ನವದೆಹಲಿ: ದೆಹಲಿ ಅಬಕಾರಿ ನೀತಿ ಹಗರಣದಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರ ಬಂಧನ ವಿರೋಧಿಸಿ, ಇಲ್ಲಿನ ರಾಮಲೀಲಾ ಮೈದಾನದಲ್ಲಿ ಭಾನುವಾರ ನಡೆದ ‘ಇಂಡಿಯಾ’ ಮೈತ್ರಿಕೂಟದ ರ್‍ಯಾಲಿಯು ವಿರೋಧ ಪಕ್ಷಗಳ ಒಕ್ಕೂಟದ ಒಗ್ಗಟ್ಟು ಮತ್ತು ಬೃಹತ್ ಶಕ್ತಿ ಪ್ರದರ್ಶನಕ್ಕೆ ವೇದಿಕೆಯಾಯಿತು.
ಪ್ರಮುಖ ವಿರೋಧ ಪಕ್ಷಗಳಾದ ಕಾಂಗ್ರೆಸ್, ಎಎಪಿ, ಶಿವಸೇನಾ (ಉದ್ಧವ್ ಬಣ), ಟಿಎಂಸಿ, ಡಿಎಂಕೆ, ಎಡಪಕ್ಷ ಸೇರಿದಂತೆ ‘ಇಂಡಿಯಾ’ ಕೂಟದ ಬಹುತೇಕ ಪಕ್ಷಗಳ ಮುಖಂಡರು ರ್‍ಯಾಲಿಯಲ್ಲಿ ಪಾಲ್ಗೊಂಡಿದ್ದರು. ಇಡೀ ಮೈದಾನದಲ್ಲಿ ಎಎಪಿ ಸೇರಿದಂತೆ ವಿರೋಧ ಪಕ್ಷಗಳ ಕಾರ್ಯಕರ್ತರು, ಬೆಂಬಲಿಗರು ಕಿಕ್ಕಿರಿದು ಸೇರಿದ್ದರು.
‘ಲೋಕತಂತ್ರ ಉಳಿಸಿ’ ರ್‍ಯಾಲಿಯನ್ನು ಉದ್ದೇಶಿ ಮಾತನಾಡಿದ ಎಲ್ಲ ನಾಯಕರು, ‘ದೇಶದ ಪ್ರಜಾಪ್ರಭುತ್ವಕ್ಕೆ ಸಂಚಕಾರ ಎದುರಾಗಿದೆ’ ಎಂದು ಕಳವಳ ವ್ಯಕ್ತಪಡಿಸಿದರು. ‘ಬಿಜೆಪಿಯು ಕೇಂದ್ರ ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ಪ್ರಜಾಪ್ರಭುತ್ವವನ್ನು ನಾಶಪಡಿಸುತ್ತಿದೆ’ ಎಂದೂ ಆರೋಪಿಸಿದರು.
