ನವದೆಹಲಿ: ಪೂರ್ವ ಲಡಾಖ್‌ನ ವಾಸ್ತವಿಕ ನಿಯಂತ್ರಣ ರೇಖೆಯ (ಎಲ್‌ಎಸಿ) ಉದ್ದಕ್ಕೂ ಗಸ್ತು ತಿರುಗುವ ಕುರಿತು ಭಾರತ ಮತ್ತು ಚೀನಾದ ಸಂಧಾನಕಾರರು ಒಪ್ಪಂದಕ್ಕೆ ಬಂದಿದ್ದಾರೆ ಎಂದು ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಸ್ರಿ ಸೋಮವಾರ ಹೇಳಿದ್ದಾರೆ.
ಈ ಒಪ್ಪಂದವು ಡೆಪ್ಸಾಂಗ್ ಮತ್ತು ಡೆಮ್ಚೋಕ್ ಪ್ರದೇಶಗಳಲ್ಲಿ ಗಸ್ತು ತಿರುಗುವುದಕ್ಕೆ ಸಂಬಂಧಿಸಿದ್ದಾಗಿದೆ ಎಂದು ತಿಳಿದುಬಂದಿದೆ.
ಬ್ರಿಕ್ಸ್ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಪ್ರಧಾನಿ ನರೇಂದ್ರ ಮೋದಿ ಅವರು ರಷ್ಯಾದ ಕಜಾನ್ ನಗರಕ್ಕೆ ಪ್ರಯಾಣಿಸುವ ಒಂದು ದಿನದ ಮೊದಲು ಈ ಮಹತ್ವದ ಬೆಳವಣಿಗೆ ನಡೆದಿದೆ.
ಉಳಿದ ಸಮಸ್ಯೆಗಳನ್ನು ಪರಿಹರಿಸಲು ಕಳೆದ ಕೆಲವು ವಾರಗಳಿಂದ ಉಭಯ ರಾಷ್ಟ್ರಗಳ ಸಂಧಾನಕಾರರು ಸಂಪರ್ಕದಲ್ಲಿದ್ದಾರೆ ಎಂದು ವಿದೇಶಾಂಗ ಕಾರ್ಯದರ್ಶಿ ಹೇಳಿದರು.
ಉಭಯ ರಾಷ್ಟ್ರಗಳ ನಡುವಿನ ಈ ಒಪ್ಪಂದದ ಬಗ್ಗೆ ಅಧಿಕೃತ ಘೋಷಣೆ ಹೊರ ಬೀಳದಿದ್ದರೂ ಬ್ರಿಕ್ಸ್ ಶೃಂಗಸಭೆಯ ಸಂದರ್ಭ ಪ್ರಧಾನಿ ಮೋದಿ ಮತ್ತು ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್ ನಡುವೆ ನಡೆಯುವ ದ್ವಿಪಕ್ಷೀಯ ಸಭೆಯಲ್ಲಿ ಈ ಬಗ್ಗೆ ಅಧಿಕೃತ ಘೋಷಣೆ ಹೊರಬೀಳುವ ನಿರೀಕ್ಷೆ ಇದೆ.
‘ಸಂಧಾನಕಾರರ ಚರ್ಚೆಗಳ ಪರಿಣಾಮವಾಗಿ, ಭಾರತ-ಚೀನಾ ಗಡಿ ಪ್ರದೇಶಗಳಲ್ಲಿ ಎಲ್ಎಸಿ ಉದ್ದಕ್ಕೂ ಗಸ್ತು ವ್ಯವಸ್ಥೆಗೆ ಒಪ್ಪಂದಕ್ಕೆ ಬರಲಾಗಿದೆ. ಇದು 2020ರಲ್ಲಿ ಈ ಪ್ರದೇಶಗಳಲ್ಲಿ ಉದ್ಭವಿಸಿದ ಸೇನಾ ಸಂಘರ್ಷದ ಸಮಸ್ಯೆಗಳಿಗೆ ಪರಿಹಾರ ನೀಡಲಿದೆ. ನಾವು ಈ ಬಗ್ಗೆ ಮುಂದಿನ ಕ್ರಮಗಳನ್ನು ತೆಗೆದುಕೊಳ್ಳುತ್ತೇವೆ’ ಎಂದು ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಸ್ರಿ ಮಾಧ್ಯಮಗೋಷ್ಠಿಯಲ್ಲಿ ತಿಳಿಸಿದರು.
