ADVERTISEMENT

ತುರ್ತು ಪರಿಸ್ಥಿತಿಗೆ 50 ವರ್ಷ: ಸ್ವತಂತ್ರ ಭಾರತದ ಇತಿಹಾಸದಲ್ಲಿ ಕರಾಳವಾದ ಅಧ್ಯಾಯ

1975ರ ಜೂನ್‌ 25ರಂದು ಅಂದಿನ ರಾಷ್ಟ್ರಪತಿ ಫಕ್ರುದ್ದೀನ್‌ ಅಲಿ ಅಹಮದ್‌ ಅವರು ದೇಶದಲ್ಲಿ ತುರ್ತು ಪರಿಸ್ಥಿತಿ ಹೇರಿದ್ದರು.

​ಪ್ರಜಾವಾಣಿ ವಾರ್ತೆ
Published 24 ಜೂನ್ 2024, 20:13 IST
Last Updated 24 ಜೂನ್ 2024, 20:13 IST
ಇಂದಿರಾ ಗಾಂಧಿ
ಇಂದಿರಾ ಗಾಂಧಿ   

‘ತುರ್ತು ಪರಿಸ್ಥಿತಿ’ಯು ಸ್ವತಂತ್ರ ಭಾರತದ ಇತಿಹಾಸದಲ್ಲೊಂದು ಕರಾಳವಾದ ಅಧ್ಯಾಯ. 1975ರ ಜೂನ್‌ 25ರಂದು ಅಂದಿನ ರಾಷ್ಟ್ರಪತಿ ಫಕ್ರುದ್ದೀನ್‌ ಅಲಿ ಅಹಮದ್‌ ಅವರು ದೇಶದಲ್ಲಿ ತುರ್ತು ಪರಿಸ್ಥಿತಿ ಹೇರಿದ್ದರು. ಅಂದಿನ ಪ್ರಧಾನಿ ಇಂದಿರಾ ಗಾಂಧಿ ಅವರ ಸಲಹೆಯ ಆಧಾರದಲ್ಲಿ ರಾಷ್ಟ್ರಪತಿ ಅಂತಹ ಕ್ರಮ ತೆಗೆದುಕೊಂಡಿದ್ದರು. ತುರ್ತು ಪರಿಸ್ಥಿತಿ ಜಾರಿಯಾಗಿ ಈ ಜೂನ್‌ 25ಕ್ಕೆ 49 ವರ್ಷ ತುಂಬಲಿದ್ದು, 50ನೇ ವರ್ಷ ಆರಂಭವಾಗಲಿದೆ...

––––––

* ಚುನಾವಣೆಯಲ್ಲಿ ಅಂದಿನ ಪ್ರಧಾನಿ ಇಂದಿರಾ ಗಾಂಧಿ ಅವರ ಆಯ್ಕೆಯನ್ನು ರದ್ದುಗೊಳಿಸಿ ಅಲಹಾಬಾದ್‌ ಹೈಕೋರ್ಟ್‌ ನೀಡಿದ್ದ ಆದೇಶವನ್ನು, 1975ರ ಜೂನ್‌ 24ರಂದು ಸುಪ್ರೀಂ ಕೋರ್ಟ್‌ ಎತ್ತಿಹಿಡಿದಿತ್ತು. ಅದರ ಮರುದಿನವೇ ರಾಷ್ಟ್ರಪತಿ ತುರ್ತು ಪರಿಸ್ಥಿತಿ ಘೋಷಿಸಿದ್ದರು

ADVERTISEMENT

* ಆಂತರಿಕ ಕ್ಷೋಭೆ ಮತ್ತು ಬಾಹ್ಯ ದಾಳಿಯ ಕಾರಣದಿಂದ ದೇಶದ ಭದ್ರತೆಗೆ ಅಪಾಯ ಒದಗಿದಾಗ ತುರ್ತು ಪರಿಸ್ಥಿತಿ ಘೋಷಿಸಲು ಸಂವಿಧಾನವು ಅವಕಾಶ ಮಾಡಿಕೊಡುತ್ತದೆ. 1975ರ ಜೂನ್‌ 25ರಂದು ಆಂತರಿಕ ಕ್ಷೋಭೆಯ ಕಾರಣ ನೀಡಿ, ಸಂವಿಧಾನದ 352(1)ನೇ ವಿಧಿಯ ಅಡಿಯಲ್ಲಿ ತುರ್ತು ಪರಿಸ್ಥಿತಿ ಘೋಷಿಸಲಾಗಿತ್ತು. ಆದರೆ, ಅಂದಿನ ಸರ್ಕಾರದ ಈ ಕ್ರಮಕ್ಕೆ ದೇಶದಾದ್ಯಂತ ತೀವ್ರ ಟೀಕೆಗೆ ಗುರಿಯಾಗಿತ್ತು

