ADVERTISEMENT

ರಾಷ್ಟ್ರ ರಾಜಧಾನಿಯಲ್ಲಿ 74ನೇ ಗಣರಾಜ್ಯೋತ್ಸವ| ಕರ್ತವ್ಯಪಥ: ನಾರಿಶಕ್ತಿ ವೈಭವ

ರಾಷ್ಟ್ರ ರಾಜಧಾನಿಯಲ್ಲಿ 74ನೇ ಗಣರಾಜ್ಯೋತ್ಸವ ಸಡಗರ

ಪಿಟಿಐ
Published 28 ಜನವರಿ 2023, 13:30 IST
Last Updated 28 ಜನವರಿ 2023, 13:30 IST
ಪಥಸಂಚಲನದಲ್ಲಿ ಪಾಲ್ಗೊಂಡಿದ್ದ ಈಜಿಪ್ಟ್‌ನ ಸೇನಾ ತುಕಡಿ–ಪಿಟಿಐ ಚಿತ್ರ 
ಪಥಸಂಚಲನದಲ್ಲಿ ಪಾಲ್ಗೊಂಡಿದ್ದ ಈಜಿಪ್ಟ್‌ನ ಸೇನಾ ತುಕಡಿ–ಪಿಟಿಐ ಚಿತ್ರ    

ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಗುರುವಾರ 74ನೇ ಗಣರಾಜ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು. ಕರ್ತವ್ಯಪಥ ದಲ್ಲಿ ಹಮ್ಮಿಕೊಳ್ಳಲಾಗಿದ್ದ ವರ್ಣರಂಜಿತ ಕಾರ್ಯಕ್ರಮದಲ್ಲಿ ನಾರಿಶಕ್ತಿಯ ಜೊತೆಗೆ ರಕ್ಷಣಾ ಕ್ಷೇತ್ರದಲ್ಲಿ ದೇಶವು ಸಾಧಿಸಿರುವ ಆತ್ಮನಿರ್ಭರತೆಯ ವಿರಾಟ ರೂಪ ಅನಾವರಣಗೊಂಡಿತು.

ಸೈನಿಕರಿಂದ ಮೂಡಿಬಂದ ಮೈನವಿರೇಳಿಸುವ ಸಾಹಸ ಪ್ರದರ್ಶನ ಗಳನ್ನು ಕಂಡು ನೆರೆದಿದ್ದವರು ಪುಳಕಿತರಾ ದರು. ಸೇನಾಪಡೆ, ವಾಯುಪಡೆ, ನೌಕಾಪಡೆ ಹಾಗೂ ಎನ್‌ಸಿಸಿಯವರು ನಡೆಸಿದ ಪಥಸಂಚಲನ ನೋಡುಗರ ಮನಸೆಳೆಯಿತು. ನಾರಿಶಕ್ತಿ ಸಾರುವ ಕರ್ನಾಟಕ ಸಹಿತ ವಿವಿಧ ರಾಜ್ಯಗಳ ಸ್ತಬ್ಧಚಿತ್ರಗಳು ಕಾರ್ಯಕ್ರಮಕ್ಕೆ ಮೆರುಗು ನೀಡಿದವು. ದೇಶದ ವೈವಿಧ್ಯಮಯ ಸಂಸ್ಕೃತಿ ಹಾಗೂ ಪರಂಪರೆಯನ್ನು ಕಣ್ತುಂಬಿಕೊಳ್ಳುವ ಅವಕಾಶವೂ ನೆರೆದಿದ್ದವರಿಗೆ ದೊರೆಯಿತು.

