ನವದೆಹಲಿ: ಇಸ್ಲಾಮಿಕ್ ಸಹಕಾರ ಸಂಘಟನೆಯ (ಒಐಸಿ) ನಿಯೋಗವು ಪಾಕ್ ಆಕ್ರಮಿತ ಕಾಶ್ಮೀರಕ್ಕೆ (ಪಿಒಕೆ) ಭೇಟಿ ನೀಡಿರುವುದಕ್ಕೆ ಭಾರತ ಆಕ್ಷೇಪ ವ್ಯಕ್ತಪಡಿಸಿದೆ. ಒಐಸಿಯ ಈ ನಡೆಯು ನಮ್ಮ ಆಂತರಿಕ ವಿಚಾರದ ಮೇಲಿನ ಹಸ್ತಕ್ಷೇಪ ಎಂದು ಭಾರತ ಹೇಳಿದೆ.
ಒಐಸಿ ನಿಯೋಗವು ಬುಧವಾರ ಗಡಿ ನಿಯಂತ್ರಣ ರೇಖೆಗೆ (ಎಲ್‌ಒಸಿ) ಭೇಟಿ ನೀಡಿತ್ತು. ಅಲ್ಲಿ ಪಾಕಿಸ್ತಾನ ಸೇನಾಧಿಕಾರಿಗಳು ನಿಯೋಗಕ್ಕೆ ಮಾಹಿತಿ ನೀಡಿದ್ದರು.
‘ಜಮ್ಮು–ಕಾಶ್ಮೀರದ ಪಾಕ್ ಆಕ್ರಮಿತ ಪ್ರದೇಶಗಳಿಗೆ ಈ ರೀತಿ ಭೇಟಿ ನೀಡುವುದು ನಮ್ಮ ಆಂತರಿಕ ವಿಚಾರದಲ್ಲಿ ನಡೆಸುವ ಹಸ್ತಕ್ಷೇಪ ಎಂಬುದಾಗಿ ಈ ಹಿಂದೆಯೂ ಅನೇಕ ಬಾರಿ ನಾವು ಹೇಳಿದ್ದೇವೆ’ ಎಂದು ವಿದೇಶಾಂಗ ಇಲಾಖೆಯ ವಕ್ತಾರ ಅರಿಂದಮ್ ಬಾಗ್ಚಿ ಹೇಳಿದ್ದಾರೆ.
ಈ ಹಿಂದೆ ಜಮ್ಮು–ಕಾಶ್ಮೀರದ ವಿಚಾರದಲ್ಲಿ ಒಐಸಿ ಹೇಳಿಕೆ ನೀಡಿದ್ದಾಗಲೂ ಭಾರತ ಅದನ್ನು ಖಂಡಿಸಿತ್ತು. ಒಐಸಿ ನಿಯೋಗವು ಕಳೆದ ಭಾನುವಾರದಿಂದ ಒಂದು ವಾರ ಪಾಕಿಸ್ತಾನ ಪ್ರವಾಸ ಹಮ್ಮಿಕೊಂಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.