* ತುರ್ತು ಪರಿಸ್ಥಿತಿ ಜಾರಿಯಲ್ಲಿ ಇದ್ದಾಗ, ದೇಶದ ನಾಗರಿಕರ ಕೆಲವು ಮೂಲಭೂತ ಹಕ್ಕುಗಳು ಅಮಾನತಿಲ್ಲಿರುತ್ತವೆ. ಈ ತುರ್ತು ಪರಿಸ್ಥಿತಿ ಜಾರಿಯಲ್ಲಿದ್ದಾಗ ಪ್ರಧಾನವಾಗಿ ಹೇಬಿಯಸ್‌ ಕಾರ್ಪಸ್‌ ಅನ್ನು ಅಮಾನತಿನಲ್ಲಿ ಇರಿಸಲಾಗಿತ್ತು. ಅಲ್ಲದೆ, ಹಲವು ಮೂಲಭೂತ ಹಕ್ಕುಗಳನ್ನೂ ಮೊಟಕುಗೊಳಿಸಲಾಗಿತ್ತು

* ಆ ಸಂದರ್ಭದ ಮತ್ತೊಂದು ಪ್ರಮುಖ ಘಟನೆ ಎಂದರೆ ‘ಮಾಧ್ಯಮ ಸೆನ್ಸರ್‌ಶಿಪ್‌’. ಮಾಧ್ಯಮಗಳಿಗೆಂದೇ ಕೇಂದ್ರ ಸರ್ಕಾರವು ಒಂದು ಮಾರ್ಗಸೂಚಿಯನ್ನು ಜಾರಿ ಮಾಡಿತ್ತು. ಪ್ರಕಟಣೆಗೂ ಮುನ್ನ ಪತ್ರಿಕೆಗಳು, ಸರ್ಕಾರದ ‘ಪತ್ರಿಕಾ ಸಲಹೆಗಾರ’ರಿಂದ ಅನುಮತಿ ಪಡೆಯಬೇಕಿತ್ತು

* ತುರ್ತು ಪರಿಸ್ಥಿತಿಯ ಅವಧಿಯಲ್ಲಿ ಅಂದಿನ ವಿರೋಧ ಪಕ್ಷಗಳ ನಾಯಕರನ್ನು, ಸರ್ಕಾರದ ಟೀಕಾಕಾರನ್ನು ಸೆರೆಮನೆಗೆ ತಳ್ಳಲಾಗಿತ್ತು. ಅಂತಹವರು ಹಲವು ತಿಂಗಳು ಸೆರೆಮನೆವಾಸ ಅನುಭವಿಸಬೇಕಾಯಿತು. ತುರ್ತು ಪರಿಸ್ಥಿತಿಯನ್ನು ವಿರೋಧಿಸಿದ ಮತ್ತು ಅದರ ವಿರುದ್ಧ ಪ್ರತಿಭಟಿಸಲು ಯತ್ನಿಸಿದ ನಾಗರಿಕರು, ಸಾಮಾಜಿಕ ಕಾರ್ಯಕರ್ತರು ಮತ್ತು ಕೆಲ ಪತ್ರಕರ್ತರನ್ನೂ ಜೈಲಿಗೆ ಹಾಕಲಾಗಿತ್ತು