ಭಾರತದ ಪ್ರಜಾಪ್ರಭುತ್ವವನ್ನು ಉಳಿಸಲು ಮತ್ತು ಗೆಲ್ಲಿಸಲು ‘ಇಂಡಿಯಾ’ ಒಕ್ಕೂಟ ಹೋರಾಟ ಮಾಡುತ್ತದೆ ಎಂಬ ಬದ್ಧತೆಯನ್ನು ಎಲ್ಲ ನಾಯಕರೂ ಈ ವೇಳೆ ವ್ಯಕ್ತಪಡಿಸಿದರು.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ‘ಒಂದು ವೇಳೆ ಈ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಗೆದ್ದು, ಸಂವಿಧಾನವನ್ನು ಬದಲಿಸಿದರೆ ದೇಶವೇ ಹೊತ್ತಿ ಉರಿಯುತ್ತದೆ. ಈ ಬಾರಿಯ ಚುನಾವಣೆ ಸಾಮಾನ್ಯವಾದುದಲ್ಲ, ದೇಶದ ಪ್ರಜಾಪ್ರಭುತ್ವ ಮತ್ತು ಸಂವಿಧಾನವನ್ನು ಉಳಿಸುವ ಚುನಾವಣೆಯಾಗಿದೆ’ ಎಂದರು.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ‘ನಿಮಗೆ ಪ್ರಜಾಪ್ರಭುತ್ವ ಬೇಕೊ ಅಥವಾ ಸರ್ವಾಧಿಕಾರ ಬೇಕೊ ಎಂಬುದನ್ನು ನಿರ್ಧರಿಸಿ. ಸರ್ವಾಧಿಕಾರವನ್ನು ಬೆಂಬಲಿಸುವವರನ್ನು ದೇಶದಿಂದ ಹೊರಹಾಕಬೇಕಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಿಪಿಎಂನ ಸೀತಾರಾಂ ಯೆಚೂರಿ, ‘ಇಂದು ಇಲ್ಲಿ ಭಾರತದ ರಾಜಕೀಯದ ಹೊಸ ಶಕ್ತಿ ಉದಯಿಸಿದೆ. ಸ್ವಾತಂತ್ರ್ಯದ ಘೋಷಣೆ ಮೊಳಗುತ್ತಿದೆ. ನಮ್ಮ ಸ್ವಾತಂತ್ರ್ಯವೇ ನಮ್ಮ ಸಂವಿಧಾನ ಮತ್ತು ಗಣರಾಜ್ಯವನ್ನು ರಕ್ಷಿಸಲಿದ್ದು, ಅದನ್ನು ನಾವು ಪಡೆಯುತ್ತೇವೆ’ ಎಂದರು.
ಟಿಎಂಸಿ ಸಂಸದ ಡೆರೆಕ್ ಒಬ್ರಾಯನ್, ‘ಇದು ಬಿಜೆಪಿ ವಿರುದ್ಧ ಪ್ರಜಾಪ್ರಭುತ್ವದ ಹೋರಾಟವಾಗಿದೆ’ ಎಂದು ಸಾರಿದರು. ಟಿಎಂಸಿಯು ‘ಇಂಡಿಯಾ’ ಒಕ್ಕೂಟದ ಭಾಗವಾಗಿದ್ದು, ಮುಂದುವರಿಯುತ್ತದೆ’ ಎಂದು ಹೇಳಿದರು.
ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಅವರು, ‘ಬಿಜೆಪಿಯು ಈ ಬಾರಿ 400ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲುವುದಾಗಿ ಹೇಳುತ್ತಿದೆ. ಹಾಗಾದರೆ ನಿಮಗೆ ಎಎಪಿ ನಾಯಕನ ಕಂಡರೆ ಹೆದರಿಕೆ ಏಕೆ’ ಎಂದು ಪ್ರಶ್ನಿಸಿದರು.
‘ನೀವು ಚುನಾಯಿತ ಮುಖ್ಯಮಂತ್ರಿಗಳನ್ನು ಜೈಲಿಗೆ ಕಳುಹಿಸಿದ್ದೀರಿ. ಭಾರತೀಯರಷ್ಟೇ ಅಲ್ಲ, ಇಡೀ ವಿಶ್ವವೇ ಇದನ್ನು ಟೀಕಿಸುತ್ತಿದೆ’ ಎಂದು ಹೇಳುವ ಮೂಲಕ ಅವರು ವಿಶ್ವಸಂಸ್ಥೆ, ಅಮೆರಿಕ ಮತ್ತು ಜರ್ಮನಿಯ ಪ್ರತಿಕ್ರಿಯೆಗಳನ್ನು ಪರೋಕ್ಷವಾಗಿ ಉಲ್ಲೇಖಿಸಿದರು.
ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ, ಜಾರ್ಖಂಡ್‌ನ ಮಾಜಿ ಮುಖ್ಯಮಂತ್ರಿ ಹೇಮಂತ್ ಸೊರೇನ್ ಅವರ ಪತ್ನಿ ಕಲ್ಪನಾ ಸೊರೇನ್, ಪಂಜಾಬಿನ ಮುಖ್ಯಮಂತ್ರಿ ಭಗವಂತ ಮಾನ್, ಎನ್‌ಸಿ ಮುಖ್ಯಸ್ಥ ಫಾರೂಕ್ ಅಬ್ದುಲ್ಲಾ, ಪಿಡಿಪಿ ಅಧ್ಯಕ್ಷೆ ಮೆಹಬೂಬಾ ಮುಫ್ತಿ ಭಾಗವಹಿಸಿದ್ದರು.
