ನವದೆಹಲಿ: ಖಾಲಿಸ್ತಾನ ಉಗ್ರ ಹರ್ದೀಪ್ ಸಿಂಗ್ ನಿಜ್ಜರ್ ಸ್ಮರಣಾರ್ಥ ‘ಒಂದು ನಿಮಿಷ ಮೌನ’ ಆಚರಣೆ ಮಾಡಿದ ಕೆನಡಾ ಸಂಸತ್‌ನ ನಡೆಯನ್ನು ಭಾರತ ಶುಕ್ರವಾರ ಖಂಡಿಸಿದೆ.
‘ಉಗ್ರವಾದಕ್ಕೆ ರಾಜಕೀಯ ನೆಲೆ ಕಲ್ಪಿಸುವುದು ಹಾಗೂ ಹಿಂಸಾಚಾರಕ್ಕೆ ಕುಮ್ಮಕ್ಕು ನೀಡುವ ಯಾವುದೇ ರೀತಿಯ ನಡೆಗಳನ್ನು ನಾವು ಸಹಜವಾಗಿಯೇ ವಿರೋಧಿಸುತ್ತೇವೆ’ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ವಕ್ತಾರ ರಣಧೀರ ಜೈಸ್ವಾಲ್ ಹೇಳಿದ್ದಾರೆ.
ಅಸಾಧಾರಣ ನಡೆ ಎಂಬಂತೆ, ನಿಜ್ಜರ್ ಸ್ಮರಣಾರ್ಥ ಕೆನಡಾ ಸಂಸತ್‌ನಲ್ಲಿ ಈಚೆಗೆ ಒಂದು ನಿಮಿಷ ಮೌನ ಆಚರಿಸಲಾಗಿತ್ತು.
ಕಳೆದ ವರ್ಷ ಜೂನ್‌ನಲ್ಲಿ ಬ್ರಿಟಿಷ್ ಕೊಲಂಬಿಯಾದ ಸರ‍್ರೆ ಎಂಬಲ್ಲಿ ನಿಜ್ಜರ್‌ನನ್ನು ಹತ್ಯೆ ಮಾಡಲಾಗಿತ್ತು.
‘ನಿಜ್ಜರ್ ಹತ್ಯೆಯಲ್ಲಿ ಭಾರತೀಯ ಏಜೆಂಟರ ಕೈವಾಡ ಇರುವ ಶಂಕೆ ಇದೆ’ ಎಂದು ಕೆನಡಾ ಪ್ರಧಾನಿ ಜಸ್ಟಿನ್ ಟ್ರೂಡೊ ಆರೋಪಿಸಿದ್ದರು.
ಈ ಆರೋಪಗಳನ್ನು ತಳ್ಳಿ ಹಾಕಿದ್ದ ಭಾರತ, ಇದು ‘ಅಸಂಬದ್ಧ’ ಆರೋಪ ಎಂದು ಹೇಳಿತ್ತು. ಇದಾದ ಬಳಿಕ ಭಾರತ ಮತ್ತು ಕೆನಡಾ ನಡುವಿನ ಸಂಬಂಧದಲ್ಲಿ ಬಿಕ್ಕಟ್ಟು ತಲೆದೋರಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.