ADVERTISEMENT

India–China: ಪೂರ್ವ ಲಡಾಖ್‌ನಲ್ಲಿ ಭಾರತ, ಚೀನಾ ಸೇನಾ ವಾಪಸಾತಿ ಪ್ರಕ್ರಿಯೆ ಪೂರ್ಣ

ರಾಯಿಟರ್ಸ್
Published 30 ಅಕ್ಟೋಬರ್ 2024, 11:38 IST
Last Updated 30 ಅಕ್ಟೋಬರ್ 2024, 11:38 IST
<div class="paragraphs"><p>ಲಡಾಖ್‌ನಿಂದ ತೆರಳುತ್ತಿರುವ ಸೇನಾ ವಾಹನಗಳು</p></div>

ಲಡಾಖ್‌ನಿಂದ ತೆರಳುತ್ತಿರುವ ಸೇನಾ ವಾಹನಗಳು

   

ಪಿಟಿಐ ಚಿತ್ರ

ನವದೆಹಲಿ: ಪೂರ್ವ ಲಡಾಖ್‌ನಲ್ಲಿ ಭಾರತ ಹಾಗೂ ಚೀನಾ ನಿಯೋಜಿಸಿದ್ದ ಸೇನಾ ಪಡೆಗಳನ್ನು ವಾಪಸ್‌ ಕರೆಸಿಕೊಳ್ಳುವ ಪ್ರಕ್ರಿಯೆ ಪೂರ್ಣಗೊಂಡಿದೆ ಎಂದು ಭಾರತದ ರಕ್ಷಣಾಧಿಕಾರಿಗಳು ಬುಧವಾರ ತಿಳಿಸಿದ್ದಾರೆ.

ADVERTISEMENT

ಗಡಿಯಲ್ಲಿ ಬಿಕ್ಕಟ್ಟು ಶಮನಗೊಳಿಸುವುದು ಹಾಗೂ 2020ರ ಏಪ್ರಿಲ್‌ಗೂ ಹಿಂದೆ ಇದ್ದಂತೆ ಗಸ್ತು ವ್ಯವಸ್ಥೆಯನ್ನು ಮರುಸ್ಥಾಪಿಸುವ ನಿಟ್ಟಿನಲ್ಲಿ ಉಭಯ ದೇಶಗಳು ಕೈಗೊಂಡ ಒಪ್ಪಂದದ ಅನುಸಾರ ಸೇನಾ ವಾಪಸಾತಿ ನಡೆದಿದೆ.

ದೀಪಾವಳಿ ಹಿನ್ನೆಲೆಯಲ್ಲಿ ಎರಡೂ ರಾಷ್ಟ್ರಗಳ ಯೋಧರು ನಾಳೆ (ಗುರುವಾರ) ಪರಸ್ಪರ ಸಿಹಿ ಹಂಚಿ, ಶುಭ ಹಾರೈಸಲಿದ್ದಾರೆ.

ರಷ್ಯಾದ ಕಜಾನ್‌ನಲ್ಲಿ ಇತ್ತೀಚೆಗೆ ನಡೆದ 'ಬ್ರಿಕ್ಸ್‌' ಶೃಂಗ ಸಭೆಯಲ್ಲಿ ಪಾಲ್ಗೊಂಡಿದ್ದ ವೇಳೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಚೀನಾ ಅಧ್ಯಕ್ಷ ಷಿ ಜಿನ್‌ ಪಿಂಗ್‌ ಅವರು ಅಕ್ಟೋಬರ್‌ 23ರಂದು ಪ್ರತ್ಯೇಕ ದ್ವಿಪಕ್ಷೀಯ ಮಾತುಕತೆ ನಡೆಸಿದ್ದರು. ಈ ವೇಳೆ ಪೂರ್ವ ಲಡಾಖ್‌ನ ವಾಸ್ತವಿಕ ನಿಯಂತ್ರಣ ರೇಖೆಯ (ಎಲ್‌ಎಸಿ) ಬಳಿ ಸೇನೆಯ ಹಿಂತೆಗೆತ ಮತ್ತು ಗಸ್ತು ತಿರುಗುವಿಕೆಗೆ ಸಂಬಂಧಿಸಿದ ಒಪ್ಪಂದವನ್ನು ಅನುಮೋದಿಸಿದ್ದರು.

ಗಾಲ್ವಾನ್‌ ಕಣಿವೆಯಲ್ಲಿ 2020ರ ಜೂನ್‌ನಲ್ಲಿ ಸೇನೆಗಳ ನಡುವೆ ಘರ್ಷಣೆ ಆರಂಭವಾದ ಬಳಿಕ ಇಲ್ಲಿ ಅನಿಶ್ಚಿತ ಪರಿಸ್ಥಿತಿ ನಿರ್ಮಾಣವಾಗಿತ್ತು. ಎರಡೂ ದೇಶಗಳು, ಲಡಾಖ್‌ನ ಡೆಪ್ಸಾಂಗ್ ಮತ್ತು ಡೆಮ್‌ಚೋಕ್ ಪ್ರದೇಶಗಳಲ್ಲಿ ಸೇನಾ ‍ಪಡೆಗಳನ್ನು ನಿಯೋಜಿಸಿದ್ದವು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.