ನವದೆಹಲಿ: ಸಿಂಗಪುರಕ್ಕೆ ಅಕ್ಕಿ ರಫ್ತು ಮಾಡಲು ಕೇಂದ್ರ ಸರ್ಕಾರ ನಿರ್ಧರಿಸಿದ್ದು, ಜುಲೈನಲ್ಲಿ ಧಾನ್ಯದ ರಫ್ತಿನ ಮೇಲೆ ವಿಧಿಸಿದ್ದ ನಿಷೇಧವನ್ನು ಸಡಿಲಿಸಿದೆ.
ದೇಶೀಯ ಮಾರುಕಟ್ಟೆಯಲ್ಲಿ ಅಕ್ಕಿಯ ಬೆಲೆ ಏರಿಕೆ ಕಂಡಬಂದಿದ್ದರಿಂದ ಜುಲೈ 20ರಂದು ಬಾಸ್ಮತಿ ಮತ್ತು ಕುಚ್ಚಿಲಕ್ಕಿ ಹೊರತುಪಡಿಸಿ ಇತರ ಬಗೆಯ ಅಕ್ಕಿ ರಫ್ತನ್ನು ನಿಷೇಧಿಸಿ ಸರ್ಕಾರ ಆದೇಶ ಹೊರಡಿಸಿತ್ತು.
‘ಧಾನ್ಯದ ರಫ್ತಿನ ಮೇಲಿನ ನಿಷೇಧವನ್ನು ಸಡಿಲಿಸಿ ಭಾರತದಿಂದ ಕನಿಷ್ಠ 1,10,000 ಟನ್ ಅಕ್ಕಿಯನ್ನು ಆಮದು ಮಾಡಿಕೊಳ್ಳಲು ಅವಕಾಶ ನೀಡುವಂತೆ ಸಿಂಗಾಪುರ ಕೇಂದ್ರಕ್ಕೆ ಮನವಿ ಮಾಡಿತ್ತು. ಸಿಂಗಪುರ ಮತ್ತು ಭಾರತ ನಡುವೆ ವಿಶೇಷ ಬಾಂಧವ್ಯವಿದೆ. ಸಿಂಗಪುರದ ಆಹಾರ ಭದ್ರತೆ ಅಗತ್ಯತೆಗಳನ್ನು ಪೂರೈಸಲು ಭಾರತದಿಂದ ಅಕ್ಕಿ ರಫ್ತು ಮಾಡಲು ಸರ್ಕಾರ ನಿರ್ಧರಿಸಿದೆ’ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ (ಎಂಇಎ) ವಕ್ತಾರ ಅರಿಂದಮ್ ಬಾಗ್ಚಿ ಹೇಳಿದ್ದಾರೆ.
ಸಿಂಗಪುರ ಸೇರಿದಂತೆ ಫಿಲಿಪ್ಪೀನ್ಸ್ ಮತ್ತು ಇಂಡೋನೇಷ್ಯಾ ಕೂಡ ಅಕ್ಕಿ ರಫ್ತು ನಿಷೇಧದಿಂದ ವಿನಾಯಿತಿ ನೀಡಿ ರಫ್ತಿಗೆ ಅವಕಾಶ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿವೆ ಎಂದು ತಿಳಿದುಬಂದಿದೆ.
ಬಾಸ್ಮತಿ ಹೊರತುಪಡಿಸಿದ ಅಕ್ಕಿಯ ಪಾಲು ದೇಶದಿಂದ ರಫ್ತಾಗುವ ಅಕ್ಕಿಯಲ್ಲಿ ಶೇಕಡ 25ರಷ್ಟಿದೆ. ಭಾರತವು ಥೈಲ್ಯಾಂಡ್, ಇಟಲಿ, ಸ್ಪೇನ್, ಶ್ರೀಲಂಕಾ ಮತ್ತು ಅಮೆರಿಕಕ್ಕೆ ಅಕ್ಕಿಯನ್ನು ಹೆಚ್ಚಿನ ಪ್ರಮಾಣದಲ್ಲಿ ರವಾನಿಸುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.