ನವದೆಹಲಿ: ಭಾರತೀಯ ನೌಕಾಪಡೆಯ ನಿವೃತ್ತ ಅಧಿಕಾರಿ ಕುಲಭೂಷಣ್ ಜಾಧವ್ ಅವರನ್ನು ತಕ್ಷಣವೇ ಬಿಡುಗಡೆ ಮಾಡಬೇಕು ಎಂದು ಪಾಕಿಸ್ತಾನವನ್ನು ಭಾರತ ಒತ್ತಾಯಿಸಿದೆ. ಜಾಧವ್‌ಗೆ ವಿಧಿಸಲಾಗಿರುವ ಗಲ್ಲು ಶಿಕ್ಷೆಯನ್ನು ಪುನರ್ ಪರಿಶೀಲಿಸುವಂತೆ ಅಂತರರಾಷ್ಟ್ರೀಯ ನ್ಯಾಯಾಲಯ ಬುಧವಾರ ತೀರ್ಪು ನೀಡಿದೆ. ಅದರ ಮರುದಿನ ಭಾರತ ಈ ಒತ್ತಾಯ ಮಾಡಿದೆ. ಜಾಧವ್ ಅವರನ್ನು ಭಾರತಕ್ಕೆ ಕರೆತರಲು ತೀವ್ರವಾದ ಪ್ರಯತ್ನವನ್ನು ಮುಂದುವರಿಸಲಾಗುವುದು ಎಂದೂ ತಿಳಿಸಿದೆ.
ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರು ಸಂಸತ್ತಿನ ಎರಡೂ ಸದನಗಳಲ್ಲಿ ಅಂತರರಾಷ್ಟ್ರೀಯ ನ್ಯಾಯಾಲಯದ ತೀರ್ಪಿನ ಬಗ್ಗೆ ಗುರುವಾರ ಹೇಳಿಕೆ ನೀಡಿದ್ದಾರೆ. ‘ಜಾಧವ್ ಅವರ ಜತೆಗೆ ಮಾತುಕತೆ ನಡೆಸುವ, ಅವರನ್ನು ಭೇಟಿಯಾಗುವ ಮತ್ತು ಅವರಿಗೆ ಅಗತ್ಯ ಕಾನೂನು ನೆರವು ಒದಗಿಸುವ ಅವಕಾಶವನ್ನು ಪಾಕಿಸ್ತಾನ ನಿರಾಕರಿಸಿತ್ತು ಎಂಬುದು ಸಾಬೀತಾಗಿದೆ. ಜಾಧವ್ ಅವರ ವಿರುದ್ಧದ ಆರೋಪಗಳು ಸುಳ್ಳು ಎಂಬುದು ಸ್ಪಷ್ಟವಾಗಿದೆ. ಅವರಿಗೆ ಕಾನೂನು ನೆರವು ನೀಡದೆ ಬಲವಂತವಾಗಿ ಸೆರೆಯಲ್ಲಿ ಇರಿಸುವುದರಿಂದ ವಾಸ್ತವ ಬದಲಾಗದು’ ಎಂದು ಅವರು ಪ್ರತಿಪಾದಿಸಿದರು.
‘ಜಾಧವ್ ಅವರನ್ನು ಬಿಡುಗಡೆ ಮಾಡಿ, ಭಾರತಕ್ಕೆ ಹಸ್ತಾಂತರಿಸಿ ಎಂದು ಪಾಕಿಸ್ತಾನವನ್ನು ಮತ್ತೊಮ್ಮೆ ಕೇಳಿಕೊಳ್ಳುತ್ತೇವೆ’ ಎಂದು ಅವರು ಹೇಳಿದರು.
ಗೂಢಚರ್ಯೆ ಮತ್ತು ಭಯೋತ್ಪಾದನೆಯ ಆರೋಪವನ್ನು ಜಾಧವ್ ಅವರ ಮೇಲೆ ಹೊರಿಸಿದ್ದ ಪಾಕಿಸ್ತಾನ 2017ರ ಏಪ್ರಿಲ್‌ನಲ್ಲಿ ಅವರಿಗೆ ಮರಣ ದಂಡನೆ ವಿಧಿಸಿತ್ತು.