1977ರ ಮಾರ್ಚ್‌ 21 ತುರ್ತು ಪರಿಸ್ಥಿತಿ ಹಿಂಪಡೆದ ದಿನ
‘...ತೆವಳಿದ ಮಾಧ್ಯಮ’
ಮಾಧ್ಯಮ ಸೆನ್ಸರ್‌ಶಿಪ್‌ ಕ್ರಮವನ್ನು ಆರಂಭದಲ್ಲಿ ಬಹುತೇಕ ಪತ್ರಿಕೆಗಳು ಕಟುವಾಗಿ ಟೀಕಿಸಿದವು. ಆದರೆ ನಂತರದ ದಿನಗಳಲ್ಲಿ ಅದನ್ನು ಪಾಲಿಸಿದವು ಎನ್ನಲಾಗುತ್ತದೆ. ಅಂದಿನ ವಿರೋಧ ಪಕ್ಷಗಳ ನಾಯಕರಲ್ಲಿ ಪ್ರಮುಖರಾಗಿದ್ದ ಎಲ್‌.ಕೆ.ಆಡ್ವಾಣಿ ಮತ್ತು ಅಟಲ್‌ ಬಿಹಾರಿ ವಾಜಪೇಯಿ ಅವರು ಇದನ್ನು ವಿಡಂಬನೆ ಮಾಡಿದ್ದರು. ಈ ಇಬ್ಬರೂ ನಾಯಕರು, ‘ಇಂದಿರಾ ಗಾಂಧಿ ಅವರು ಮಾಧ್ಯಮಗಳಿಗೆ ಬಾಗಲು ಹೇಳಿದ್ದರು. ಆದರೆ, ಅವು ತೆವಳಿದವು’ ಎಂದಿದ್ದರು.
ತಿದ್ದುಪಡಿ
ತುರ್ತು ಪರಿಸ್ಥಿತಿ ಅಂತ್ಯವಾದ ನಂತರ ನಡೆದ ಚುನಾವಣೆಯಲ್ಲಿ, ಸರ್ಕಾರ ಬದಲಾಗಿತ್ತು. 1978ರಲ್ಲಿ ಸಂವಿಧಾನದ 352ನೇ ವಿಧಿಗೆ ಕೆಲ ತಿದ್ದುಪಡಿ ತರಲಾಯಿತು. ತಿದ್ದುಪಡಿಗೂ ಮುನ್ನ 352ನೇ ವಿಧಿಯಲ್ಲಿ, ಆಂತರಿಕ ಕ್ಷೋಭೆಯ ಕಾರಣಕ್ಕೆ ತುರ್ತು ಪರಿಸ್ಥಿತಿ ಜಾರಿ ಮಾಡಬಹುದು ಎಂದು ಹೇಳಲಾಗಿತ್ತು. ತಿದ್ದುಪಡಿಯ ವೇಳೆ ‘ಆಂತರಿಕ ಕ್ಷೋಭೆ’ ಎಂಬುದನ್ನು ತೆಗೆದು ಹಾಕಲಾಯಿತು ಮತ್ತು ಅದರ ಬದಲಿಗೆ ‘ಸಶಸ್ತ್ರ ಬಂಡಾಯ’ ಎಂಬುದನ್ನು ಸೇರಿಸಲಾಯಿತು.
ಕೈ ವಿರುದ್ಧ ವಾಗ್ದಾಳಿ : ದೇಶದ ಪ್ರಜಾಪ್ರಭುತ್ವ ಸಂಪ್ರದಾಯಗಳಲ್ಲಿ ನಂಬಿಕೆ ಇರುವವರಿಗೆ ಜೂನ್ 25 ಮರೆಯಲಾಗದ ದಿನ. 50 ವರ್ಷಗಳ ಹಿಂದೆ ಇದೇ ದಿನ ಸಂವಿಧಾನ ತಿರಸ್ಕರಿಸಿ ತುರ್ತು ಪರಿಸ್ಥಿತಿ ಹೇರಲಾಯಿತು. ಸಂವಿಧಾನವನ್ನು ಛಿದ್ರಗೊಳಿಸಲಾಯಿತು, ದೇಶವನ್ನು ಸೆರೆಮನೆಯಾಗಿ ಪರಿವರ್ತಿಸಲಾಯಿತು ಹಾಗೂ ಪ್ರಜಾಪ್ರಭುತ್ವವನ್ನು ಹೇಗೆ ಸಂಪೂರ್ಣವಾಗಿ ನಿಗ್ರಹಿಸಲಾಯಿತು ಎಂಬುದನ್ನು ಹೊಸ ಪೀಳಿಗೆ ಎಂದಿಗೂ ಮರೆಯಬಾರದು. ಇದೊಂದು ಪ್ರಜಾಪ್ರಭುತ್ವಕ್ಕೆ ಕಪ್ಪು ಚುಕ್ಕೆ. ಇಂತಹ ವಿಕೃತಿ ಮತ್ತೆ ಸಂಭವಿಸಲು ಅವಕಾಶ ನೀಡುವುದಿಲ್ಲ ಎಂದು ದೇಶವಾಸಿಗಳು ಸಂಕಲ್ಪ ಮಾಡಬೇಕು.
ನರೇಂದ್ರ ಮೋದಿ, ಪ್ರಧಾನಿ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.