ನವದೆಹಲಿ: ‘ಪ್ರಧಾನಿಯಾಗಿದ್ದಾಗ ಮಾಧ್ಯಮಗಳ ಜತೆ ಮಾತನಾಡಲು ನಾನು ಎಂದಿಗೂ ಹೆದರಿ, ಹಿಂಜರಿದಿರಲಿಲ್ಲ’ ಎಂದು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಹೇಳಿದ್ದಾರೆ.
‘ಪ್ರಧಾನಿಯಾಗಿದ್ದ ಹತ್ತು ವರ್ಷ ಅವಧಿಯಲ್ಲಿ ಮಾಧ್ಯಮಗಳ ಜತೆ ಮಾತನಾಡಲು ಭಯ ಇರಲಿಲ್ಲ. ಆಗಾಗ ಪತ್ರಕರ್ತರ ಜತೆ ಮುಕ್ತವಾಗಿ ಮಾತನಾಡುತ್ತಿದ್ದೆ’ ಎಂದು ಸಿಂಗ್, ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪರೋಕ್ಷ ತಿರುಗೇಟು ನೀಡಿದ್ದಾರೆ.
‘ನಾನು ಆಕಸ್ಮಿಕ ಪ್ರಧಾನಿ ಮಾತ್ರವಲ್ಲ, ಹಣಕಾಸು ಸಚಿವನಾದದ್ದು ಕೂಡ ಅಷ್ಟೇ ಆಕಸ್ಮಿಕ’ ಎಂಬ ಕುತೂಹಲಕಾರಿ ವಿಷಯವನ್ನು ಕೂಡ ಅವರು ಇದೇ ವೇಳೆ ಬಹಿರಂಗಪಡಿಸಿದರು.
‘1991ರಲ್ಲಿ ಹಣಕಾಸು ಸಚಿವರಾಗುವಂತೆ ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಮಾಜಿ ಗವರ್ನರ್ ಐ.ಜಿ. ಪಟೇಲ್ ಅವರಿಗೆ ಮೊದಲು ಆಹ್ವಾನ ನೀಡಲಾಗಿತ್ತು. ಅವರು ನಿರಾಕರಿಸಿದ ನಂತರ ಆ ಹುದ್ದೆ ನನ್ನ ಪಾಲಾಯಿತು’ ಎಂದು ಸಿಂಗ್ ನಸುನಕ್ಕರು. ಆರು ಸಂಪುಟಗಳಲ್ಲಿ ಪ್ರಕಟವಾಗಿರುವ ತಮ್ಮ ‘ಚೇಂಜಿಂಗ್ ಇಂಡಿಯಾ’ ಪುಸ್ತಕ ಸರಣಿ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು. ತಾವು ಪ್ರಧಾನಿಯಾಗಿದ್ದ ಅವಧಿಯಲ್ಲಿ ನಡೆದ ಐತಿಹಾಸಿಕ ಘಟನಾವಳಿಗಳ ನೆನಪುಗಳನ್ನು ಮೆಲುಕು ಹಾಕುವ ಜತೆಗೆ ವಿರೋಧಿಗಳ ಟೀಕೆಗಳಿಗೆ ಉತ್ತರಿಸಲು ವೇದಿಕೆಯನ್ನು ಬಳಸಿಕೊಂಡರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.