ADVERTISEMENT

ಲಿಂಗತ್ವ ಸಮಾನತೆ: 127ನೇ ಸ್ಥಾನದಲ್ಲಿ ಭಾರತ

ಕಳೆದ ವರ್ಷಕ್ಕಿಂತ ಎಂಟು ಸ್ಥಾನಗಳಷ್ಟು ಸುಧಾರಣೆ

​ಪ್ರಜಾವಾಣಿ ವಾರ್ತೆ
Published 21 ಜೂನ್ 2023, 13:18 IST
Last Updated 21 ಜೂನ್ 2023, 13:18 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ನವದೆಹಲಿ(ಪಿಟಿಐ): ಜಾಗತಿಕ ಲಿಂಗತ್ವ ಸಮಾನತೆಗೆ ಸಂಬಂಧಿಸಿ ಪ್ರಸಕ್ತ ಸಾಲಿನಲ್ಲಿ ಭಾರತದ ಸ್ಥಾನದಲ್ಲಿ ಸುಧಾರಣೆ ಕಂಡುಬಂದಿದೆ. 146 ದೇಶಗಳ ಪೈಕಿ ಭಾರತವು 127ನೇ ಸ್ಥಾನದಲ್ಲಿದೆ. 

ಕಳೆದ ವರ್ಷ ಭಾರತ 135ನೇ ಸ್ಥಾನದಲ್ಲಿತ್ತು. ಈ ದೃಷ್ಟಿಯಿಂದ ಎಂಟು ಸ್ಥಾನಗಳಷ್ಟು ಸುಧಾರಣೆ ಕಂಡುಬಂದಿದೆ ಎಂದು ವಿಶ್ವ ಆರ್ಥಿಕ ವೇದಿಕೆ (ಡಬ್ಲ್ಯುಇಎಫ್‌) ಬಿಡುಗಡೆ ಮಾಡಿರುವ ವಾರ್ಷಿಕ ಲಿಂಗತ್ವ ಅಸಮಾನತೆ ಸೂಚ್ಯಂಕ ವರದಿ–2023ರಲ್ಲಿ ಹೇಳಲಾಗಿದೆ.

‘ತನ್ನ ಸ್ಥಾನಕ್ಕೆ ಸಂಬಂಧಿಸಿ, ಕಳೆದ ಸಾಲಿಗೆ ಹೋಲಿಸಿದರೆ ಭಾರತವು ಶೇ 1.4ರಷ್ಟು ಸುಧಾರಣೆ ದಾಖಲಿಸಿದೆ. ಅದು 2020ರಲ್ಲಿ ಇದ್ದ ಅಸಮಾನತೆ ಸೂಚ್ಯಂಕದ ಭಾಗಶಃದಷ್ಟು ಸ್ಥಾನಕ್ಕೆ ಮರಳಿದೆ’ ಎಂದು ವರದಿಯಲ್ಲಿ ವಿವರಿಸಲಾಗಿದೆ.

ADVERTISEMENT

‘ಶಿಕ್ಷಣದ ಎಲ್ಲ ಹಂತಗಳಲ್ಲಿ ಭಾರತವು ಸಮಾನತೆ ಸಾಧಿಸಿದೆ. ಒಟ್ಟಾರೆ ಶೇ 64.3ರಷ್ಟು ಲಿಂಗತ್ವ ಅಸಮಾನತೆಯನ್ನು ಅಳಿಸಿ ಹಾಕುವಲ್ಲಿ ಯಶಸ್ವಿಯಾಗಿದೆ. ಆದರೆ, ಆರ್ಥಿಕತೆ ಮತ್ತು ಅವಕಾಶಕ್ಕೆ ಸಂಬಂಧಿಸಿ ಶೇ 36.7ರಷ್ಟು ಸಮಾನತೆ ಸಾಧಿಸಿದೆ’ ಎಂದು ವರದಿಯಲ್ಲಿ ಹೇಳಲಾಗಿದೆ.

ಇದೇ ವಿಚಾರದಲ್ಲಿ ಪಾಕಿಸ್ತಾನದ ಸ್ಥಾನ 142 ಇದ್ದರೆ, ಬಾಂಗ್ಲಾದೇಶ–59, ಚೀನಾ– 107, ನೇಪಾಳ–116, ಶ್ರೀಲಂಕಾ–115 ಹಾಗೂ ಭೂತಾನ್‌ 103ನೇ ಸ್ಥಾನದಲ್ಲಿವೆ.

ವರದಿಯ ಪ್ರಮುಖ ಅಂಶಗಳು

* ಭಾರತದಲ್ಲಿ ವೇತನಕ್ಕೆ ಸಂಬಂಧಿಸಿದ ಅಸಮಾನತೆ ಮುಂದುವರಿದಿದೆ

* ಕಳೆದ ವರ್ಷಕ್ಕೆ ಹೋಲಿಸಿದರೆ ಭಾರತದಲ್ಲಿ ಉನ್ನತ ಮತ್ತು ತಾಂತ್ರಿಕ ಹುದ್ದೆಗಳಲ್ಲಿ ಮಹಿಳೆಯರ ಪಾಲು ಕುಸಿದಿದೆ

* ರಾಜಕೀಯ ಸಮಾನತೆ ಪ್ರಮಾಣ ಶೇ 25.3ರಷ್ಟಿದ್ದರೆ, ಲಿಂಗಾನುಪತದಲ್ಲಿ ಶೇ 1.9ರಷ್ಟು ಸುಧಾರಣೆ ಕಂಡುಬಂದಿದೆ

* ಗರಿಷ್ಠ ಲಿಂಗತ್ವ ಸಮಾನತೆ ಹೊಂದಿದ ದೇಶ ಐಸ್‌ಲ್ಯಾಂಡ್

* ದಕ್ಷಿಣ ಏಷ್ಯಾ ರಾಷ್ಟ್ರಗಳು ಶೇ 63.4ರಷ್ಟು ಸಾಧನೆ ದಾಖಲಿಸಿವೆ

* ಜಾಗತಿಕ ಲಿಂಗತ್ವ ಸಮಾನತೆ ಸೂಚ್ಯಂಕವು ಕೋವಿಡ್‌ ಪೂರ್ವ ಮಟ್ಟ ತಲುಪಿದೆ

ಲಿಂಗತ್ವ ಸಮಾನತೆಯು ಕೋವಿಡ್‌ ಪಿಡುಗು ಪೂರ್ವದಲ್ಲಿದ್ದ ಮಟ್ಟಕ್ಕೆ ಮರಳುವ ಸೂಚನೆ ಇದೆ. ಆದರೆ ಜೀವನ ನಿರ್ವಹಣೆ ವೆಚ್ಚ ದುಡಿಮೆಯಲ್ಲಿನ ಅವ್ಯವಸ್ಥೆಯ ಭಾರವನ್ನು ಮಹಿಳೆಯೇ ಹೊರಬೇಕಾಗಿದೆ
ಸಾದಿಯಾ ಜಹೀದಿ ಡಬ್ಲ್ಯುಇಎಫ್‌ ವ್ಯವಸ್ಥಾಪಕ ನಿರ್ದೇಶಕಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.