ಭಾರತದ ಪರ ವಕೀಲರ ತಂಡದ ನಾಯಕರಾಗಿದ್ದ ಹರೀಶ್ ಸಾಳ್ವೆ ಅವರ ಪ್ರಯತ್ನವನ್ನು ಜೈಶಂಕರ್ ಶ್ಲಾಘಿಸಿದರು. ಇಂತಹ ಕಷ್ಟಕರ ಸನ್ನಿವೇಶದಲ್ಲಿ ಎದೆಗುಂದದೆ ನಿಂತಿರುವ ಜಾಧವ್ ಕುಟುಂಬದ ಧೈರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.
‘ಪಾಲಿಸುವುದು ಕಡ್ಡಾಯ’: ಅಂತರರಾಷ್ಟ್ರೀಯ ನ್ಯಾಯಾಲಯದ ಆದೇಶ ಅಂತಿಮ. ಇದನ್ನು ಪಾಕಿಸ್ತಾನ ಪಾಲಿಸಲೇಬೇಕು ಮತ್ತು ಮೇಲ್ಮನವಿಗೆ ಅವಕಾಶ ಇಲ್ಲ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ರವೀಶ್ ಕುಮಾರ್ ಹೇಳಿದ್ದಾರೆ. ಈ ಆದೇಶದ ಮೂಲಕ ಜಾಧವ್ ಪ್ರಕರಣದಲ್ಲಿ ಭಾರತದ ನಿಲುವಿಗೆ ಮನ್ನಣೆ ದೊರೆತಿದೆ ಎಂದು ಅವರು ತಿಳಿಸಿದ್ದಾರೆ.
ಕಾನೂನು ಪ್ರಕಾರ ಕ್ರಮ: ಇಮ್ರಾನ್
ಇಸ್ಲಾಮಾಬಾದ್: ಜಾಧವ್ ಪ್ರಕರಣದಲ್ಲಿ ಕಾನೂನು ಪ್ರಕಾರ ನಡೆದುಕೊಳ್ಳಲಾಗುವುದು ಎಂದು ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಹೇಳಿದ್ದಾರೆ.
‘ಜಾಧವ್ ಅವರನ್ನು ಖುಲಾಸೆಗೊಳಿಸಿ ಭಾರತಕ್ಕೆ ಕಳುಹಿಸುವಂತೆ ಅಂತರರಾಷ್ಟ್ರೀಯ ನ್ಯಾಯಾಲಯವು ಹೇಳಿಲ್ಲ ಎಂಬುದರ ಬಗ್ಗೆ ಮೆಚ್ಚುಗೆ ಇದೆ. ಪಾಕಿಸ್ತಾನದ ಜನರ ವಿರುದ್ಧ ಜಾಧವ್ ಅಪರಾಧ ಎಸಗಿದ್ದಾರೆ. ಕಾನೂನು ಪ್ರಕಾರ ಪಾಕಿಸ್ತಾನ ನಡೆದುಕೊಳ್ಳಲಿದೆ’ ಎಂದು ಇಮ್ರಾನ್ ಟ್ವೀಟ್ ಮಾಡಿದ್ದಾರೆ.
ಅಂತರರಾಷ್ಟ್ರೀಯ ನ್ಯಾಯಾಲಯದ ತೀರ್ಪು ಪಾಕಿಸ್ತಾನದ ಪರವಾಗಿದೆ. ಜಾಧವ್ ಅವರನ್ನು ಖುಲಾಸೆ ಮಾಡಬೇಕು ಎಂಬುದು ಭಾರತದ ವಾದವಾಗಿತ್ತು. ಆದರೆ, ನ್ಯಾಯಾಲಯ ಅದನ್ನು ಮಾನ್ಯ ಮಾಡಿಲ್ಲ ಎಂದು ಆ ದೇಶದ ವಿದೇಶಾಂಗ ಸಚಿವ ಶಾ ಮೆಹಮೂದ್ ಖುರೇಷಿ ಹೇಳಿದ್ದಾರೆ.
