ನವದೆಹಲಿ:ಅಂತರರಾಷ್ಟ್ರೀಯ ಯೋಗ ದಿನವನ್ನು ಆಚರಿಸಲು ದೇಶ ಸಿದ್ಧಗೊಂಡಿದೆ. ಡೆಹ್ರಾಡೂನ್‌ನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಸಾವಿರಾರು ಜನರು ಯೋಗ ಪ್ರದರ್ಶನ ನೀಡಲಿದ್ದಾರೆ.
‘ಯೋಗ ದಿನದ ಅಂಗವಾಗಿ ದೇಶದಾದ್ಯಂತ ಕಾರ್ಯಕ್ರಮಗಳು ನಡೆಯಲಿವೆ’ ಎಂದು ಆಯುಷ್ ಸಚಿವಾಲಯದ ಹಿರಿಯ ಅಧಿಕಾರಿ ಹೇಳಿದ್ದಾರೆ.
ಈ ಬಗ್ಗೆ ಟ್ವಿಟರ್‌ನಲ್ಲಿ ವಿಡಿಯೊ ಹಂಚಿಕೊಂಡಿರುವ ಪ್ರಧಾನಿ ಮೋದಿ, ‘ಆರೋಗ್ಯ ಸದೃಢತೆಯತ್ತ ಸಾಗಲು ಯೋಗವು ಪಾಸ್‌ಪೋರ್ಟ್ ಇದ್ದಂತೆ. ಅದು ಕೇವಲ ವ್ಯಾಯಾಮವಲ್ಲ. ದೇಹವನ್ನು ಸದೃಢವಾಗಿಡುವ ಸಾಧನ’ ಎಂದು ಹೇಳಿದ್ದಾರೆ.
‘ಯೋಗವು ‘‘ನಾನು’’ ಎಂಬುದರಿಂದ ‘‘ನಾವು’’ ಎನ್ನುವತ್ತ ಸಾಗುವ ಪಯಣ. ಸಮತೋಲನ ಕಾಯ್ದುಕೊಳ್ಳಲು, ಏಕಾಗ್ರತೆ ಸಾಧಿಸಲು ದೊಡ್ಡ ಶಕ್ತಿಯನ್ನು ಯೋಗ ನೀಡುತ್ತದೆ’ ಎಂದು ಮೋದಿ ಟ್ವೀಟ್ ಮಾಡಿದ್ದಾರೆ.
ರಾಜ್ಯ ಸರ್ಕಾರಗಳು ಸರ್ಕಾರೇತರ ಸಂಸ್ಥೆಗಳೊಡಗೂಡಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿವೆ. ಕೇಂದ್ರ ಸಚಿವರು ಕೂಡ ಆಯಾ ಸ್ಥಳಗಳಲ್ಲಿ ಯೋಗ ದಿನಾಚರಣೆಯಲ್ಲಿ ಪಾಲ್ಗೊಳ್ಳುವರು ಎಂದು ಇಲಾಖೆ ತಿಳಿಸಿದೆ.
ದೆಹಲಿಯ ಕೆಂಪುಕೋಟೆಯಲ್ಲಿ ಬ್ರಹ್ಮಕುಮಾರಿ ಸಂಸ್ಥೆಯ ವತಿಯಿಂದ ಆಯೋಜಿಸಲಾಗುವ ಕಾರ್ಯಕ್ರಮದಲ್ಲಿ ವಿವಿಧ ಭದ್ರತಾ ಪಡೆಗಳ ಮಹಿಳಾ ಸಿಬ್ಬಂದಿ ಸೇರಿದಂತೆ 50 ಸಾವಿರಕ್ಕೂ ಹೆಚ್ಚು ಜನ ಯೋಗ ಪ್ರದರ್ಶನ ನಡೆಸುವರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕೇಂದ್ರ ಸರ್ಕಾರ ಮೊದಲ ಬಾರಿಗೆ 2015ರ ಜೂನ್ 21ರಂದು ದೆಹಲಿಯ ರಾಜಪಥ್‌ನಲ್ಲಿ ಅಂತರರಾಷ್ಟ್ರೀಯ ಯೋಗ ದಿನ ಆಚರಿಸಿತ್ತು. ಈ ಒಂದೇ ಸ್ಥಳದಲ್ಲಿ 35,985 ಜನ ಆಸನಗಳನ್ನು ಪ್ರದರ್ಶಿಸಿದ್ದು ಗಿನ್ನಿಸ್ ದಾಖಲೆಯಾಗಿತ್ತು. ಈ ಬಾರಿ ಡೆಹ್ರಾಡೂನ್‌ನಲ್ಲಿ ಅದಕ್ಕಿಂತ ಹೆಚ್ಚು ಜನ ಭಾಗವಹಿಸುತ್ತಿದ್ದಾರೆ.
