ADVERTISEMENT

ಭಾರತ–ಚೀನಾ ಸೇನೆಗಳ ಸಂಘರ್ಷದ ಬಗ್ಗೆ ಪ್ರಧಾನಿ ಹೇಳಿಕೆ ನೀಡಲಿ: ಕಾಂಗ್ರೆಸ್ ಒತ್ತಾಯ

ಪಿಟಿಐ
Published 13 ಡಿಸೆಂಬರ್ 2022, 5:44 IST
Last Updated 13 ಡಿಸೆಂಬರ್ 2022, 5:44 IST
   

ನವದೆಹಲಿ:ಅರುಣಾಚಲ ಪ್ರದೇಶದಲ್ಲಿನ ತವಾಂಗ್‌ ವಲಯದ ವಾಸ್ತವ ನಿಯಂತ್ರಣ ರೇಖೆಯ (ಎಲ್‌ಎಸಿ) ಬಳಿ ಭಾರತ ಮತ್ತು ಚೀನಾ ಪಡೆಗಳು ಈಚೆಗೆ ನಡೆಸಿರುವ ಸಂಘರ್ಷದ ವಿಚಾರವಾಗಿ ಮಂಗಳವಾರ ಸಂಸತ್‌ ಅಧಿವೇಶನದಲ್ಲಿ ಚರ್ಚೆ ನಡೆಸಲು ಕಾಂಗ್ರೆಸ್‌ ಸಿದ್ಧತೆ ನಡೆಸಿದೆ.

ಸಂಘರ್ಷಕ್ಕೆ ಸಂಬಂಧಿಸಿದಂತೆ ಗಡಿಯಲ್ಲಿನ ಪರಿಸ್ಥಿತಿ ಕುರಿತಂತೆ ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿಕೆ ನೀಡಬೇಕೆಂದು ಕಾಂಗ್ರೆಸ್‌ ಸಂಸದರು ಒತ್ತಾಯಿಸಲಿದ್ದಾರೆ.

ಈ ಸಂಬಂಧ ಚರ್ಚೆಗೆ ಅನುಮತಿ ನೀಡುವಂತೆ ರಾಜ್ಯಸಭೆಗೆ ಹಾಗೂ ಲೋಕಸಭೆಗೆ ಕಾಂಗ್ರೆಸ್ ಸಂಸದರು ನಿಲುವಳಿ ಸೂಚನೆ ನೀಡಿದ್ದಾರೆ.

ADVERTISEMENT

ಭಾರತದ ಭೂಪ್ರದೇಶದಲ್ಲಿ ಚೀನಾವು ಲಜ್ಜೆಗೇಡಿ ಅತಿಕ್ರಮಣ ನಡೆಸುತ್ತಿದೆ. ತವಾಂಗ್‌ ವಲಯದಲ್ಲಿ ಪ್ರಚೋದನೆ ನೀಡುತ್ತಿದೆ. ಈ ವಿಚಾರದ ಬಗ್ಗೆ ತುರ್ತಾಗಿ ಚರ್ಚಿಸಬೇಕಿದೆ ಎಂದು ಕಾಂಗ್ರೆಸ್‌ ರಾಜ್ಯಸಭೆ ಸದಸ್ಯ ರಣದೀಪ್‌ ಸುರ್ಜೇವಾಲಾ ತಿಳಿಸಿದ್ದಾರೆ. ಜೊತೆಗೆ ಪ್ರಧಾನಿ ನರೇಂದ್ರ ಮೋದಿ ಮತ್ತು ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಅವರು ಈ ಬಗ್ಗೆ ಹೇಳಿಕೆ ನೀಡಬೇಕು ಮತ್ತು ಸಂಸತ್ತಿನಲ್ಲಿ ಚರ್ಚಿಸಬೇಕು ಎಂದು ಆಗ್ರಹಿಸಿದ್ದಾರೆ.

ಚೀನಾದ ಅತಿಕ್ರಮಣಕ್ಕೆ ಸಂಬಂಧಿಸಿದ ವರದಿಗಳು ರಾಷ್ಟ್ರೀಯ ಭದ್ರತೆ ಮತ್ತು ಪ್ರಾದೇಶಿಕ ಸಮಗ್ರತೆಗೆ ಬೆದರಿಕೆಯನ್ನುಂಟು ಮಾಡುತ್ತಿವೆ. ಈ ಬಗ್ಗೆ ಸದನ ಹಾಗೂ ದೇಶದ ಜನರಿಗೆ ಮಾಹಿತಿ ನೀಡುವ ಅಗತ್ಯವಿದೆ. ಇದಕ್ಕಾಗಿ ದಿನದ ಮಟ್ಟಿಗೆ ಸದನದ ಉಳಿದೆಲ್ಲ ವ್ಯವಹಾರಗಳನ್ನು ಸ್ಥಗಿತಗೊಳಿಸಬೇಕು ಎಂದಿದ್ದಾರೆ.

