ನವದೆಹಲಿ: ಕೋವಿಡ್–19 ಸೋಂಕು ಹರಡುವಿಕೆ ತಡೆಯುವ ನಿಟ್ಟಿನಲ್ಲಿ ಲಾಕ್‌ಡೌನ್ ವಿಧಿಸಿದ್ದ ಸಂದರ್ಭದಲ್ಲಿ ವಿದೇಶಗಳಿಂದ, ವಿಶೇಷವಾಗಿ ಚೀನಾ ಹಾಗೂ ಪಾಕಿಸ್ತಾನದಿಂದ ಭಾರತದ ಮೇಲೆ ಸೈಬರ್ ದಾಳಿ ಯತ್ನ ನಡೆದಿತ್ತು ಎಂದು ಕೇಂದ್ರ ಸರ್ಕಾರ ಹೇಳಿದೆ.
ಮಾಹಿತಿ ತಂತ್ರಜ್ಞಾನ ವಿಷಯದ ಮೇಲಿನ ಸಂಸದೀಯ ಸ್ಥಾಯಿ ಸಮಿತಿಯ 24ನೇ ವರದಿಯಲ್ಲಿ ಈ ಮಾಹಿತಿ ಉಲ್ಲೇಖಿಸಲಾಗಿದ್ದು, ಲೋಕಸಭೆಯಲ್ಲಿ ಮಂಡಿಸಲಾಗಿದೆ.
ಚೀನಾ, ಪಾಕಿಸ್ತಾನ ಸೇರಿದಂತೆ ವಿದೇಶಗಳಿಂದ ಸೈಬರ್ ದಾಳಿ ಯತ್ನ ಹೆಚ್ಚಿವೆ ಎಂದು ಮಾಹಿತಿ ಮತ್ತು ತಂತ್ರಜ್ಞಾನ ಸಚಿವಾಲಯ ತಿಳಿಸಿರುವುದನ್ನೂ ವರದಿ ಒಳಗೊಂಡಿದೆ.
ಸಾಂಕ್ರಾಮಿಕಕ್ಕೆ ಸಂಬಂಧಿಸಿದಂತೆ ಹೊಸ ಅಪ್ಲಿಕೇಶನ್‌ಗಳನ್ನು ಮತ್ತು ಲಾಕ್‌ಡೌನ್‌ಗೆ ಸಂಬಂಧಿಸಿದ ಸೇವೆಗಳನ್ನು ನೀಡುವ ವೇಳೆ ಆ್ಯಂಟಿವೈರಸ್, ಸೈಬರ್ ದಾಳಿ ಸಾಧ್ಯತೆಯ ಮೌಲ್ಯಮಾಪನಕ್ಕೆ ಹೆಚ್ಚಿನ ಬೇಡಿಕೆ ಇತ್ತು ಎಂದು ಸಚಿವಾಲಯದ ಮಾಹಿತಿ ಉಲ್ಲೇಖಿಸಿ ವರದಿ ತಿಳಿಸಿದೆ.
ದಾಳಿ ಯತ್ನಗಳ ಮೇಲೆ ನಿಗಾ ಇಡಲು ಮತ್ತು ಅವುಗಳನ್ನು ವಿಫಲಗೊಳಿಸಲು ಹೆಚ್ಚುವರಿ ಭದ್ರತಾ ಕ್ರಮಗಳನ್ನು ಅನುಸರಿಸಲಾಗಿದೆ. ಹೆಚ್ಚುವರಿ ಸಿಬ್ಬಂದಿಯನ್ನು ಪಾಳಿಗಳಲ್ಲಿ ನಿಯೋಜಿಸಲಾಗಿದೆ. ವಿಶ್ವಾಸಾರ್ಹ ನೆಟ್‌ವರ್ಕ್‌ಗಳು (ವಿಪಿಎನ್) ಬಳಸಿ ಭದ್ರತಾ ಲೆಕ್ಕಪರಿಶೋಧನೆ ನಡೆಸಲಾಗಿದೆ ಎಂದು ಸಚಿವಾಲಯ ತಿಳಿಸಿದೆ.
‘ಮನೆಯಿಂದಲೇ ಕಾರ್ಯನಿರ್ವಹಿಸುತ್ತಿರುವ ಸಂದರ್ಭದಲ್ಲಿ ‘ಎಂಡ್‌ಪಾಯಿಂಟ್ ಸೆಕ್ಯೂರಿಟಿ’ ಒದಗಿಸಲು ಕ್ರಮ ಕೈಗೊಳ್ಳಲಾಗಿತ್ತು. ಆರೋಗ್ಯ ಸಚಿವಾಲಯದ ಮಾರ್ಗಸೂಚಿಗಳಿಗೆ ಅನುಗುಣವಾಗಿ ರಾಷ್ಟ್ರೀಯ ಮಾಹಿತಿ ಕೇಂದ್ರವು (ಎನ್‌ಐಸಿ) ಮಾರ್ಗಸೂಚಿಗಳು ಮತ್ತು ಯೋಜನೆಗಳನ್ನು ಹೊರತಂದಿತ್ತು ಎಂದೂ ಸಚಿವಾಲಯ ಹೇಳಿದೆ.
ಚೀನಾದ ಹ್ಯಾಕರ್‌ಗಳು ಭಾರತದ ಪವರ್ ಗ್ರಿಡ್ (ವಿದ್ಯುತ್ ಜಾಲ) ಅನ್ನು ಗುರಿಯಾರಿಸಿ ಸೈಬರ್ ದಾಳಿಗೆ ಯತ್ನಿಸಿದ್ದರು ಎಂದು ಅಮೆರಿಕ ಮೂಲದ ಖಾಸಗಿ ಸೈಬರ್ ಸೆಕ್ಯುರಿಟಿ ಸಂಸ್ಥೆಯೊಂದು ಇತ್ತೀಚೆಗೆ ತಿಳಿಸಿತ್ತು. ಕಳೆದ ವರ್ಷ ಜೂನ್‌ನಲ್ಲಿ ಪೂರ್ವ ಲಡಾಖ್‌ನ ಗಾಲ್ವನ್ ಕಣಿವೆಯಲ್ಲಿ ಭಾರತ–ಚೀನಾ ಯೋಧರ ಮಧ್ಯೆ ನಡೆದ ಸಂಘರ್ಷದ ಬಳಿಕ ಈ ದಾಳಿ ಯತ್ನ ನಡೆದಿತ್ತು ಎನ್ನಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.