Quote - ಲೋಕಸಭಾ ಚುನಾವಣೆಯ ಅಂಪೈರ್‌ಗಳನ್ನು ಆಯ್ಕೆ ಮಾಡಿದವರು ಯಾರು? ಪಂದ್ಯ ಆರಂಭಕ್ಕೂ ಮುನ್ನವೇ ಎದುರಾಳಿ ತಂಡದ ಇಬ್ಬರು ಆಟಗಾರರನ್ನು ಬಂಧಿಸಲಾಗಿದೆ. ಈ ರೀತಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಚುನಾವಣೆಯಲ್ಲಿ ಮ್ಯಾಚ್‌ಫಿಕ್ಸಿಂಗ್ ಮಾಡಲು ಯತ್ನಿಸಿದ್ದಾರೆ ರಾಹುಲ್ ಗಾಂಧಿ ಕಾಂಗ್ರೆಸ್ ನಾಯಕ
ಆರ್‌ಎಸ್‌ಎಸ್– ಬಿಜೆಪಿಯು ವಿಷಕಾರಿಯಾಗಿದ್ದು ದೇಶವನ್ನು ನಾಶಮಾಡುತ್ತಿವೆ. ಎಲ್ಲ ವಿರೋಧ ಪಕ್ಷಗಳು ಒಟ್ಟಾಗಿ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಬೇಕಿದೆಮಲ್ಲಿಕಾರ್ಜುನ ಖರ್ಗೆ ಎಐಸಿಸಿ ಅಧ್ಯಕ್ಷ
ನವದೆಹಲಿ (ಪಿಟಿಐ): ದಬ್ಬಾಳಿಕೆಯು ಕೆಲಸಕ್ಕೆ ಬರುವುದಿಲ್ಲ. ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರನ್ನು ಜೈಲಿನಲ್ಲಿ ಹೆಚ್ಚು ದಿನ ಇರಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಅವರ ಪತ್ನಿ ಸುನೀತಾ ಕೇಜ್ರಿವಾಲ್ ಅವರು ದೆಹಲಿಯ ರಾಮಲೀಲಾ ಮೈದಾನದಲ್ಲಿ ‘ಇಂಡಿಯಾ’ ಮೈತ್ರಿಕೂಟ ಆಯೋಜಿಸಿದ್ದ ‘ಲೋಕತಂತ್ರ ಉಳಿಸಿ’ ರ್‍ಯಾಲಿಯಲ್ಲಿ ಹೇಳಿದರು.
ಜೈಲಿನಲ್ಲಿ ಇರುವ ತಮ್ಮ ಪತಿ ಕಳುಹಿಸಿದ್ದ ಸಂದೇಶವನ್ನು ಅವರು ಓದಿಹೇಳಿದರು. ಕೇಜ್ರಿವಾಲ್ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕೇ ಎಂದೂ ಸುನೀತಾ ಅವರು ಅಲ್ಲಿ ಸೇರಿದ್ದವರನ್ನು ಕೇಳಿದರು. ‘ಕೇಜ್ರಿವಾಲ್ ರಾಜೀನಾಮೆ ನೀಡಬೇಕು ಎಂದು ಬಿಜೆಪಿ ಆಗ್ರಹಿಸುತ್ತಿದೆ. ಅವರು ರಾಜೀನಾಮ ನೀಡಬೇಕೇ? ಅವರ ಬಂಧನಕ್ಕೆ ಸಮರ್ಥನೆ ಇದೆಯೇ? ಅವರು ಸಿಂಹ. ಅವರನ್ನು ಜೈಲಿನಲ್ಲಿ ಬಹುಕಾಲ ಇರಿಸಿಕೊಳ್ಳಲು ಆಗುವುದಿಲ್ಲ’ ಎಂದು ಸುನೀತಾ ಹೇಳಿದರು. ತಮ್ಮ ಪತಿಯನ್ನು ಆಶೀರ್ವದಿಸಿದ್ದಕ್ಕಾಗಿ ಸುನೀತಾ ಜನರಿಗೆ ಧನ್ಯವಾದ ಅರ್ಪಿಸಿದರು.
