ನವದೆಹಲಿ: ಲೇಖಕ ಸಲ್ಮಾನ್ ರಶ್ದಿ ಅವರ ಮೇಲೆ ನಡೆದ ದಾಳಿಯನ್ನು ಭಾರತ ಇದೇ ಮೊದಲ ಬಾರಿಗೆ ಗುರುವಾರ ಖಂಡಿಸಿದೆ. ‘ಇದೊಂದು ಭಯಾನಕ ದಾಳಿ. ಅವರು ಶೀಘ್ರವಾಗಿ ಚೇತರಿಸಿಕೊಳ್ಳಲಿ’ ಎಂದು ಹಾರೈಸಿದೆ.
ಆಗಸ್ಟ್ 12 ರಂದು ನ್ಯೂಯಾರ್ಕ್‌ನ ‘ಷಟೌಕ್ವಾ ಇನ್‌ಸ್ಟಿಟ್ಯೂಷನ್’ನಲ್ಲಿ ಆಯೋಜನೆಗೊಂಡಿದ್ದ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಲು ಹೋಗಿದ್ದ ರಶ್ದಿ ಅವರ ಮೇಲೆ ಹಾದಿ ಮಟರ್ ಎಂಬಾತ ಚೂರಿಯಿಂದ ಭೀಕರವಾಗಿ ದಾಳಿ ನಡೆಸಿದ್ದ.
‘ಭಾರತ ಯಾವಾಗಲೂ ಹಿಂಸೆ ಮತ್ತು ಉಗ್ರವಾದದ ವಿರುದ್ಧ ನಿಲ್ಲುತ್ತದೆ. ನಾವು ಸಲ್ಮಾನ್ ರಶ್ದಿ ಅವರ ಮೇಲಿನ ಭೀಕರ ದಾಳಿಯನ್ನು ಖಂಡಿಸುತ್ತೇವೆ. ಅವರು ಶೀಘ್ರವಾಗಿ ಚೇತರಿಸಿಕೊಳ್ಳಬೇಕೆಂದು ನಾವು ಬಯಸುತ್ತೇವೆ’ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ ತಮ್ಮ ಮಾಧ್ಯಮಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಮುಂಬೈ ಮೂಲದ ವಿವಾದಿತ ಲೇಖಕ ಸಲ್ಮಾನ್ ರಶ್ದಿ ಅವರ ಮೇಲಿನ ದಾಳಿಯನ್ನು ಅಮೆರಿಕ ಸೇರಿದಂತೆ ಹಲವು ದೇಶಗಳು, ವ್ಯಕ್ತಿಗಳು ಖಂಡಿಸಿದ್ದಾರೆ.
‘ರಶ್ದಿ ಅವರ ಮೇಲಿನ ದಾಳಿಯಲ್ಲಿ ಇರಾನ್ ಕೈವಾಡ ಇಲ್ಲ’ ಎಂದು ಇರಾನ್ ವಿದೇಶಾಂಗ ಸಚಿವಾಲಯದ ವಕ್ತಾರ ನಾಸಿರ್ ಖನಾನಿ ಇತ್ತೀಚೆಗೆ ಸ್ಪಷ್ಟಪಡಿಸಿದ್ದಾರೆ.
ರಶ್ದಿ ಅವರ ಹತ್ಯೆ ಮಾಡುವಂತೆ ಇರಾನ್‌ನ ಸರ್ವೋಚ್ಚ ನಾಯಕ ಅಯಾತ್ ಉಲ್ಲಾ ಖೊಮೇನಿ ಫತ್ವಾ ಹೊರಡಿಸಿದ್ದರು. ರಶ್ದಿ ಅವರ ‘ದಿ ಸಟಾನಿಕ್ ವರ್ಸಸ್’ ಕಾದಂಬರಿ ಪ್ರಕಟವಾದ ಬಳಿಕ ಖೊಮೇನಿ ಈ ಘೋಷಣೆ ಮಾಡಿದ್ದರು. ಈ ಕಾರಣದಿಂದಾಗಿಯೇ ರಶ್ದಿ ಅವರ ಮೇಲಿನ ದಾಳಿಯಲ್ಲಿ ಇರಾನ್ ಕೈವಾಡ ಇರಬಹುದು ಎಂದು ಅನುಮಾನಿಸಲಾಗುತ್ತಿದೆ.
ಇವುಗಳನ್ನೂ ಓದಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.