ ಪರಿಣಾಮ ಎದುರಿಸಲು ನೆರವಾಗಿದೆ. ಯೋಜನೆಯಡಿ ನೆರವಿನ ಮೊತ್ತವನ್ನು ಇನ್ನಷ್ಟು ಏರಿಸಲು ನಿರ್ಧರಿಸಿದ್ದೇವೆ’ ಎಂದು ‘ಎಕ್ಸ್’ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
ಡಿಸೆಂಬರ್‌ನಿಂದ ಜಾರಿಯಾಗುವಂತೆ ಮಾಸಿಕ ₹ 2,500 ಗೌರವಧನ ಸಿಗಲಿದೆ. ಇದರಿಂದ ಜಾರ್ಖಂಡ್‌ನ 53 ಲಕ್ಷ ಮಹಿಳೆಯರಿಗೆ ನೆರವಾಗಲಿದೆ ಎಂದೂ ತಿಳಿಸಿದ್ದಾರೆ.
‘ನಾನು ಈ ಹಿಂದೆಯೂ ಹೇಳಿದ್ದೇನೆ, ಈಗಲೂ ಹೇಳುತ್ತಿದ್ದೇನೆ. ಬಿಜೆಪಿಯು ತನ್ನ ಶ್ರೀಮಂತ ಗೆಳೆಯರಿಗೆ ನೀಡಿದ್ದಕ್ಕಿಂತಲೂ ಹೆಚ್ಚಿನ ನೆರವನ್ನು ಇಂಡಿಯಾ ಮೈತ್ರಿಕೂಟವು ಮಹಿಳೆಯರು, ಯುವಜನರು, ರೈತರಿಗೆ, ನೀಡಲಿದೆ’ ಎಂದು ಪುನರುಚ್ಚರಿಸಿದರು.
ವಿಮಾನಯಾನಕ್ಕೆ ತಾಂತ್ರಿಕ ಸಮಸ್ಯೆ
ರಾಹುಲ್ ಪ್ರಚಾರ ರ‍್ಯಾಲಿ ರದ್ದು ಬುಲ್‌ಧಾಣ (ಮಹಾರಾಷ್ಟ್ರ) (ಪಿಟಿಐ): ತಾಂತ್ರಿಕ ಸಮಸ್ಯೆಯಿಂದಾಗಿ ವಿಮಾನಯಾನ ರದ್ದಾದ ಕಾರಣ ಜಿಲ್ಲೆಯ ಚಿಕ್ಲಿಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಚುನಾವಣಾ ರ‍್ಯಾಲಿ ನಡೆಯಲಿಲ್ಲ. ಪಕ್ಷದ ಅಭ್ಯರ್ಥಿ ರಾಹುಲ್ ಬೊಂಡ್ರೆ ಪರ ಪ್ರಚಾರ ನಡೆಸಲು ನಿಗದಿಯಂತೆ ರಾಹುಲ್‌ಗಾಂಧಿ ಅವರು ಮಧ್ಯಾಹ್ನ 12.30ಕ್ಕೆ ಬರಬೇಕಿತ್ತು. ಈ ಕುರಿತ ವಿಡಿಯೊ ಹೇಳಿಕೆಯಲ್ಲಿ ಅವರು ರ‍್ಯಾಲಿ ರದ್ದತಿಗೆ ಕಾರಣ ವಿವರಿಸಿದ್ದಾರೆ. ‘ಸೊಯಾಬೀನ್ ಹತ್ತಿ ಬೆಳೆಗಾರರ ಜೊತೆ ಸಂವಾದ ನಡೆಸಬೇಕಿತ್ತು. ಬಿಜೆಪಿ ಸರ್ಕಾರ ಸೂಕ್ತ ದರ ನೀಡುತ್ತಿಲ್ಲ ಎಂಬ ಅರಿವಿದೆ. ‘ಇಂಡಿಯಾ’ ಮೈತ್ರಿಕೂಟ ಅಧಿಕಾರಕ್ಕೆ ಬಂದ ಬಳಿಕ ನಿಮ್ಮ ಸಮಸ್ಯೆಗಳಿಗೆ ಸ್ಪಂದಿಸುತ್ತೇವೆ’ ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.