ಪೂರ್ವ ಲಡಾಖ್‌ನಲ್ಲಿ ಉಭಯ ದೇಶಗಳ ಸೇನೆಗಳ ನಡುವೆ ಉಂಟಾದ ಘರ್ಷಣೆಗೆ ಮುಂಚೆಯೇ ಇದ್ದ ಗಸ್ತು ಹಕ್ಕುಗಳ ಮರುಸ್ಥಾಪನೆಯನ್ನು ಈ ಒಪ್ಪಂದವು ಸುಗಮಗೊಳಿಸುತ್ತದೆಯೇ ಎಂಬುದು ತಕ್ಷಣಕ್ಕೆ ಸ್ಪಷ್ಟವಾಗಿಲ್ಲ.
ಗಡಿ ವಿವಾದ ಈವರೆಗೂ ಬಗೆಹರಿದಿಲ್ಲ: ಭಾರತ ಮತ್ತು ಚೀನಾದ ಸೇನೆಗಳು 2020ರ ಮೇನಿಂದ ಪೂರ್ವ ಲಡಾಖ್‌ನಲ್ಲಿ ಗಡಿ ಬಿಕ್ಕಟ್ಟಿನಲ್ಲಿ ಸಿಲುಕಿವೆ. ಗಡಿಯಲ್ಲಿ ಉದ್ವಿಗ್ನ ಪರಿಸ್ಥಿತಿ ಉಂಟಾಗಿದ್ದ ಹಲವು ಸ್ಥಳಗಳಿಂದ ಎರಡೂ ಕಡೆಯವರು ಸೇನೆಗಳನ್ನು ಹಿಂತೆಗೆದುಕೊಂಡಿದ್ದರೂ ವಿವಾದ ಈವರೆಗೂ ಬಗೆಹರಿದಿಲ್ಲ.
2020ರ ಜೂನ್‌ನಲ್ಲಿ ಗಾಲ್ವಾನ್ ಕಣಿವೆಯಲ್ಲಿ ಎರಡೂ ಸೇನೆಗಳ ನಡುವೆ ನಡೆದ ಭೀಕರ ಘರ್ಷಣೆಯ ನಂತರ ಉಭಯ ರಾಷ್ಟ್ರಗಳ ನಡುವಿನ ಸಂಬಂಧ ತೀವ್ರ ಹದಗೆಟ್ಟಿತ್ತು. ಇದು ದಶಕಗಳಲ್ಲಿ ಉಭಯತ್ರರ ನಡುವಿನ ಅತ್ಯಂತ ಗಂಭೀರ ಸೇನಾ ಸಂಘರ್ಷವಾಗಿ ಗುರುತಿಸಿಕೊಂಡಿದೆ.
ಬಿಕ್ಕಟ್ಟು ಪ್ರಾರಂಭವಾದಾಗಿನಿಂದ ನಡೆದಿರುವ ಎಲ್ಲ ಮಾತುಕತೆಗಳಲ್ಲಿ, ಭಾರತವು ಪೀಪಲ್ಸ್ ಲಿಬರೇಶನ್ ಆರ್ಮಿ (ಪಿಎಲ್‌ಎ) ಅನ್ನು ಡೆಪ್ಸಾಂಗ್ ಮತ್ತು ಡೆಮ್‌ಚೋಕ್ ಪ್ರದೇಶಗಳಿಂದ ಸಂಪೂರ್ಣ ಹಿಂತೆಗೆದುಕೊಳ್ಳುವಂತೆ ಒತ್ತಾಯಿಸುತ್ತಾ ಬಂದಿದೆ. ಗಡಿಯಲ್ಲಿ ಶಾಂತಿ ನೆಲೆಸದಿದ್ದರೆ ಚೀನಾ ಜತೆಗಿನ ಬಾಂಧವ್ಯ ಸಹಜ ಸ್ಥಿತಿಗೆ ಮರಳಲು ಸಾಧ್ಯವಿಲ್ಲ ಎಂದು ಭಾರತ ಪ್ರತಿಪಾದಿಸಿದೆ.
‘ಮಾತುಕತೆಗಳು ನಡೆಯುತ್ತಿವೆ. ಚೀನಾ ಜತೆಗಿನ ಗಡಿ ವಿವಾದದ ಸಮಸ್ಯೆಗಳಿಗೆ ಶೇ 75ರಷ್ಟು ಪರಿಹಾರ ಸಿಕ್ಕಿದೆ. ಆದರೆ, ಇದಕ್ಕಿಂತಲೂ ಅದು ತನ್ನ ಸೇನಾ ಬಲ ಹೆಚ್ಚಿಸಿಕೊಳ್ಳುತ್ತಿರುವುದು ಬಹುದೊಡ್ಡ ಸಮಸ್ಯೆಯಾಗಿದೆ’ ಎಂದು ವಿದೇಶಾಂಗ ಸಚಿವ ಎಸ್. ಜೈಶಂಕರ್ ಕಳೆದ ತಿಂಗಳಷ್ಟೇ ಹೇಳಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.