ಕೇಜ್ರಿವಾಲ್ ಅವರನ್ನು ಜಾರಿ ನಿರ್ದೇಶನಾಲಯದ (ಇ.ಡಿ) ಅಧಿಕಾರಿಗಳು ದೆಹಲಿ ಅಬಕಾರಿ ನೀತಿಗೆ ಸಂಬಂಧಿಸಿದ ಹಣದ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಬಂಧಿಸಿದ್ದಾರೆ. ‘ಇಂಡಿಯಾ’ ಒಕ್ಕೂಟದ ಪರವಾಗಿ ಕೇಜ್ರಿವಾಲ್ ಅವರು ಆರು ಗ್ಯಾರಂಟಿಗಳನ್ನು ತಮ್ಮ ಸಂದೇಶದಲ್ಲಿ ಉಲ್ಲೇಖಿಸಿದ್ದಾರೆ. ನಿರಂತರ ವಿದ್ಯುತ್ ಪೂರೈಕೆ ಬಡವರಿಗೆ ಉಚಿತವಾಗಿ ವಿದ್ಯುತ್ ಪೂರೈಕೆ ಸರ್ಕಾರಿ ಶಾಲೆಗಳು ರೈತರಿಗೆ ಕನಿಷ್ಠ ಬೆಂಬಲ ಬೆಲೆ ಮತ್ತು ದೆಹಲಿಗೆ ಪೂರ್ಣಪ್ರಮಾಣದ ರಾಜ್ಯದ ಸ್ಥಾನಮಾನ ಅವರ ಗ್ಯಾರಂಟಿಗಳಲ್ಲಿ ಸೇರಿವೆ. ‘ದೆಹಲಿಯ ಜನರು ಕಳೆದ 75 ವರ್ಷಗಳಿಂದ ಅನ್ಯಾಯ ಎದುರಿಸಿದ್ದಾರೆ. ಅವರ ಸರ್ಕಾರದ ಕೈಕಾಲು ಕಟ್ಟಿಹಾಕಲಾಗಿತ್ತು. ಇಂಡಿಯಾ ಮೈತ್ರಿಕೂಟವು ಅಧಿಕಾರಕ್ಕೆ ಬಂದಲ್ಲಿ ದೆಹಲಿಗೆ ಪೂರ್ಣಪ್ರಮಾಣದ ರಾಜ್ಯದ ಸ್ಥಾನಮಾನ ನೀಡಲಾಗುತ್ತದೆ. ಇಂಡಿಯಾ ಮೈತ್ರಿಕೂಟಕ್ಕೆ ನೀವು ಒಂದು ಅವಕಾಶ ನೀಡಿದಲ್ಲಿ ನಾವು ಮಹಾನ್ ರಾಷ್ಟ್ರದ ನಿರ್ಮಾಣ ಮಾಡುತ್ತೇವೆ’ ಎಂದು ಸುನೀತಾ ಅವರು ಕೇಜ್ರಿವಾಲ್ ಅವರ ಸಂದೇಶ ಓದುವಾಗ ಹೇಳಿದರು.
ಸುನೀತಾ ಅವರು ರಾಜಕೀಯ ರ್‍ಯಾಲಿಯೊಂದರಲ್ಲಿ ಭಾಷಣ ಮಾಡಿದ್ದು ಇದೇ ಮೊದಲು. ‘ತಾಯಿ ಭಾರತಿಗೆ ನೋವಾಗಿದೆ. ಜನರಿಗೆ ನಿರಂತರ ವಿದ್ಯುತ್ ಸಿಗದೆ ಇದ್ದಾಗ ಅಥವಾ ಚಿಕಿತ್ಸೆ ಸಿಗದೆ ಯಾರಾದರೂ ಮೃತಪಟ್ಟಾಗ ಆಕೆಗೆ ನೋವಾಗುತ್ತದೆ’ ಎಂದು ಸುನೀತಾ ಹೇಳಿದರು.
