ನವದೆಹಲಿ: ‘26/11ರ ಮುಂಬೈ ಭಯೋತ್ಪಾದಕ ದಾಳಿಯು ಭಾರತ ಎದುರಿಸಿದ ಅತ್ಯಂತ ಭಯಾನಕ ಭಯೋತ್ಪಾದಕ ದಾಳಿಯಾಗಿದೆ. ಇದು ದೇಶವನ್ನು ಬೆಚ್ಚಿಬೀಳಿಸಿತು. ಈ ಘಟನೆಯ ನಂತರ ದೇಶವು ತನ್ನೆಲ್ಲ ಸಾಮರ್ಥ್ಯದಿಂದ ಚೇತರಿಸಿಕೊಂಡಿದ್ದು ಮಾತ್ರವಲ್ಲದೆ, ಭಯೋತ್ಪಾದನೆಯನ್ನು ಸಮರ್ಥವಾಗಿ ಹತ್ತಿಕ್ಕುತ್ತಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಭಾನುವಾರ ಹೇಳಿದ್ದಾರೆ.
2008ರ ಮುಂಬೈ ದಾಳಿಯ ವರ್ಷಾಚರಣೆ ವೇಳೆ ‘ಮನ್ ಕಿ ಬಾತ್’ ತಿಂಗಳ ರೇಡಿಯೊ ಕಾರ್ಯಕ್ರಮದಲ್ಲಿ ಅವರು ಮುಂಬೈ ದಾಳಿಯಲ್ಲಿ ಪ್ರಾಣ ಕಳೆದುಕೊಂಡ ಎಲ್ಲರಿಗೂ ಶ್ರದ್ಧಾಂಜಲಿ ಸಲ್ಲಿಸಿದರು.
‘ನಾವು ನವೆಂಬರ್ 26 ಅನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ. ಈ ದಿನ ದೇಶದಲ್ಲಿ ಅತ್ಯಂತ ಘೋರ ಭಯೋತ್ಪಾದಕ ದಾಳಿ ನಡೆಯಿತು. ಭಯೋತ್ಪಾದಕರು ಮುಂಬೈ ಮತ್ತು ಇಡೀ ದೇಶವನ್ನು ಬೆಚ್ಚಿಬೀಳಿಸಿದರು. ಆದರೆ, ಆ ದಾಳಿಯಿಂದ ನಾವು ಚೇತರಿಸಿಕೊಂಡಿರುವುದು ದೇಶದ ಸಾಮರ್ಥ್ಯವನ್ನು ತೋರಿಸುತ್ತದೆ. ಭಯೋತ್ಪಾದನೆಯನ್ನು ಸಂಪೂರ್ಣ ಧೈರ್ಯದಿಂದ ಹತ್ತಿಕ್ಕುತ್ತಿದೆ’ ಎಂದು ಮೋದಿ ಹೇಳಿದರು.
ಪಾಕಿಸ್ತಾನದಿಂದ ಸಮುದ್ರ ಮಾರ್ಗವಾಗಿ ನುಸುಳಿದ ಲಷ್ಕರ್-ಎ-ತಯಬಾ ಸಂಘಟನೆಯ 10 ಮಂದಿ ಭಯೋತ್ಪಾದಕರು ಮುಂಬೈನಲ್ಲಿ ಗುಂಡಿನ ದಾಳಿ ನಡೆಸಿ, 18 ಮಂದಿ ಭದ್ರತಾ ಸಿಬ್ಬಂದಿ ಸೇರಿ 166 ಜನರನ್ನು ಕೊಂದಿದ್ದರು. ಹಲವು ಮಂದಿ ಗಾಯಗೊಂಡಿದ್ದರು.
ನ.26 ಮತ್ತೊಂದು ಕಾರಣಕ್ಕಾಗಿ ಮುಖ್ಯ:
1949ರ ನವೆಂಬರ್ 26ರಂದು ಸಂವಿಧಾನ ರಚನಾ ಸಭೆಯು ಭಾರತದ ಸಂವಿಧಾನವನ್ನು ಅಂಗೀಕರಿಸಿತು. ಹಾಗಾಗಿ, ಈ ದಿನ ನಮಗೆ ಮತ್ತೊಂದು ಕಾರಣಕ್ಕಾಗಿ ಮುಖ್ಯವಾಗಿದೆ ಎಂದು ಪ್ರಧಾನಿ ಗಮನ ಸೆಳೆದರು.
