ADVERTISEMENT

ದೇಶದಲ್ಲಿ ಜುಲೈ ತಿಂಗಳಲ್ಲಿ ವಾಡಿಕೆಗಿಂತ ಅಧಿಕ ಮಳೆ ಸಾಧ್ಯತೆ

ಪಿಟಿಐ
Published 1 ಜುಲೈ 2024, 15:35 IST
Last Updated 1 ಜುಲೈ 2024, 15:35 IST
<div class="paragraphs"><p>ಪ್ರಾತಿನಿಧಿಕ ಚಿತ್ರ</p></div>

ಪ್ರಾತಿನಿಧಿಕ ಚಿತ್ರ

   

ನವದೆಹಲಿ: ಈಶಾನ್ಯ ಭಾರತದ ಕೆಲವು ಪ್ರದೇಶಗಳನ್ನು ಹೊರತುಪಡಿಸಿ ದೇಶದಲ್ಲಿ ಜುಲೈ ತಿಂಗಳಲ್ಲಿ ವಾಡಿಕೆಗಿಂತ ಹೆಚ್ಚಿನ ಮಳೆ ನಿರೀಕ್ಷಿಸಲಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಸೋಮವಾರ ತಿಳಿಸಿದೆ.

ವರ್ಚುವಲ್‌ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಐಎಂಡಿ ಮುಖ್ಯಸ್ಥ ಮೃತ್ಯುಂಜಯ್‌ ಮಹಾಪಾತ್ರ, ‘ಜುಲೈನಲ್ಲಿ ಮಳೆಯ ದೀರ್ಘಾವಧಿ ಸರಾಸರಿ 28.04 ಸೆಂ.ಮೀ. ಇದೆ. ಈ ಬಾರಿ ಶೇ 106ರಷ್ಟು ಮಳೆ ಬೀಳುವುದಾಗಿ ಅಂದಾಜಿಸಲಾಗಿದೆ’ ಎಂದು ಹೇಳಿದರು.

ADVERTISEMENT

‘ಈಶಾನ್ಯ ಭಾರತ, ವಾಯವ್ಯ ಭಾಗದ ಕೆಲವು ಪ್ರದೇಶಗಳು, ಪೂರ್ವ ಮತ್ತು ಆಗ್ನೇಯ ಭಾಗದ ಕೆಲವು ಪ್ರದೇಶಗಳು ಹೊರತುಪಡಿಸಿ ದೇಶದಾದ್ಯಂತ ವಾಡಿಕೆಯಷ್ಟು ಹಾಗೂ ವಾಡಿಕೆಗಿಂತ ಅಧಿಕ ಮಳೆ ಬೀಳಲಿದೆ’ ಎಂದು ಮಾಹಿತಿ ನೀಡಿದರು.

ಜುಲೈ ತಿಂಗಳಲ್ಲಿ ಪಶ್ಚಿಮ ಕರಾವಳಿ ಹೊರತುಪಡಿಸಿ ವಾಯವ್ಯ ಭಾರತ ಮತ್ತು ದಕ್ಷಿಣ ಭಾರತದ ಬಹುತೇಕ ಭಾಗಗಳಲ್ಲಿ ಗರಿಷ್ಠ ತಾಪಮಾನವು ವಾಡಿಕೆಯಷ್ಟು ಹಾಗೂ ವಾಡಿಕೆಗಿಂತ ತುಸು ಕಡಿಮೆ ಇರಲಿದೆ. ಕೇಂದ್ರ ಭಾರತ, ಪೂರ್ವ ಮತ್ತು ಈಶಾನ್ಯ ಭಾರತ ಹಾಗೂ ಪಶ್ಚಿಮ ಕರಾವಳಿ ಪ್ರದೇಶದಲ್ಲಿ ಗರಿಷ್ಠ ತಾಪಮಾನ ವಾಡಿಕೆಗಿಂತ ಹೆಚ್ಚು ಇರಲಿದೆ ಎಂದು ಐಎಂಡಿ ಅಂದಾಜಿಸಿದೆ. 