‘ನಾರಿಶಕ್ತಿ’ಯ ಧ್ಯೇಯದೊಂದಿಗೆ ನಡೆದ ಗಣರಾಜ್ಯೋತ್ಸವ ಕಾರ್ಯಕ್ರಮಕ್ಕೆ ರಾಷ್ಟ್ರಪತಿ ದ್ರೌಪದಿ ಮುರ್ಮು, ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವು ಗಣ್ಯರು ಸಾಕ್ಷಿಯಾದರು. ಈಜಿಪ್ಟ್‌ ಅಧ್ಯಕ್ಷ ಅಬ್ದೆಲ್‌ ಫತ್ತಾಹ್‌ ಅಲ್‌ ಸಿಸಿ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಈ ದೇಶದ ಅಧ್ಯಕ್ಷರೊಬ್ಬರು ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದು ಇದೇ ಮೊದಲು. ಈಜಿಪ್ಟ್‌ನ ಸೇನಾ ತುಕಡಿಯವರೂ ಪಥಸಂಚಲನದಲ್ಲಿ ಪಾಲ್ಗೊಳ್ಳುವ ಮೂಲಕ ಸಮಾರಂಭದ ಮೆರುಗು ಹೆಚ್ಚಿಸಿದರು. 144 ಮಂದಿ ಸೈನಿಕರಿದ್ದ ತುಕಡಿಯನ್ನು ಕರ್ನಲ್‌ ಮಹಮೌದ್‌ ಮೊಹಮ್ಮದ್‌ ಅಬ್ದೆಲ್‌ಫತ್ಹಾ ಅಲ್‌ಖರಸವಿ ಅವರು ಮುನ್ನಡೆಸಿದರು.

ADVERTISEMENT

ಬೆಳಿಗ್ಗೆ 10.30ರ ಸುಮಾರಿಗೆ ಆರಂಭವಾದ ಸಮಾರಂಭವು ಮಧ್ಯಾಹ್ನದವರೆಗೂ ನಡೆಯಿತು. ಕಾರ್ಯಕ್ರಮಕ್ಕೂ ಮುನ್ನ ರಾಷ್ಟ್ರೀಯ ಯುದ್ಧ ಸ್ಮಾರಕಕ್ಕೆ ಭೇಟಿ ನೀಡಿದ್ದ ಪ್ರಧಾನಿ ಮೋದಿ ಅವರು ಹುತಾತ್ಮ ಯೋಧರಿಗೆ ನಮನ ಸಲ್ಲಿಸಿದರು.

ಸಂಪ್ರದಾಯದಂತೆ ತ್ರಿವರ್ಣ ಧ್ವಜ ಹಾರಿಸಲಾಯಿತು. ಬಳಿಕ ರಾಷ್ಟ್ರಗೀತೆ ಮೊಳಗಿತು. 105 ಎಂ.ಎಂ ಫೀಲ್ಡ್‌ ಗನ್‌ಗಳ ಮೂಲಕ ‘ಗನ್‌ ಸೆಲ್ಯೂಟ್‌’ ನೀಡಿದ್ದು ಈ ಬಾರಿಯ ಗಣರಾಜ್ಯೋತ್ಸವದ ವಿಶೇಷತೆಗಳಲ್ಲಿ ಒಂದಾಗಿತ್ತು. ದೇಶವು ರಕ್ಷಣಾ ಕ್ಷೇತ್ರದಲ್ಲಿ ‘ಆತ್ಮ ನಿರ್ಭರತೆ’ ಸಾಧಿಸುತ್ತಿರುವುದರ ಧ್ಯೋತಕವಾಗಿ ಈ ಗನ್‌ ಬಳಸಲಾಯಿತು.

ಕರ್ತವ್ಯಪಥದ ಸುತ್ತಲೂ ದಟ್ಟ ಮಂಜು ಕವಿದಿತ್ತು. ಹೀಗಾಗಿ ವಾಯುಪ‍ಡೆಯ ‘ಲೋಹದ ಹಕ್ಕಿ’ಗಳು ಆಗಸದಲ್ಲಿ ಮೂಡಿಸುವ ಬಣ್ಣ ಬಣ್ಣದ ಚಿತ್ತಾರಗಳನ್ನು ಕಣ್ತುಂಬಿಕೊಳ್ಳುವ ಹಂಬಲ ಹೊತ್ತು ಬಂದಿದ್ದ ಪ್ರೇಕ್ಷಕರಿಗೆ ನಿರಾಸೆ ಕಾಡಿತು.