ಸಂವಿಧಾನವನ್ನು 1950ರಲ್ಲಿ ಅದನ್ನು ಅಳವಡಿಸಿಕೊಂಡ ನಂತರ, 106 ಬಾರಿ ತಿದ್ದುಪಡಿ ಮಾಡಲಾಗಿದೆ. ಆದರೆ, ಮೊದಲ ತಿದ್ದುಪಡಿಯು ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯ ಮೊಟಕುಗೊಳಿಸುವ ಉದ್ದೇಶದ್ದಾಗಿದ್ದುದು ದುರದೃಷ್ಟಕರ ಎಂದೂ ಮೋದಿ ಹೇಳಿದರು.
ಸಂವಿಧಾನ ಸಭೆಗೆ ನಾಮನಿರ್ದೇಶನಗೊಂಡವರಲ್ಲಿ 15 ಮಹಿಳೆಯರಿದ್ದರು. ಮಹಿಳೆಯರಿಗೆ ಮತದಾನದ ಹಕ್ಕು ನೀಡಿದ ಕೆಲವೇ ದೇಶಗಳಲ್ಲಿ ಭಾರತವೂ ಸೇರಿದೆ. ಲೋಕಸಭೆ ಮತ್ತು ವಿಧಾನಸಭೆಗಳಲ್ಲಿ ಮಹಿಳಾ ಕೋಟಾ ಖಾತರಿಗಾಗಿ ಮಹಿಳಾ ಮೀಸಲಾತಿ ಮಸೂದೆ ಅಂಗೀಕರಿಸಿರುವುದು, ಸಂವಿಧಾನದ ನಿರ್ಮಾತೃಗಳ ದೂರದೃಷ್ಟಿಗೆ ಅನುಗುಣವಾಗಿದೆ. ಇದು ಆತ್ಮತೃಪ್ತಿಯ ವಿಷಯ ಕೂಡ ಹೌದು. ಇದು ಅಭಿವೃದ್ಧಿ ಹೊಂದಿದ ಭಾರತದ ಸಂಕಲ್ಪವನ್ನು ಸಾಧಿಸುವ ವೇಗಕ್ಕೂ ಪೂರಕವಾಗಿದೆ ಎಂದು ಹೇಳಿದರು
ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರ ನವೆಂಬರ್ 26 ಅನ್ನು ಸಂವಿಧಾನ ದಿನವಾಗಿ ಆಚರಿಸಲು 2015ರಲ್ಲಿ ಘೋಷಣೆ ಮಾಡಿತು.
‘ವೋಕಲ್ ಫಾರ್ ಲೋಕಲ್’ ಯಶಸ್ಸು, ಅಭಿವೃದ್ಧಿ ಹೊಂದಿದ ಮತ್ತು ಸಮೃದ್ಧ ಭಾರತಕ್ಕೆ ಬಾಗಿಲು ತೆರೆಯುತ್ತಿದೆ ಎಂದು ಮೋದಿ ಹೇಳಿದರು.
ಈ ಅಭಿಯಾನಕ್ಕೆ ಸಿಗುತ್ತಿರುವ ಸ್ಪಂದನೆಯನ್ನು ಪ್ರಶಂಸಿಸಿದ ಅವರು, ಭಾರತದಲ್ಲಿ ತಯಾರಿಸಿದ ಉತ್ಪನ್ನಗಳನ್ನು ಖರೀದಿಸಲು ಜನರಲ್ಲಿ ಹೆಚ್ಚಿನ ಉತ್ಸಾಹ ಕಂಡುಬಂದಿದೆ. ಇತ್ತೀಚಿನ ಹಬ್ಬಗಳಲ್ಲಿ ಈ ಅಭಿಯಾನದಡಿ ₹4 ಲಕ್ಷ ಕೋಟಿಯ ವ್ಯವಹಾರ ನಡೆದಿದೆ ಎಂದರು.
