ನವದೆಹಲಿ: ಪೂರ್ವ ಲಡಾಖ್‌ನ ಡೆಪ್ಸಾಂಗ್ ಮತ್ತು ಡೆಮ್‌ಚೋಕ್ ಪ್ರದೇಶಗಳಲ್ಲಿ ನಿಯೋಜಿಸಿರುವ ತಮ್ಮ ಸೇನೆಗಳನ್ನು ವಾಪಸ್ ಕರೆಸಿಕೊಳ್ಳುವ ಪ್ರಕ್ರಿಯೆಯನ್ನು ಭಾರತ ಹಾಗೂ ಚೀನಾ ಆರಂಭಿಸಿವೆ.
ಅಕ್ಟೋಬರ್ 28–29ರ ಒಳಗಾಗಿ ಈ ಪ್ರಕ್ರಿಯೆ ಪೂರ್ಣಗೊಳ್ಳಬಹುದು ಎಂದು ಸೇನೆಯ ಮೂಲಗಳು ಶುಕ್ರವಾರ ತಿಳಿಸಿವೆ.
ಪೂರ್ವ ಲಡಾಖ್‌ನ ವಾಸ್ತವ ನಿಯಂತ್ರಣ ರೇಖೆಯ (ಎಲ್‌ಎಸಿ) ಬಳಿ ಗಸ್ತು ನಡೆಸುವ ಮತ್ತು ಸೇನೆಯ ವಾಪಸಾತಿ ಸಂಬಂಧ ಉಭಯ ದೇಶಗಳ ನಡುವೆ ಒಪ್ಪಂದ ಏರ್ಪಟ್ಟ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ. ಪೂರ್ವ ಲಡಾಖ್ ಬಳಿ ನಾಲ್ಕು ವರ್ಷಗಳಿಂದ ಮೂಡಿರುವ ಅನಿಶ್ಚಿತ ಪರಿಸ್ಥಿತಿಯನ್ನು ಅಂತ್ಯಗೊಳಿಸುವಲ್ಲಿ ಇದೊಂದು ಪ್ರಮುಖ ಹೆಜ್ಜೆ ಎಂದು ವಿಶ್ಲೇಷಿಸಲಾಗಿದೆ.
ಸೇನೆಗಳ ವಾಪಸಾತಿ ಪೂರ್ಣಗೊಂಡ ನಂತರ ಈ ಎರಡೂ ಪ್ರದೇಶಗಳಲ್ಲಿ ಭಾರತ ಮತ್ತು ಚೀನಾ ಪಹರೆ ಕಾಯುವ ಕೆಲಸ ಆರಂಭಿಸಲಿವೆ. ಅದೇ ರೀತಿ, ಎಲ್‌ಎಸಿಯ ಎರಡೂ ಕಡೆಗಳಲ್ಲಿ ನಿರ್ಮಿಸಿರುವ ತಾತ್ಕಾಲಿಕ ಶೆಡ್‌ಗಳು ಮತ್ತು ಟೆಂಟ್‌ಗಳನ್ನು ಕೆಡವಲಾಗುತ್ತದೆ ಎಂದು ಮೂಲಗಳು ಹೇಳಿವೆ.
ಈ ಭಾಗದಲ್ಲಿ ಗಸ್ತು ನಡೆಸುವ ಪ್ರಕ್ರಿಯೆಯು ಅಂತಿಮವಾಗಿ, 2020ರ ಏಪ್ರಿಲ್‌ಗಿಂತ ಮುನ್ನ ಇದ್ದ ಸ್ಥಿತಿಗೆ ಮರಳುವ ವಿಶ್ವಾಸ ಮೂಡಿದೆ.
ಎರಡೂ ದೇಶಗಳ ನಡುವೆ ಗಡಿ ಪಹರೆಗೆ ಸಂಬಂಧಿಸಿದ ಒಪ್ಪಂದವನ್ನು ಮೊದಲು ರಾಜತಾಂತ್ರಿಕ ಮಟ್ಟದಲ್ಲಿ ಅಂತಿಮಗೊಳಿಸಲಾಗಿದ್ದು, ಆ ಬಳಿಕ ಮಿಲಿಟರಿ ಹಂತದ ಮಾತುಕತೆಗಳು ನಡೆದವು ಎಂದು ಮೂಲಗಳು ತಿಳಿಸಿವೆ. ಕಮಾಂಡರ್ ಮಟ್ಟದ ಮಾತುಕತೆಯ ಬಳಿಕ ಒಪ್ಪಂದವನ್ನು ಕಾರ್ಯರೂಪಕ್ಕಿಳಿಸುವ ಪ್ರಕ್ರಿಯೆ ಆರಂಭವಾಗಿದೆ.
2020ರ ಜೂನ್‌ನಲ್ಲಿ ಗಾಲ್ವಾನ್ ಕಣಿವೆಯಲ್ಲಿ ನಡೆದಿದ್ದ ಘರ್ಷಣೆಯ ನಂತರ ಎರಡೂ ರಾಷ್ಟ್ರಗಳ ನಡುವೆ ಬಿಕ್ಕಟ್ಟು ಉಲ್ಬಣಿಸಿತ್ತು. ಪೂರ್ವ ಲಡಾಖ್‌ನ ಎಲ್‌ಎಸಿ ಉದ್ದಕ್ಕೂ ಗಸ್ತು ತಿರುಗುವ ಕುರಿತು ಭಾರತ ಮತ್ತು ಚೀನಾ ಒಪ್ಪಂದಕ್ಕೆ ಬಂದಿದೆ ಎಂದು ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಸ್ರಿ ಅ.21ರಂದು ಹೇಳಿದ್ದರು. ಮರುದಿನ ಚೀನಾ ಇದನ್ನು ದೃಢಪಡಿಸಿತ್ತು.