ವಾಯವ್ಯ ಭಾರತ, ಕೇಂದ್ರ ಭಾರತಕ್ಕೆ ಹೊಂದಿಕೊಂಡಿರುವ ಭಾಗಗಳು ಮತ್ತು ದಕ್ಷಿಣ ಭಾರತದ ಕೆಲವು ಪ್ರದೇಶಗಳನ್ನು ಹೊರತುಪಡಿಸಿ ದೇಶದ ಇತರೆಡೆ ಕನಿಷ್ಠ ತಾಪಮಾನ ವಾಡಿಕೆಗಿಂತ ಹೆಚ್ಚು ಇರಲಿದೆ. 

ವಾಯವ್ಯ ಭಾರತವು 1901ರ ಬಳಿಕದ ಅತ್ಯಂತ ‘ತಾಪಮಾನ’ದ ಜೂನ್‌ ತಿಂಗಳನ್ನು ಈ ಬಾರಿ ಕಂಡಿದೆ. ಕಳೆದ ತಿಂಗಳು ಸರಾಸರಿ ತಾಪಮಾನ 31.73 ಡಿಗ್ರಿ ಸೆಲ್ಸಿಯಸ್‌ ದಾಖಲಾಗಿದೆ. ಈ ಭಾಗದಲ್ಲಿ ಸರಾಸರಿ ಗರಿಷ್ಠ ತಾಪಮಾನ 38.02 ಡಿಗ್ರಿ ಸೆಲ್ಸಿಯಸ್‌ ದಾಖಲಾಗಿದ್ದು, ಇದು ವಾಡಿಕೆಗಿಂತ 1.96 ಡಿಗ್ರಿ ಸೆಲ್ಸಿಯಸ್‌ನಷ್ಟು ಅಧಿಕ ಎನಿಸಿದೆ.

ಜೂನ್‌ನಲ್ಲಿ ಶೇ 11ರಷ್ಟು ಮಳೆ ಕೊರತೆ 

ದೇಶದಲ್ಲಿ ಜೂನ್‌ ತಿಂಗಳಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗಿದೆ. ಮಳೆ ಕೊರತೆಯು ಶೇ 11ರಷ್ಟಿದ್ದು ಐದು ವರ್ಷಗಳಲ್ಲೇ ಇದು ಅಧಿಕ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಜೂನ್‌ ತಿಂಗಳ ವಾಡಿಕೆ ಮಳೆ 165.3 ಮಿ.ಮೀ. ಆಗಿದ್ದು ಈ ಬಾರಿ ಸರಾಸರಿ 147.2 ಮಿ.ಮೀ. ಮಳೆಯಾಗಿದೆ. ವಾಯವ್ಯ ಭಾರತದಲ್ಲಿ ಶೇ 33 ಕೇಂದ್ರ ಭಾರತದಲ್ಲಿ ಶೇ 14 ಹಾಗೂ ಪೂರ್ವ ಮತ್ತು ಈಶಾನ್ಯ ಭಾಗದಲ್ಲಿ ಶೇ 13ರಷ್ಟು ಮಳೆ ಕೊರತೆ ಉಂಟಾಗಿದೆ.

ದಕ್ಷಿಣ ಭಾರತದಲ್ಲಿ ಮಾತ್ರ ವಾಡಿಕೆಗಿಂತ ಶೇ 14ರಷ್ಟು ಅಧಿಕ ಮಳೆ ಬಿದ್ದಿದೆ.  ಈ ಬಾರಿ ನೈರುತ್ಯ ಮುಂಗಾರು ಮೇ 30 ರಂದು ಕೇರಳ ಮತ್ತು ಈಶಾನ್ಯ ಭಾರತವನ್ನು ಏಕಕಾಲಕ್ಕೆ ಪ್ರವೇಶಿಸಿತ್ತು. ಮಹಾರಾಷ್ಟ್ರದವರೆಗೆ ಸಹಜ ರೀತಿಯಲ್ಲಿ ಪ್ರಗತಿ ಸಾಧಿಸಿದ್ದ ಮುಂಗಾರು ಆ ಬಳಿಕ ವೇಗ ಕಳೆದುಕೊಂಡಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.