ಮನ್ ಕಿ ಬಾತ್‌ನಲ್ಲಿ ಮೋದಿ ಹೇಳಿದ್ದು...
* ಕೆಲವು ಕುಟುಂಬಗಳು ವಿದೇಶದಲ್ಲಿ ಮದುವೆಗಳನ್ನು ಆಯೋಜಿಸುವ ಪದ್ಧತಿ ರೂಢಿಸಿಕೊಂಡಿವೆ. ಇದು ಸರಿಯಲ್ಲ, ಇಂತಹ ಆಚರಣೆಗಳನ್ನು ದೇಶದೊಳಗೆ ನಡೆಸಿದರೆ ದೇಶದ ಹಣವು ತನ್ನ ಗಡಿಯೊಳಗೆ ಉಳಿಯುತ್ತದೆ
* ಭಾರತೀಯ ಪೇಟೆಂಟ್‌ಗಳ ಅನುಮೋದನೆಯು 10 ವರ್ಷಗಳಲ್ಲಿ 10 ಪಟ್ಟು ಏರಿದೆ. ತಮ್ಮ ಸರ್ಕಾರ ತಂದ ಆಡಳಿತಾತ್ಮಕ ಮತ್ತು ಕಾನೂನು ಸುಧಾರಣೆಗಳು ವಿವಿಧ ಕ್ಷೇತ್ರಗಳಲ್ಲಿ ಆವಿಷ್ಕಾರಕ್ಕೆ ಹೆಚ್ಚಿನ ಯುವಕರಿಗೆ ಉತ್ತೇಜನವನ್ನು ನೀಡಿದೆ
* ಪ್ರತಿಯೊಬ್ಬರೂ ಒಟ್ಟಾಗಿ ತಮ್ಮ ಕರ್ತವ್ಯಗಳಿಗೆ ಆದ್ಯತೆ ನೀಡಿ, ದೇಶವನ್ನು ಅಭಿವೃದ್ಧಿಪಡಿಸುವ ಸಂಕಲ್ಪವನ್ನು ಖಂಡಿತವಾಗಿ ಸಾಧಿಸಲಿದ್ದಾರೆ
* ಸದ್ಯ, ಸಾಮಾಜಿಕ ಮಾಧ್ಯಮಗಳ ಶಕ್ತಿ ಅಪಾರವಾಗಿದೆ. ತಂತ್ರಜ್ಞಾನ ಮತ್ತು ಮೊಬೈಲ್ ಪ್ರತಿ ಮನೆಗೂ ತಲುಪಿದೆ. ನಿಮ್ಮ ಸ್ಥಳೀಯ ಹಬ್ಬಗಳಿರಲಿ, ಉತ್ಪನ್ನಗಳಿರಲಿ, ಅವುಗಳನ್ನು ಜಾಗತಿಕಗೊಳಿಸಬಹುದು
* ಸರ್ಕಾರದ ‘ಅಮೃತ ಸರೋವರ’ ಅಭಿಯಾನದ ಭಾಗವಾಗಿ ದೇಶದಾದ್ಯಂತ 65,000ಕ್ಕೂ ಹೆಚ್ಚು ಕೊಳ ನಿರ್ಮಿಸಲಾಗಿದೆ. ಇದು ಮುಂಬರುವ ಪೀಳಿಗೆಗೆ ಪ್ರಯೋಜನ ನೀಡಲಿದೆ
* ನಗದು ವಹಿವಾಟು ಕ್ಷೀಣಿಸುತ್ತಿದೆ. ಒಂದು ತಿಂಗಳ ಕಾಲ ಯುಪಿಐ ಅಥವಾ ಇನ್ನಾವುದೇ ಡಿಜಿಟಲ್ ಮಾಧ್ಯಮದ ಮೂಲಕ ಮಾತ್ರ ಪಾವತಿಸಿ, ಒಂದು ತಿಂಗಳು ಮುಗಿದ ನಂತರ, ದಯವಿಟ್ಟು ನಿಮ್ಮ ಅನುಭವಗಳನ್ನು ನಿಮ್ಮ ಫೋಟೊ ಸಹಿತ ನನ್ನೊಂದಿಗೆ ಹಂಚಿಕೊಳ್ಳಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.