ಕಜಾನ್‌ನಲ್ಲಿ ನಡೆದ ಬ್ರಿಕ್ಸ್ ಶೃಂಗಸಭೆಯ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್ ಅವರು ಲಡಾಖ್‌ನ ಗಡಿ ವಿವಾದ ಪರಿಹರಿಸುವುದಕ್ಕೆ ಸಂಬಂಧಿಸಿದ ಒಪ್ಪಂದವನ್ನು ಅನುಮೋದಿಸಿದ್ದರು.
ಒಪ್ಪಂದದ ಬಗ್ಗೆ ಪ್ರತಿಕ್ರಿಯಿಸಿದ್ದ ಮೋದಿ, ‘ಎಲ್‌ಎಸಿಯುದ್ದಕ್ಕೂ ಶಾಂತಿ ಹಾಗೂ ಸ್ಥಿರತೆ ಕಾಪಾಡಿಕೊಳ್ಳುವುದು ನಮ್ಮ ಆದ್ಯತೆಯಾಗಿದೆ’ ಎಂದಿದ್ದರು. ‘ಪರಸ್ಪರ ಗೌರವ ಮತ್ತು ನಂಬಿಕೆ’ಯ ಅಗತ್ಯತೆಯನ್ನು ಒತ್ತಿ ಹೇಳಿದ್ದರು.
‘ಈ ಒಪ್ಪಂದವು ತಾಳ್ಮೆ ಮತ್ತು ನಿರಂತರ ರಾಜತಾಂತ್ರಿಕ ಮಾತುಕತೆಯ ಫಲ’ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್ ಪ್ರತಿಕ್ರಿಯಿಸಿದ್ದರು.
‘ಭಾರತ–ಚೀನಾ ಗಡಿಯಲ್ಲಿ ವಿಶ್ವಾಸವನ್ನು ಮರುಸ್ಥಾಪಿಸಲು ನಾವು ಯತ್ನಿಸುತ್ತಿದ್ದೇವೆ. ಈ ಗುರಿ ಸಾಧಿಸಲು ಉಭಯ ರಾಷ್ಟ್ರಗಳು ಪರಸ್ಪರ ಭರವಸೆ ನೀಡಬೇಕಾಗಿದೆ’ ಎಂದು ಭಾರತೀಯ ಸೇನೆಯ ಮುಖ್ಯಸ್ಥ ಜನರಲ್ ಉಪೇಂದ್ರ ದ್ವಿವೇದಿ ಹೇಳಿದ್ದರು.
70 ಸಾವಿರಕ್ಕೂ ಹೆಚ್ಚು ಸೈನಿಕರು
ಚೀನಾ ಜತೆ ಸಂಘರ್ಷ ಏರ್ಪಟ್ಟ ಬಳಿಕ ಭಾರತವು ಪೂರ್ವ ಲಡಾಖ್‌ನ
ಎಲ್‌ಎಸಿಯುದ್ದಕ್ಕೂ70 ಸಾವಿರಕ್ಕೂ ಹೆಚ್ಚು ಸೈನಿಕರನ್ನು ನಿಯೋಜಿಸಿದೆ ಎಂದು ಕಳೆದ ವರ್ಷದ ಆಗಸ್ಟ್‌ನಲ್ಲಿ ವರದಿಯಾಗಿತ್ತು. 90 ಯುದ್ಧ ಟ್ಯಾಂಕ್‌ಗಳು, ನೂರಕ್ಕೂ ಅಧಿಕ ಇನ್‌ಫೆಂಟ್ರಿ ಕಾಂಬ್ಯಾಟ್ ವೆಹಿಕಲ್, ಸುಖೋಯ್ ಮತ್ತು ಜಾಗ್ವಾರ್ ಯುದ್ಧ ವಿಮಾನಗಳನ್ನೂ ನಿಯೋಜಿಸಿ ಯಾವುದೇ ಪರಿಸ್ಥಿತಿಯನ್ನು ಎದುರಿಸಲು ಸನ್ನದ್ಧತೆ ತೋರಿತ್ತು. ಚೀನಾ ಕೂಡ ಇದೇ ರೀತಿ ಸೈನಿಕರನ್ನು ನಿಯೋಜಿಸಿತ್ತು. ಈ ಎರಡೂ ಪ್ರದೇಶಗಳಲ್ಲಿರುವ ಯುದ್ಧ ಸಾಮಗ್ರಿಗಳನ್ನು ಒಪ್ಪಂದದ ಪ್ರಕಾರ ಉಭಯ ದೇಶಗಳು ತೆರವುಗೊಳಿಸಲಿವೆ.
‘ಗಸ್ತು: ಮುಂಚಿತವಾಗಿ ಮಾಹಿತಿ’
ಡೆಪ್ಸಾಂಗ್ ಮತ್ತು ಡೆಮ್‌ಚೋಕ್ ಪ್ರದೇಶಗಳಲ್ಲಿ ಕಣ್ಗಾವಲು ಇಡುವು ದನ್ನು ಎರಡೂ ದೇಶಗಳು ಮುಂದುವರಿಸಲಿವೆ. ‘ಯಾವುದೇ ರೀತಿಯ ತಪ್ಪು ಗ್ರಹಿಕೆ’ ಉಂಟಾಗುವುದನ್ನು ತಪ್ಪಿಸಲು ಗಸ್ತು ಹೊರಡುವ ಮುನ್ನ ಎರಡೂ ಕಡೆಯವರು ಪರಸ್ಪರರಿಗೆ ಮುಂಚಿತವಾಗಿ ಮಾಹಿತಿ ನೀಡುವರು ಎಂದು ಸೇನೆಯ ಮೂಲಗಳು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.