ರಾಮ–ರಾವಣನ ಕಥೆ ನೆನಪಿಸಿದ ಪ್ರಿಯಾಂಕಾ
ನವದೆಹಲಿ (ಪಿಟಿಐ): ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧೆಯು ಸಮಾನ ನೆಲೆಯಲ್ಲಿ ನಡೆಯುವುದನ್ನು ಖಾತರಿಪಡಿಸಬೇಕು ಎಂದು ಚುನಾವಣಾ ಆಯೋಗವನ್ನು ‘ಇಂಡಿಯಾ’ ಮೈತ್ರಿಕೂಟ ಒತ್ತಾಯಿಸಿದೆ.
ಅಲ್ಲದೆ ಬಿಜೆಪಿಯು ಪ್ರಜಾತಂತ್ರಕ್ಕೆ ವಿರುದ್ಧವಾದ ರೀತಿಯಲ್ಲಿ ಅಡ್ಡಿಗಳನ್ನು ಸೃಷ್ಟಿಸುವ ಕೆಲಸ ಮಾಡುತ್ತಿದ್ದರೂ ಒಕ್ಕೂಟವು ಹೋರಾಡಿ ಜಯಗಳಿಸಿ ದೇಶದ ಪ್ರಜಾತಂತ್ರವನ್ನು ಉಳಿಸಲಿದೆ ಎಂದು ಹೇಳಿದೆ. ಇಲ್ಲಿನ ರಾಮಲೀಲಾ ಮೈದಾನದಲ್ಲಿ ಭಾನುವಾರ ನಡೆದ ‘ಲೋಕತಂತ್ರ ಉಳಿಸಿ’ ರ್‍ಯಾಲಿಯಲ್ಲಿ ಮೈತ್ರಿಕೂಟದ ಬೇಡಿಕೆಗಳನ್ನು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಓದಿ ಹೇಳಿದರು.
‘ನಾನು ಬಾಲ್ಯದಿಂದಲೂ ರಾಮಲೀಲಾ ಮೈದಾನಕ್ಕೆ ಬರುತ್ತಿದ್ದೇನೆ. ಪ್ರತಿವರ್ಷ ಇಲ್ಲಿ ರಾವಣನ ಪ್ರತಿಕೃತಿಯನ್ನು ದಹಿಸಲಾಗುತ್ತದೆ’ ಎಂದು ಪ್ರಿಯಾಂಕಾ ನೆನಪಿಸಿಕೊಂಡರು. ‘ನಾನು ಚಿಕ್ಕವಳಿದ್ದಾಗ ನನ್ನ ಅಜ್ಜಿ ಇಂದಿರಾ ಅವರ ಜೊತೆ ಇಲ್ಲಿಗೆ ಬರುತ್ತಿದ್ದೆ. ಅವರು ನನಗೆ ರಾಮಾಯಣದ ಕಥೆ ಹೇಳುತ್ತಿದ್ದರು. ಇಂದು ಅಧಿಕಾರದಲ್ಲಿ ಇರುವವರು ತಮ್ಮನ್ನು ರಾಮಭಕ್ತರು ಎಂದು ಕರೆದುಕೊಳ್ಳುತ್ತಾರೆ. ಅವರಿಗೆ ಒಂದಿಷ್ಟು ಮಾತು ಹೇಳಬೇಕು ಎಂದು ನನಗೆ ಅನ್ನಿಸಿತು. ಒಂದು ಸಾವಿರ ವರ್ಷಗಳ ಹಿಂದಿನ ಕಥೆಯನ್ನು ಹಾಗೂ ಅದರ ಸಂದೇಶವನ್ನು ನಾನು ಅವರಿಗೆ ಹೇಳಬೇಕು...’ ಎಂದರು. ‘ರಾಮನು ಸತ್ಯಕ್ಕಾಗಿ ಹೋರಾಟ ನಡೆಸಿದಾಗ ಅವನಲ್ಲಿ ಅಧಿಕಾರ ಸಂಪನ್ಮೂಲ ಅಥವಾ ಒಂದು ರಥ ಕೂಡ ಇರಲಿಲ್ಲ. ಆದರೆ ರಾವಣನ ಬಳಿ ರಥಗಳು ಸಂಪನ್ಮೂಲ ಸೇನೆ ಚಿನ್ನ ಇದ್ದವು. ರಾಮನ ಬಳಿ ಸತ್ಯ ಭರವಸೆ ನಂಬಿಕೆ ಪ್ರೀತಿ ದಯೆ ತಾಳ್ಮೆ ಧೈರ್ಯ ವಿನಯ ಇದ್ದವು. ಅಧಿಕಾರ ಶಾಶ್ವತ ಅಲ್ಲ ಅಹಂಕಾರವು ನುಚ್ಚುನೂರಾಗುತ್ತದೆ ಎಂಬ ಸಂದೇಶವನ್ನು ರಾಮನ ಜೀವನ ನೀಡುತ್ತದೆ ಎಂಬುದನ್ನು ನಾನು ಅಧಿಕಾರದಲ್ಲಿ ಇರುವವರಿಗೆ ಹಾಗೂ ಪ್ರಧಾನಿ ಮೋದಿ ಅವರಿಗೆ ಹೇಳಲು ಬಯಸುತ್ತೇನೆ’ ಎಂದು ಪ್ರಿಯಾಂಕಾ ಹೇಳಿದರು.
* ಚುನಾವಣಾ ಆಯೋಗವು ಚುನಾವಣೆಯಲ್ಲಿ ಸ್ಪರ್ಧೆಯು ಸಮಾನ ನೆಲೆಯಲ್ಲಿ ನಡೆಯುವುದನ್ನು ಖಾತರಿಪಡಿಸಬೇಕು.
* ಚುನಾವಣೆಯ ಮೇಲೆ ಪ್ರಭಾವ ಬೀರುವ ರೀತಿಯಲ್ಲಿ ವಿರೋಧ ಪಕ್ಷಗಳನ್ನು ಗುರಿಯಾಗಿಸಿಕೊಂಡು ಜಾರಿ ನಿರ್ದೇಶನಾಲಯ ಸಿಬಿಐ ಮತ್ತು ಆದಾಯ ತೆರಿಗೆ ಇಲಾಖೆ ಕ್ರಮ ಕೈಗೊಳ್ಳುವುದನ್ನು ಆಯೋಗವು ತಡೆಯಬೇಕು.
* ಜಾರ್ಖಂಡ್‌ನ ಮಾಜಿ ಮುಖ್ಯಮಂತ್ರಿ ಹೇಮಂತ್ ಸೊರೇನ್ ಮತ್ತು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರನ್ನು ತಕ್ಷಣ ಬಿಡುಗಡೆ ಮಾಡಬೇಕು.
* ವಿರೋಧ ಪಕ್ಷಗಳ ಹಣಕಾಸಿನ ಮೂಲಗಳನ್ನು ಬಲಪ್ರಯೋಗದ ಮೂಲಕ ಬತ್ತಿಸುವ ಕೆಲಸ ತಕ್ಷಣವೇ ನಿಲ್ಲಬೇಕು.
* ಬಿಜೆಪಿಯು ಚುನಾವಣಾ ಬಾಂಡ್ ಯೋಜನೆಯ ಮೂಲಕ ‘ಸುಲಿಗೆ’ ನಡೆಸಿರುವುದನ್ನು ಸುಪ್ರೀಂ ಕೋರ್ಟ್ ಮೇಲ್ವಿಚಾರಣೆಯಲ್ಲಿ ವಿಶೇಷ ತನಿಖಾ ತಂಡದ (ಎಸ್‌ಐಟಿ) ಮೂಲಕ ತನಿಖೆಗೆ ಒಳಪಡಿಸಬೇಕು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.