‘ಭಾರತದ ಮಟ್ಟಿಗೆ ಇದು ಇನ್ನೊಂದು ಫೆಬ್ರುವರಿ 27. ಅವರೆಲ್ಲವರೂ ಆಶ್ಚರ್ಯಗೊಂಡಿದ್ದಾರೆ. ತಾವು ಹೊಂದಿರುವ ರಾಜಕೀಯ ಶಕ್ತಿಯಿಂದ ನ್ಯಾಯಾಂಗವನ್ನು ಕೂಡ ತಿರುಚಬಹುದು ಎಂದು ಅವರು ಭಾವಿಸಿದ್ದರು. ಆದರೆ ಅದು ಆಗಿಲ್ಲ’ ಎಂದು ಪಾಕಿಸ್ತಾನ ಸೇನೆಯ ವಕ್ತಾರ ಮೇ.ಜ. ಆಸಿಫ್ ಗಫೂರ್ ಹೇಳಿದ್ದಾರೆ.
ಬಾಲಾಕೋಟ್‌ನಲ್ಲಿನ ಉಗ್ರರ ಶಿಬಿರಗಳ ಮೇಲೆ ಭಾರತದ ವಾಯುದಾಳಿಯ ಬಳಿಕ ಭಾರತದ ವಾಯುಪಡೆಯ ವಿಮಾನವೊಂದನ್ನು ಹೊಡೆದುರುಳಿಸಿ ಪೈಲಟ್‌ನನ್ನು ವಶಕ್ಕೆ ಪಡೆದ ಪ್ರಕರಣವನ್ನು ಅವರು ಇಲ್ಲಿ ಉಲ್ಲೇಖಿಸಿದ್ದಾರೆ.
‘ಮರಣ ದಂಡನೆಯ ಪರಿಕಲ್ಪನೆಯೇ ಇಲ್ಲದ ಅಂತರರಾಷ್ಟ್ರೀಯ ನ್ಯಾಯಾಲಯವು ನಮ್ಮ ತೀರ್ಪನ್ನು ಎತ್ತಿಹಿಡಿದಿದೆ ಎಂಬುದೇ ಪಾಕಿಸ್ತಾನದ ದೊಡ್ಡ ಗೆಲುವು’ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಮತ್ತೆ ದೂರು ಕೊಡುವ ಎಚ್ಚರಿಕೆ
ಪಾಕಿಸ್ತಾನದ ಎಲ್ಲ ನಡೆಗಳು ಮೇಲೆ ನಿಗಾ ಇರಿಸಲಾಗಿದೆ. ಜಾಧವ್ ಪ್ರಕರಣದಲ್ಲಿ ಅಂತರರಾಷ್ಟ್ರೀಯ ನ್ಯಾಯಾಲಯದ ಆದೇಶ ಜಾರಿಯ ಹೆಸರಿನಲ್ಲಿ ಯಾವುದೇ ‘ಪ್ರಹಸನ ಪ್ರಯತ್ನ’ ನಡೆದರೆ ಅದನ್ನು ಒಪ್ಪಿಕೊಳ್ಳಲಾಗದು. ಮತ್ತೆ ಅಂತರರಾಷ್ಟ್ರೀಯ ನ್ಯಾಯಾಲಯಕ್ಕೆ ಅಥವಾ ವಿಶ್ವಸಂಸ್ಥೆಯ ಭದ್ರತಾ ಮಂಡಳಿಗೆ ದೂರು ನೀಡಬೇಕಾಗುತ್ತದೆ ಎಂದು ಭಾರತ ಎಚ್ಚರಿಕೆ ನೀಡಿದೆ.
‘ಜಾಧವ್ ಅವರಿಗೆ ನ್ಯಾಯ ಸಿಗುವಂತೆ ಮತ್ತು ನ್ಯಾಯಯುತ ವಿಚಾರಣೆ ನಡೆಯುವಂತೆ ನೋಡಿಕೊಳ್ಳಲು ನಮಗೆ ಸಿಕ್ಕ ಉತ್ತಮ ಅವಕಾಶ ಇದು’ ಎಂದು ಅಂತರರಾಷ್ಟ್ರೀಯ ನ್ಯಾಯಾಲಯದಲ್ಲಿ ಜಾಧವ್ ಪರ ವಾದಿಸಿದ್ದ ವಕೀಲರ ತಂಡದ ಮುಖ್ಯಸ್ಥ ಹರೀಶ್ ಸಾಳ್ವೆ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.