ADVERTISEMENT

LS Polls | ಫಲಿತಾಂಶ ಹೊರಬಿದ್ದ 48 ಗಂಟೆಗಳೊಳಗೆ ಪ್ರಧಾನಿ ಆಯ್ಕೆ: ಜೈರಾಮ್ ರಮೇಶ್ 

ಪಿಟಿಐ
Published 30 ಮೇ 2024, 13:54 IST
Last Updated 30 ಮೇ 2024, 13:54 IST
ಜೈರಾಮ್‌ ರಮೇಶ್
ಜೈರಾಮ್‌ ರಮೇಶ್   

ನವದೆಹಲಿ: ‘ಇಂಡಿಯಾ’ ಮೈತ್ರಿಕೂಟ ಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ ಬರುವುದು ಖಚಿತ ಎಂಬ ಮಾತನ್ನು ಪುನರುಚ್ಚರಿಸಿರುವ ಕಾಂಗ್ರೆಸ್‌ ನಾಯಕ ಜೈರಾಮ್‌ ರಮೇಶ್, ‘ಫಲಿತಾಂಶ ಹೊರಬಿದ್ದ 48 ಗಂಟೆಗಳ ಒಳಗಾಗಿ ನೂತನ ಪ್ರಧಾನಿಯನ್ನು ಆಯ್ಕೆ ಮಾಡಲಾಗುವುದು’ ಎಂದು ಹೇಳಿದರು.

‘ಜನಾದೇಶವು ಇಂಡಿಯಾ ಮೈತ್ರಿಕೂಟದ ಪರ ಬರಲಿದ್ದು, ಬಹುಮತಕ್ಕೆ ಅಗತ್ಯವಿರುವ 272 ಸ್ಥಾನಗಳ ಗಡಿಯನ್ನು ದಾಟಲಿದ್ದೇವೆ’ ಎಂದು ಪಿಟಿಐಗೆ ನೀಡಿದ ಸಂದರ್ಶನದಲ್ಲಿ ವಿಶ್ವಾಸ ವ್ಯಕ್ತಪಡಿಸಿದರು.

ಎನ್‌ಡಿಎ ಮೈತ್ರಿಕೂಟದ ಕೆಲವು ಪಕ್ಷಗಳು ‘ಇಂಡಿಯಾ’ ಕೂಟವನ್ನು ಸೇರುವ ಸಾಧ್ಯತೆಯಿದೆ. ಅವರನ್ನು ಮೈತ್ರಿಕೂಟಕ್ಕೆ ಸೇರಿಸಬೇಕೇ ಎಂಬುದನ್ನು ಖರ್ಗೆ, ರಾಹುಲ್‌ ಮತ್ತು ಸೋನಿಯಾ ಅವರನ್ನೊಳಗೊಂಡ ಕಾಂಗ್ರೆಸ್‌ ಹೈಕಮಾಂಡ್‌ ನಿರ್ಧರಿಸಲಿದೆ ಎಂದರು.

ADVERTISEMENT

ಎನ್‌ಡಿಎ ಜತೆಗಿರುವ ಜೆಡಿಯು ಮುಖ್ಯಸ್ಥ ನಿತೀಶ್‌ ಕುಮಾರ್‌ ಮತ್ತು ಟಿಡಿಪಿ ಅಧ್ಯಕ್ಷ ಎನ್‌.ಚಂದ್ರಬಾಬು ನಾಯ್ಡು ಅವರಿಗೆ ‘ಇಂಡಿಯಾ’ ಮೈತ್ರಿಕೂಟದ ಬಾಗಿಲು ತೆರೆದಿದೆಯೇ ಎಂಬ ಪ್ರಶ್ನೆಗೆ, ‘ನಿತೀಶ್‌ ಅವರು ‘ಪಲ್ಟಿ ರಾಜಕಾರಣ‘ಕ್ಕೆ ಹೆಸರುವಾಸಿಯಾಗಿದ್ದಾರೆ. ನಾಯ್ಡು ಅವರು 2019 ರಲ್ಲಿ ಕಾಂಗ್ರೆಸ್‌ ಜತೆ ಮೈತ್ರಿ ಮಾಡಿಕೊಂಡಿದ್ದರು. ‘ಇಂಡಿಯಾ’ ಕೂಟಕ್ಕೆ ಜನಾದೇಶ ಸಿಗುತ್ತಿದ್ದಂತೆಯೇ ಎನ್‌ಡಿಎ ಕೂಟದ ಕೆಲವು ಪಕ್ಷಗಳು ನಮ್ಮ ಜತೆ ಸೇರಿಕೊಳ್ಳಬಹುದು’ ಎಂದು ತಿಳಿಸಿದರು.