ಸ್ವದೇಶಿ ನಿರ್ಮಿತ ಸೇನಾ ಸಲಕರಣೆಗಳನ್ನು ಪ್ರದರ್ಶಿಸಲಾಯಿತು. ಸೇನೆಯ ಪ್ರಮುಖ ಯುದ್ಧ ಟ್ಯಾಂಕ್‌ಗಳಾದ ಅರ್ಜುನ್‌ ಮತ್ತು ಕೆ–9 ವಜ್ರ, ಕರ್ತವ್ಯಪಥದಲ್ಲಿ ಸಾಗಿದವು. ನಾಗ್‌ ಕ್ಷಿಪಣಿ ವ್ಯವಸ್ಥೆ (ಎನ್‌ಎಎಂಐಎಸ್‌) ಹಾಗೂ ಆಕಾಶ್‌ ಕ್ಷಿಪಣಿ ವ್ಯವಸ್ಥೆಯನ್ನೂ ಪ್ರದರ್ಶಿಸಲಾಯಿತು.

ಮಹಿಳೆಯರದ್ದೇ ಮುಂದಾಳತ್ವ

ಮಂಗಳೂರಿನ ದಿಶಾ ಅಮೃತ್‌ ಅವರು ಪಥಸಂಚಲನದಲ್ಲಿ ನೌಕಾಪಡೆಯ ತುಕಡಿಯನ್ನು ಮುನ್ನಡೆಸಿದರು.

ಅಂಡಮಾನ್‌ ನಿಕೋಬಾರ್‌ನಲ್ಲಿ ಲೆಫ್ಟಿನೆಂಟ್‌ ಕಮಾಂಡರ್‌ ಆಗಿರುವ ದಿಶಾ ಅವರು 144 ಮಂದಿ ಯುವ ಸೈನಿಕರನ್ನೊಳಗೊಂಡ ತುಕಡಿಯ ಸಾರಥ್ಯ ವಹಿಸಿದ್ದರು.

ಲೆಫ್ಟಿನೆಂಟ್‌ ಚೇತನಾ ಶರ್ಮಾ ಅವರು ಆಕಾಶ್‌ ಕ್ಷಿಪಣಿ ವ್ಯವಸ್ಥೆಯ ಪ್ರದರ್ಶನದ ವೇಳೆ ಟ್ಯಾಂಕರ್‌ ಒಂದರ ಮುಂದಾಳತ್ವ ವಹಿಸಿದ್ದರು. ಸ್ಕ್ವಾಡ್ರನ್‌ ಲೀಡರ್‌ ಸಿಂಧು ರೆಡ್ಡಿ ಅವರು ವಾಯುಪಡೆಯ ತುಕಡಿಯ ನೇತೃತ್ವ ವಹಿಸಿದ್ದರು.

ಶ್ರಮಯೋಗಿಗಳಿಗೆ ಆಹ್ವಾನ

ಕರ್ತವ್ಯಪಥದ ಪುನರ್ ಅಭಿವೃದ್ಧಿ ಹಾಗೂ ಹೊಸ ಸಂಸತ್ ಭವನ ನಿರ್ಮಾಣ ಕಾರ್ಯದಲ್ಲಿ ತೊಡಗಿದ್ದ ‘ಶ್ರಮ ಯೋಗಿ’ಗಳನ್ನು ಈ ಬಾರಿಯ ಗಣರಾಜ್ಯೋತ್ಸವದ ಪರೇಡ್‌ ವೀಕ್ಷಣೆಗೆ ಆಹ್ವಾನಿಸಲಾಗಿತ್ತು. ಕರ್ತವ್ಯಪಥದಲ್ಲಿನ ಹಾಲು, ತರಕಾರಿ ಮಾರಾಟಗಾರರು ಹಾಗೂ ಬೀದಿ ಬದಿ ವ್ಯಾಪಾರಿಗಳಿಗೂ ಆಹ್ವಾನ ನೀಡಲಾಗಿತ್ತು. ಇವರೆಲ್ಲರೂ ಪ್ರೇಕ್ಷಕರ ಗ್ಯಾಲರಿಯ ಮೊದಲ ಸಾಲಿನಲ್ಲಿ ಕುಳಿತಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.