'ಸಾರ್ವಜನಿಕ ಹಿತಾಸಕ್ತಿಯ ದೃಷ್ಟಿಯಿಂದ ಪ್ರಧಾನ ಮಂತ್ರಿಯವರು ಮತ್ತು ರಕ್ಷಣಾ ಸಚಿವರು,2020ರ ಏಪ್ರಿಲ್‌ನಿಂದ ಇಲ್ಲಿವರೆಗೆಎಲ್‌ಎಸಿ ಮೂಲಕ ಭಾರತದ ಭೂ ಪ್ರದೇಶದಲ್ಲಿ ಚೀನಾ ನಡೆಸಿರುವ ಅತಿಕ್ರಮಗಳ ಬಗ್ಗೆ ಸದನದಲ್ಲಿ ಹೇಳಿಕೆ ನೀಡಬೇಕು' ಎಂದು ಒತ್ತಾಯಿಸಿದ್ದಾರೆ.

ಭಾರತ ಮತ್ತು ಚೀನಾ ಪಡೆಗಳ ಸಂಘರ್ಷ ಗಂಭೀರವಾದದ್ದು ಎಂದು ಕಳವಳ ವ್ಯಕ್ತಪಡಿಸಿರುವ ಸಂಸದ ಮನೀಶ್‌ ತಿವಾರಿ, ಇದು ದೇಶದ ಸಾರ್ವಭೌಮತೆ ಮತ್ತು ಸ್ವಾತಂತ್ರ್ಯಕ್ಕೆ ಸಂಬಂಧಿಸಿದ ವಿಚಾರವಾಗಿರುವುದರಿಂದ ಒಟ್ಟಾರೆ ಗಡಿಯಲ್ಲಿನ ಪರಿಸ್ಥಿತಿ ಕುರಿತು ಸರ್ಕಾರವು ಮಾಹಿತಿ ನೀಡಬೇಕು. ಈ ವಿಚಾರದ ಬಗ್ಗೆ ಸದನದಲ್ಲಿ ಚರ್ಚೆ ನಡೆಯಬೇಕು ಎಂದಿದ್ದಾರೆ.

‘ತವಾಂಗ್‌ ವಲಯದಲ್ಲಿನ ಯಾಂಗ್‌ಟ್ಸೆ ಬಳಿ ಡಿಸೆಂಬರ್ 9ರಂದು ಚೀನಾದ ಸೈನಿಕರು ಎಲ್‌ಎಸಿಯನ್ನು ದಾಟಿ ಬಂದಿದ್ದರು. ಆದರೆ ಅಲ್ಲಿಯೇ ಇದ್ದ ನಮ್ಮ ಸೈನಿಕರು ಇದನ್ನು ಪ್ರತಿಭಟಿಸಿದರು. ಇದರಿಂದ ಎರಡೂ ಕಡೆಯ ಸೈನಿಕರ ಮಧ್ಯೆ ಸಂಘರ್ಷ ನಡೆಯಿತು. ಎರಡೂ ಕಡೆಯವರಿಗೆ ಸಣ್ಣ–ಪುಟ್ಟ ಗಾಯಗಳಾದವು’ ಎಂದು ಸೇನೆಯ ಪ್ರಕಟಣೆಯಲ್ಲಿ ತಿಳಿಸಿತ್ತು.

ಈ ವಿಚಾರವಾಗಿ ಸಂಸತ್ತಿನಲ್ಲಿ ಚರ್ಚೆಯಾಗಬೇಕು ಎಂದು ಕಾಂಗ್ರೆಸ್‌ನ ಮತ್ತಷ್ಟು ಸಂಸದರು ಒತ್ತಾಯಿಸಿದ್ದಾರೆ.

ಭಾರತ–ಚೀನಾ ಸೇನಾ ಸಂಘರ್ಷದ ಬಗ್ಗೆ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಅವರು ಲೋಕಸಭೆಯಲ್ಲಿ ಹೇಳಿಕೆ ನೀಡಲಿದ್ದಾರೆ ಎಂದು ಎಎನ್‌ಐ ಟ್ವೀಟ್ ಮಾಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.