‘ಯೋಗ ರಾಜಕೀಯ ಸಾಧನ ಆಗದಿರಲಿ’
ಲಖನೌ: ‘ಯೋಗವನ್ನು ರಾಜಕೀಯ ಸಾಧನದಂತೆ ಬಳಸಬಾರದು ಮತ್ತು ನಿರ್ದಿಷ್ಟ ಸಮುದಾಯವೊಂದರ ಭಾಗದಂತೆ ಅದನ್ನು ಗುರುತಿಸಬಾರದು’ ಎಂದು ಅಖಿಲ ಭಾರತ ಶಿಯಾ ವೈಯಕ್ತಿಕ ಕಾನೂನು ಮಂಡಳಿ (ಎಐಎಸ್‌ಪಿಎಲ್‌ಬಿ) ಅಭಿಪ್ರಾಯಪಟ್ಟಿದೆ.
ಅಂತರರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ವಿವಿಧ ಮುಸ್ಲಿಂ ಸಂಘಟನೆಗಳೂ ಇದೇ ಅಭಿಪ್ರಾಯ ವ್ಯಕ್ತಪಡಿಸಿವೆ. ‘ವ್ಯಾಯಾಮದ ಭಾಗವಾಗಿ ಮಾತ್ರ ಯೋಗವನ್ನು ನೋಡಬೇಕು’ ಎಂದು ಸಂಘಟನೆಗಳು ಹೇಳಿವೆ. ‘ದೈಹಿಕ ಸದೃಢತೆ ಕಾಪಾಡಿಕೊಳ್ಳಲು ಇಸ್ಲಾಂ ಕೂಡ ವಿಶೇಷ ಆದ್ಯತೆ ನೀಡುತ್ತದೆ. ಅಲ್ಲದೆ, ಫಿಟ್‌ನೆಸ್‌ಗೆ ಸಂಬಂಧಿಸಿದ ವಿಷಯಗಳನ್ನು ಉತ್ತಮವೆಂದೇ ಪರಿಗಣಿಸುತ್ತದೆ. ಯೋಗ ಕೂಡ ಉತ್ತಮ ವ್ಯಾಯಾಮ. ಆದರೆ, ಇದನ್ನು ಕಡ್ಡಾಯ ಮಾಡಬಾರದು. ಅನ್ಯ ಧರ್ಮದವರು ಇದನ್ನು ಒಪ್ಪಿಕೊಳ್ಳದೇ ಇರಬಹುದು’ ಎಂದು ಎಐಎಸ್‌ಪಿಎಲ್‌ಬಿ ವಕ್ತಾರ ಸಜ್ಜಾದ್ ನೊಮಾನಿ ಹೇಳಿದ್ದಾರೆ.
‘ಯೋಗ ರಾಜಕೀಯದ ಸಾಧನವಾಗಬಾರದು. ಆದರೆ, ಇಂತಹ ಅಭ್ಯಾಸ ಮುಂದುವರಿದಿರುವುದು ದುರದೃಷ್ಟಕರ’ ಎಂದು ಅವರು ಹೇಳಿದ್ದಾರೆ.
* ಡೆಹ್ರಾಡೂನ್‌ನಲ್ಲಿ ಯೋಗಾಸನ ಪ್ರದರ್ಶಿಸುವವರ ಸಂಖ್ಯೆ 55,000
* ಯೋಗ ದಿನ ಆಚರಿಸಲಿರುವ ದೇಶಗಳ ಸಂಖ್ಯೆ 150
* ದೇಶದಾದ್ಯಂತ ನಡೆಯಲಿರುವ ಯೋಗ ಕಾರ್ಯಕ್ರಮಗಳು 5,000
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.