‘ಕಾಂಗ್ರೆಸ್‌ ಈ ಬಾರಿ ರಾಜಸ್ಥಾನ, ಕರ್ನಾಟಕ, ತೆಲಂಗಾಣ ಮತ್ತು ಮಹಾರಾಷ್ಟ್ರದಲ್ಲಿ ಹೆಚ್ಚಿನ ಸ್ಥಾನಗಳನ್ನು ಗೆಲ್ಲಲಿದೆ. ಛತ್ತೀಸ್‌ಗಢ, ಮಧ್ಯಪ್ರದೇಶ ಮತ್ತು ಅಸ್ಸಾಂನಲ್ಲೂ ನಮ್ಮ ಬಲ ಹೆಚ್ಚಲಿದೆ. 2004ರಲ್ಲಿ ನಾವು ಹೊಂದಿದ್ದ ಸ್ಥಿತಿಯನ್ನೇ ಮತ್ತೆ ತಲುಪಲಿದ್ದೇವೆ’ ಎಂದು ನುಡಿದರು.

‘2004ರ ಲೋಕಸಭಾ ಚುನಾವಣೆಯ ಫಲಿತಾಂಶ ಮೇ 13ರಂದು ಹೊರಬಿದ್ದಿತ್ತು. ಮೇ 16ರಂದು ಯುಪಿಎ ರಚನೆಯಾಗಿತ್ತಲ್ಲದೆ, ಪ್ರಧಾನಿ ಹುದ್ದೆಗೆ ಮನಮೋಹನ್‌ ಸಿಂಗ್ ಅವರ ಹೆಸರನ್ನು ಮೇ 17ರಂದು ಸೂಚಿಸಲಾಗಿತ್ತು. ಅಂದರೆ, ಫಲಿತಾಂಶ ಹೊರಬಿದ್ದ ಕೆಲವೇ ದಿನಗಳ ಒಳಗಾಗಿ ಪ್ರಧಾನಿಯ ಆಯ್ಕೆ ನಡೆದಿತ್ತು. ಈ ಬಾರಿ ನಾವು ಅದಕ್ಕಾಗಿ (ಪ್ರಧಾನಿಯ ಆಯ್ಕೆಗೆ) 48 ಗಂಟೆಗಳನ್ನೂ ತೆಗೆದುಕೊಳ್ಳುವುದಿಲ್ಲ. ಮೈತ್ರಿಕೂಟದ ನಾಯಕನನ್ನು ಕೆಲವೇ ಗಂಟೆಗಳ ಒಳಗಾಗಿ ನಿರ್ಧರಿಸುತ್ತೇವೆ. ಹೆಚ್ಚು ಸ್ಥಾನಗಳನ್ನು ಪಡೆಯುವ ಪಕ್ಷವು ಸ್ವಾಭಾವಿಕವಾಗಿ ಮೈತ್ರಿಕೂಟದ ನಾಯಕತ್ವ ವಹಿಸಿಕೊಳ್ಳಲಿದೆ’ ಎಂದು ಅಭಿಪ್ರಾಯಪಟ್ಟರು.

ಮಲ್ಲಿಕಾರ್ಜುನ ಖರ್ಗೆ, ಶರದ್‌ ಪವಾರ್ ಮತ್ತು ಮಮತಾ ಬ್ಯಾನರ್ಜಿ ಅವರಂತಹ ನಾಯಕರನ್ನು ಒಳಗೊಂಡಿರುವ ಮೈತ್ರಿಕೂಟದಲ್ಲಿ ಪ್ರಧಾನಿ ಆಯ್ಕೆಯಲ್ಲಿ ಒಮ್ಮತ ಮೂಡುವುದು ಸುಲಭವೇ ಎಂದು ಕೇಳಿದಾಗ, ‘ಮೈ ನಹೀ ಹಮ್, ಮೇರಾ ನಹೀ ಹಮಾರಾ’ ಎಂಬುದು ಇಂಡಿಯಾ ಮೈತ್ರಿಕೂಟದ ಘೋಷವಾಕ್ಯ ಎಂದು ಉತ್ತರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.